ಭಾನುವಾರ, ಜುಲೈ 3, 2022
27 °C
ಶ್ರೀಕೃಷ್ಣದೇವರಾಯ ವಿ.ವಿ ಕ್ರಮ

ಪ್ರಶ್ನೆ ಪತ್ರಿಕೆ ಸೋರಿಕೆ: ಆರು ಮಂದಿಗೆ ತಲಾ ₹1 ಲಕ್ಷ ದಂಡ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಿ.ಕಾಂ ಪದವಿಯ 6ನೇ ಸೆಮಿಸ್ಟರ್‌ನ ‘ಮ್ಯಾನೇಜ್‌ಮೆಂಟ್‌ ಅಕೌಂಟಿಂಗ್‌’ ಪ್ರಶ್ನೆ ಪತ್ರಿಕೆ ಸೋರಿಕೆ ‍ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಮಂಡಳಿ ಅಧ್ಯಕ್ಷರು ಹಾಗೂ ಐವರು ಸದಸ್ಯರಿಗೆ ತಲಾ ₹ 1 ಲಕ್ಷ ದಂಡ ವಿಧಿಸಲಾಗಿದೆ.

ಹಗರಣದ ವಿಚಾರಣೆ ನಡೆಸಿದ್ದ ಸಿಂಡಿಕೇಟ್‌ ಸದಸ್ಯರಾದ ಪದ್ಮಾ ವಿಠಲ್‌ ನೇತೃತ್ವದ ಉಪ ಸಮಿತಿ ವರದಿಯನ್ನು ಸಿಂಡಿಕೇಟ್‌ ಸಭೆ ಅಂಗೀಕರಿಸಿದೆ. ಪರೀಕ್ಷಾ ಮಂಡಳಿ ಅಧ್ಯಕ್ಷ ಹಾಗೂ ಸದಸ್ಯರನ್ನು ಕಪ್ಪುಪಟ್ಟಿಗೆ ಸೇರಿಸಿದ್ದು, ತಲಾ ₹ 1 ಲಕ್ಷ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಿಂಗಳ ಗಡುವು ನೀಡಿ ನೋಟಿಸ್‌ ನೀಡಿದ್ದು, ಗಡುವು ಮುಗಿದಿದೆ ಎಂದು ವಿ.ವಿ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಪರೀಕ್ಷಾ ಮಂಡಳಿ ಸದಸ್ಯರಾಗಿದ್ದ ಸಿರುಗುಪ್ಪ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಬಸವರಾಜ ಅವರಿಗೆ ದಂಡದಿಂದ ವಿನಾಯಿತಿ ನೀಡಲಾಗಿದೆ. ಪುತ್ರ ಬಿ.ಕಾಂ, ಪರೀಕ್ಷೆ ಬರೆಯುತ್ತಿದ್ದು, ಮಂಡಳಿ ಸದಸ್ಯರಾಗಿ ಮುಂದುವರಿಯುವುದು ಸರಿಯಲ್ಲ’ ಎಂದು ಅವರು ವಿ.ವಿಗೆ ‍ಪತ್ರ ಬರೆದಿದ್ದಾಗಿ ಮೂಲಗಳು ಸ್ಪಷ್ಟಪಡಿಸಿವೆ. 

ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ವಾಣಿಜ್ಯಶಾಸ್ತ್ರ ವಿಭಾಗದ ಮೂರು ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಈ ಪರೀಕ್ಷೆಗಳನ್ನು ನಡೆಸಲು ಮಾಡಿದ್ದ ಒಟ್ಟಾರೆ ವೆಚ್ಚವನ್ನು ಪರೀಕ್ಷಾ ಮಂಡಳಿ ಅಧ್ಯಕ್ಷರು, ಸದಸ್ಯರಿಂದ ವಸೂಲು ಮಾಡಲು ಉಪ ಸಮಿತಿ ಶಿಫಾರಸು ಮಾಡಿತ್ತು. ಪರೀಕ್ಷೆ ಒಟ್ಟಾರೆ ವೆಚ್ಚ ಲೆಕ್ಕಹಾಕಿ ತಲಾ ₹ 1 ಲಕ್ಷ ದಂಡ ಹಾಕಲಾಗಿದೆ.   

‘ಯಾವ ಹಂತದಲ್ಲಿ ಮತ್ತು ಹೇಗೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ’ ಎಂಬುದನ್ನು ಪತ್ತೆ ಹಚ್ಚಲು ಸೈಬರ್‌ ಕ್ರೈಂ ‍ಪೊಲೀಸರಿಗೆ ದೂರು ಕೊಡುವುದಕ್ಕೂ ಸಿಂಡಿಕೇಟ್‌ ಅನುಮೋದನೆ ನೀಡಿತ್ತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮ್ಯಾನೇಜ್‌ಮೆಂಟ್‌ ಅಕೌಂಟಿಂಗ್‌ ಜತೆ ಉಳಿದೆರಡು ವಿಷಯಗಳ ಮರು ಪರೀಕ್ಷೆ ನಡೆಸಲಾಗಿತ್ತು. 

ಸಿಂಡಿಕೇಟ್‌ ಸದಸ್ಯರಾದ ಜಯಪ್ರಕಾಶ್‌, ಮರ್ಚೇಡ್‌ ಮಲ್ಲಿಕಾರ್ಜುನಗೌಡ, ನರಸಿಂಹ ರಾಯಚೂರು, ಎಂಬಿಎ ವಿಭಾಗದ ಚೇರ್ಮನ್‌ ಭೀಮನಗೌಡ ಹಾಗೂ ವಿವಿ ಸಹಾಯಕ ರಿಜಿಸ್ಟ್ರಾರ್‌ ತಿಪ್ಪೇಸ್ವಾಮಿ ಅವರನ್ನೊಳಗೊಂಡ ಉಪ ಸಮಿತಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಕುರಿತು ವಿಚಾರಣೆ ನಡೆಸಿ ವರದಿ ಸಲ್ಲಿಸಿತ್ತು.

 

ಕಾಲೇಜು ಶಿಕ್ಷಣ ಆಯುಕ್ತರಿಗೂ ಪತ್ರ

‘ಪ್ರಶ್ನೆಪತ್ರಿಕೆ ಸೋರಿಕೆ ಮಾಡುವ ಮೂಲಕ ಪರೀಕ್ಷಾ ಮಂಡಳಿ ಅಧ್ಯಕ್ಷರು, ಸದಸ್ಯರು ಅಕ್ಷಮ್ಯ ಅ‍‍ಪರಾಧ ಎಸಗಿದ್ದು ಅವರ ವಿರುದ್ಧ ಸೂ‌ಕ್ತ ಕ್ರಮ ಕೈಗೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೂ ಪತ್ರ ಬರೆಯಲಾಗಿದೆ.

ಇನ್ನು ಮುಂದೆ ಇಂಥ ಪ್ರಕರಣಗಳು ಮರುಕಳಿಸಿದಂತೆ, ಪ್ರಶ್ನೆಪತ್ರಿಕೆ ಸಿದ್ಧತೆ ಹಾಗೂ ಗೌಪ್ಯತೆ ಕಾಪಾಡುವ ಉದ್ದೇಶದಿಂದ ನಿಯಮಾವಳಿ ರೂಪಿಸಲು ಸಮಿತಿ ರಚಿಸುವಂತೆಯೂ ಸಿಂಡಿಕೇಟ್‌ ಉಪ ಸಮಿತಿ ಶಿಫಾರಸು ಮಾಡಿದೆ. ಆದರೆ, ಇನ್ನೂ ಸಮಿತಿ ರಚನೆಯಾಗಿಲ್ಲ ಎಂದು ಮೂಲಗಳು ಹೇಳಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು