ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಿರು ಖರೀದಿಗೆ ಹೊರಗಿನ ಕಂಪನಿಗಳಿಗೂ ಅವಕಾಶ

ಸುಪ್ರೀಂ ಕೊರ್ಟ್‌ ತೀರ್ಪು ಬದಿಗೊತ್ತಿದ ಮಾನಿಟರಿಂಗ್‌ ಸಮಿತಿ– ಕೆಐಎಸ್‌ಎಂಎ ಆರೋಪ
Last Updated 24 ಸೆಪ್ಟೆಂಬರ್ 2021, 6:21 IST
ಅಕ್ಷರ ಗಾತ್ರ

ಬಳ್ಳಾರಿ: ‘ರಾಜ್ಯದ ಗಣಿಗಳಲ್ಲಿ ಹೊರತೆಗೆಯುತ್ತಿರುವ ಅದಿರಿನ ಇ–ಹರಾಜಿನಲ್ಲಿ ಕರ್ನಾಟಕ ಮತ್ತು ನೆರೆಹೊರೆಯ ರಾಜ್ಯಗಳನ್ನು ಹೊರತುಪಡಿಸಿ, ಬೇರೆ ರಾಜ್ಯಗಳ ಕೆಲವು ಕಂಪನಿಗಳೂ ಭಾಗವಹಿಸಲು ಅವಕಾಶ ಮಾಡಿಕೊಡುವ ಮೂಲಕ ಸುಪ್ರೀಂ ಕೋರ್ಟ್‌ ತೀರ್ಪನ್ನು ಕಡೆಗಣಿಸಲಾಗುತ್ತಿದೆ’ ಎಂಬ ಆರೋಪ ಕೇಳಿಬಂದಿದೆ.

ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಗಣಿಗಳಲ್ಲಿ ಹೊರ ತೆಗೆಯಲಾಗುತ್ತಿರುವ ಅದಿರನ್ನು ಇ–ಹರಾಜಿನ ಮೂಲಕ ಕರ್ನಾಟಕ ಹಾಗೂ ನೆರೆಹೊರೆಯ ರಾಜ್ಯಗಳ ಉಕ್ಕು ಕಾರ್ಖಾನೆಗಳಿಗೆ ಮಾತ್ರ ಮಾರಾಟ ಮಾಡಬೇಕೆಂದು ಸುಪ್ರೀಂ ಕೋರ್ಟ್‌ 2012ರ ಮಾರ್ಚ್‌ 13ರಂದು ಹೊರಡಿಸಿದ್ದ ಆದೇಶದಲ್ಲಿ ಹೇಳಿತ್ತು.

ಇ– ಹರಾಜು ಪ್ರಕ್ರಿಯೆ ನಡೆಸುವ ಜವಾಬ್ದಾರಿಯನ್ನು ತನ್ನ ಅಧೀನದ ‘ಮಾನಿಟರಿಂಗ್‌ ಸಮಿತಿ’ಗೆ (ಸಿಇಸಿ) ನೀಡಿದೆ. 2013ರ ಏಪ್ರಿಲ್‌ 13ರಂದು ಕೊಟ್ಟ ತೀರ್ಪಿನಲ್ಲೂ ಕೋರ್ಟ್‌ ಈ ಷರತ್ತ‌ನ್ನು ಪುನರುಚ್ಚರಿಸಿದೆ. ಆದರೆ, ಈ ವರ್ಷ ಏಪ್ರಿಲ್ 16, 20, ಮೇ 12, 13, ಜೂನ್‌ 10,15,18,22 ಮತ್ತು 24ರಂದು ನಡೆದ ಇ–ಹರಾಜಿನಲ್ಲಿ ಸಂಬಂಧಿಸದ ಕೆಲ ರಾಜ್ಯಗಳ ಕಂಪನಿಗಳೂ ಭಾಗವಹಿಸಲು ಅವಕಾಶ ಮಾಡಿಕೊಡುವ ಮೂಲಕ ಕೋರ್ಟ್‌ ತೀರ್ಪನ್ನು ಮಾನಿಟರಿಂಗ್‌ ಸಮಿತಿ ಬದಿಗೊತ್ತಿದೆ ಎಂದು ‘ಕರ್ನಾಟಕ ಕಬ್ಬಿಣ ಮತ್ತು ಉಕ್ಕುಉತ್ಪಾದಕರ ಸಂಘ’ (ಕೆಐಎಸ್‌ಎಂಎ) ದೂರಿದೆ.

‘ಬೇರೆ ರಾಜ್ಯಗಳ ಕಂಪನಿಗಳಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಿಡಬಾರದು’ ಎಂದು ಕೆಐಎಸ್‌ಎಂಎ ಮಾನಿಟರಿಂಗ್‌ ಸಮಿತಿಗೆ ಜುಲೈ 29ರಂದು ಮನವಿ ಸಲ್ಲಿಸಿತ್ತು. ಈ ಮನವಿಗೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಆಗಸ್ಟ್‌ 3, 10 ಹಾಗೂ 12ರಂದು ನಡೆಸಿರುವ ಹರಾಜು ಪ್ರಕ್ರಿಯೆಯಲ್ಲೂ ಈ ಕಂಪನಿಗಳು ಪಾಲ್ಗೊಂಡಿವೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮಧ್ಯಂತರ ಅರ್ಜಿಯಲ್ಲಿ ಕೆಐಎಸ್‌ಎಂಎ ಹೇಳಿದೆ.

2012ರ ಮಾರ್ಚ್‌ 13ರ ಆದೇಶ ಮತ್ತು 2013ರ ಏ‍‍ಪ್ರಿಲ್‌ 13ರಂದು ನೀಡಿರುವ ತೀರ್ಪನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾನಿಟರಿಂಗ್‌ ಸಮಿತಿಗೆ ಸೂಚಿಸುವಂತೆಯೂ ಅದು ಕೋರ್ಟ್‌ಗೆ ಮನವಿ ಮಾಡಿದೆ. ಈ ಅರ್ಜಿ ವಿಚಾರಣೆಗೆ ಬರಬೇಕಿದೆ. ಆದರೆ, ಕೆಐಎಸ್‌ಎಂಎ ಈ ಅರ್ಜಿಯನ್ನು ವಾಪಸ್‌ ಪಡೆಯುವ ಕುರಿತು ಚಿಂತಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.ಈ ಅರ್ಜಿಗೆ ಭಾರತೀಯ ಖನಿಜ ಉದ್ಯಮಗಳ ಒಕ್ಕೂಟ (ಫಿಮಿ) ಆಕ್ಷೇಪಣೆ ಸಲ್ಲಿಸುವ ಸಾಧ್ಯತೆಯಿದೆ ಎಂದು ಗೊತ್ತಾಗಿದೆ.

ಅದಿರಿನ ಕೊರತೆ
ರಾಜ್ಯದ ಉಕ್ಕು ಕಾರ್ಖಾನೆಗಳಿಗೆ ವಾರ್ಷಿಕ 45 ದಶಲಕ್ಷ ಟನ್‌ ಅದಿರು ಅಗತ್ಯವಿದ್ದು, ಮೂರು ಜಿಲ್ಲೆಗಳಿಂದ ಕೇವಲ 27–28 ದಶಲಕ್ಷ ಟನ್‌ ಅದಿರು ಉತ್ಪಾದನೆಯಾಗುತ್ತಿದೆ ಎಂದು ಕೆಐಎಸ್‌ಎಂಎ ತನ್ನ ಮಧ್ಯಂತರ ಅರ್ಜಿಯಲ್ಲಿ ಪ್ರಸ್ತಾಪಿಸಿದೆ.

ಬಳ್ಳಾರಿ ಜಿಲ್ಲೆ ಗಣಿಗಳಿಂದ 25 ದಶಲಕ್ಷ ಟನ್‌, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಗಣಿಗಳಿಂದ 5 ದಶಲಕ್ಷ ಟನ್‌ ಸೇರಿದಂತೆ 30 ದಶಲಕ್ಷ ಟನ್‌ ಅದಿರನ್ನು ಹೊರತೆಗೆಯಲು ಸುಪ್ರೀಂ ಕೋರ್ಟ್‌ 2012ರ ಮಾರ್ಚ್‌ 13ರಂದು ಒಪ್ಪಿಗೆ ನೀಡಿತ್ತು.

2017ರ ಡಿಸೆಂಬರ್‌ 14ರಂದು 30 ದಶಲಕ್ಷ ಟನ್‌ ಅದಿರು ಉತ್ಪಾದನೆ ಮಿತಿಯನ್ನು 35 ಲಕ್ಷ ದಶಲಕ್ಷ ಟನ್‌ಗೆ ಕೋರ್ಟ್‌ ಏರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT