ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಪತ್ಬಾಂಧವ’ ಅಂಬಣ್ಣಗೆ ರಾಜ್ಯೋತ್ಸವ ಗರಿ

Last Updated 31 ಅಕ್ಟೋಬರ್ 2021, 14:51 IST
ಅಕ್ಷರ ಗಾತ್ರ

ಮರಿಯಮ್ಮನಹಳ್ಳಿ (ಹೊಸಪೇಟೆ ತಾಲ್ಲೂಕು): ವೃತ್ತಿಯಿಂದ ವೈದ್ಯರಾಗಿರುವ ಡಾ. ಅಂಬಣ್ಣ ರೋಗಿಗಳ ಪಾಲಿನ ‘ಆಪತ್ಬಾಂಧವ’. ರಂಗಭೂಮಿ, ಸಾಹಿತ್ಯದಲ್ಲೂ ವಿಶೇಷ ಆಸ್ಥೆ. ಸಮಾಜ ಸೇವೆಯಲ್ಲೂ ಎತ್ತಿದ ಕೈ. ಅವರಿಗೆ ಈ ಸಲದ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.

ಅಂಬಣ್ಣನವರಿಗೆ ಈಗ 84 ವಯಸ್ಸು. ಆದರೆ, ಈಗಲೂ ಪಟ್ಟಣದ ಪುಟ್ಟ ಕ್ಲಿನಿಕ್‍ನಲ್ಲಿ ಹಗಲಿರುಳು ರೋಗಿಗಳನ್ನು ನೋಡುತ್ತಾರೆ. ನಿಗದಿತ ಶುಲ್ಕವಿಲ್ಲ. ಯಾರು ಎಷ್ಟೇ ಕೊಟ್ಟರೂ ಸ್ವೀಕರಿಸುತ್ತಾರೆ. ಹಣವಿಲ್ಲವೆಂದರೂ ಸರಿ. ನಗುನಗುತ್ತಲೇ ಚಿಕಿತ್ಸೆ ನೀಡುತ್ತಾರೆ. ರೋಗಿಗಳ ಆಪತ್ಬಾಂಧವ ಎಂದರೆ ತಪ್ಪಾಗಲಾರದು. ಲಾಕ್‌ಡೌನ್‌ ಸಂದರ್ಭದಲ್ಲೂ ರೋಗಿಗಳ ಉಪಚಾರ ಮಾಡಿದ್ದಾರೆ.

ಬಿಡುವು ಸಿಕ್ಕಾಗಲೆಲ್ಲಾ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಯುವಕರಿದ್ದಾಗ ಸ್ವತಃ ಅವರೇ ಬಣ್ಣ ಹಚ್ಚಿಕೊಳ್ಳುತ್ತಿದ್ದರು. ಈಗ ಹೊಸಬರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ.
ಹಿರಿಯ ರಂಗಭೂಮಿ ಕಲಾವಿದೆ ಬಾರಿಕರ ಲಿಂಗಮ್ಮ ಅವರ ಮಗನಾಗಿ 1936ರಲ್ಲಿ ಜನಿಸಿದ ಇವರು, ಮೈಸೂರು ಹಾಗೂ ಬಳ್ಳಾರಿಯಲ್ಲಿ ಎಲ್‍ಎಎಂಎಸ್(ಲೈಸನ್ಸಿಯೇಟ್ ಆಯುರ್ವೇದಿಕ್ ಮೆಡಿಸನ್ ಅಂಡ್ ಸರ್ಜನ್) ವೈದ್ಯಕೀಯ ಶಿಕ್ಷಣ ಪೂರೈಸಿದ್ದಾರೆ.

ಮೈಸೂರಿನ ದಿ.ಬ್ರಿಟಿಷ್ ಮಿಷನರಿಯಂತಹ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ಇವರು, ಅಲ್ಲಿಂದ ಪಟ್ಟಣಕ್ಕೆ ಬಂದು ‘ಕರುಣಾ’ ಚಿಕಿತ್ಸಾಲಯ ಆರಂಭಿಸಿ ಜನರ ಪಾಲಿನ ಅಚ್ಚುಮೆಚ್ಚಿನ ವೈದ್ಯರಾಗಿದ್ದಾರೆ. ಜೊತೆಗೆ ಸಾಂಸ್ಕೃತಿಕ ಲೋಕದ ಪರಿಚಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಲಲಿತ ಕಲಾರಂಗ ಸಂಸ್ಥಾಪಕರಾಗಿರುವ ಅವರಿಗೆ ಜಿ.ಮಾದೇಗೌಡ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಸಂದಿವೆ. ‘ಭಾವತರಂಗ’ ಕವನ ಸಂಕಲನ, ‘ಅಪತ್ಬಾಂಧವ ಡಾ.ಬಿ.ಅಂಬಣ್ಣ’ ಅಭಿನಂದನ ಗ್ರಂಥ ಸೇರಿದಂತೆ ಐದು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT