ಗುರುವಾರ , ನವೆಂಬರ್ 26, 2020
21 °C

ಹೊಸಪೇಟೆ ತಾಲೂಕಿನಾದ್ಯಂತ ಮುಂದುವರಿದ ಮಳೆ, ಸತತ ಮಳೆಗೆ ಕುಸಿದು ಬಿದ್ದ ಆರು ಮನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಮಂಗಳವಾರ ರಾತ್ರಿ ಸುರಿದ ಮಳೆಗೆ ತಾಲ್ಲೂಕಿನಲ್ಲಿ ಆರು ಮನೆಗಳು ಕುಸಿದು ಬಿದ್ದಿವೆ.
ತಾಲ್ಲೂಕಿನ ಬ್ಯಾಲಕುಂದಿಯಲ್ಲಿ ಎರಡು, ಮರಿಯಮ್ಮನಹಳ್ಳಿ, ಗರಗ, ಡಣಾಯಕನಕೆರೆ, ದೇವಲಾಪುರದಲ್ಲಿ ತಲಾ ಒಂದು ಮನೆಗೆ ಹಾನಿಯಾಗಿದೆ.

ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಮಂಗಳವಾರ ರಾತ್ರಿ ಆರಂಭಗೊಂಡ ಮಳೆ ಬುಧವಾರವೂ ಮುಂದುವರೆದಿದೆ. ಮಂಗಳವಾರ ಮಧ್ಯಾಹ್ನ, ಸಂಜೆ ವೇಳೆ ಕೆಲಕಾಲ ಮಳೆಯಾಗಿತ್ತು. ಕೆಲಹೊತ್ತು ಬಿಡುವು ಕೊಟ್ಟ ಮಳೆ ಪುನಃ ರಾತ್ರಿ ಆರಂಭಗೊಂಡಿತ್ತು. ರಾತ್ರಿಯಿಡೀ ಸುರಿದ ಜಿಟಿಜಿಟಿ ಮಳೆ ಬುಧವಾರ ಬೆಳಿಗ್ಗೆಯೂ ಮುಂದುವರೆಯಿತು. ಬೆಳಿಗ್ಗೆ ಎಂಟರಿಂದ ಒಂಬತ್ತು ಗಂಟೆಯ ವರೆಗೆ ಬಿರುಸಾಗಿ ಸುರಿದ ಮಳೆ, ಬಳಿಕ ನಿಧಾನಗೊಂಡಿತು. ಸಂಜೆಯ ವರೆಗೆ ಬಿಟ್ಟು ಬಿಟ್ಟು ಮಳೆಯಾಯಿತು.

ಬೆಳ್ಳಂಬೆಳಿಗ್ಗೆ ಮಳೆಯಾದ ಕಾರಣ ದೈನಂದಿನ ಕೆಲಸಗಳಿಗೆ ಹೋಗುವವರಿಗೆ ಅಡ್ಡಿಯಾಯಿತು. ಕೆಲವರು ಕೊಡೆಗಳನ್ನು ಆಶ್ರಯಿಸಿಕೊಂಡು ಮಳೆಯಲ್ಲೇ ಹೆಜ್ಜೆ ಹಾಕಿದರು. ಸತತ ಮಳೆಗೆ ವಾತಾವರಣ ಸಂಪೂರ್ಣ ತಂಪಾಗಿದೆ. 

ತಾಲ್ಲೂಕಿನ ಹಂಪಿ, ಕಡ್ಡಿರಾಂಪುರ, ಕಮಲಾಪುರ, ಕಾಳಘಟ್ಟ, ಧರ್ಮದಗುಡ್ಡ, ನಾಗೇನಹಳ್ಳಿ, ಬಸವನದುರ್ಗ, ಹೊಸೂರು, ಇಪ್ಪಿತ್ತೇರಿ ಮಾಗಾಣಿ, ನಲ್ಲಾಪುರ, ಚಿನ್ನಾಪುರ, ಬುಕ್ಕಸಾಗರ, ವೆಂಕಟಾಪುರ, ವ್ಯಾಸನಕೆರೆ, ಕಾರಿಗನೂರು, ಸಂಕ್ಲಾಪುರ ಸೇರಿದಂತೆ ಹಲವೆಡೆ ಮಳೆಯಾಗಿರುವುದು ವರದಿಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು