ಮಂಗಳವಾರ, ಸೆಪ್ಟೆಂಬರ್ 28, 2021
24 °C

ಸ್ಮಾರ್ಟ್‌ ಕ್ಲಾಸ್‌ನಿಂದ ಬದಲಾದ ಶಾಲೆ

ಸಿ.ಶಿವಾನಂದ Updated:

ಅಕ್ಷರ ಗಾತ್ರ : | |

Prajavani

ಹಗರಿಬೊಮ್ಮನಹಳ್ಳಿ: ಇಲ್ಲಿನ ಚಿಂತ್ರಪಳ್ಳಿ ಸರ್ಕಾರಿ ಶಾಲೆಯಲ್ಲಿ ಸಮುದಾಯದ ಸಹಭಾಗಿತ್ವದೊಂದಿಗೆ ಆರಂಭಿಸಿರುವ ಸ್ಮಾರ್ಟ್‌ ಕ್ಲಾಸ್ ತರಗತಿಗಳು ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ಸುಧಾರಿಸಿದೆ.

ಸ್ಮಾರ್ಟ್ ಕ್ಲಾಸ್‌ನಿಂದ ಶಿಕ್ಷಕರು, ವಿದ್ಯಾರ್ಥಿಗಳಿಗೆ ಸುಲಭವಾಗಿ ಪಾಠ ಮನದಟ್ಟು ಮಾಡಿಕೊಡಲು ಯಶಸ್ವಿಯಾಗಿದ್ದಾರೆ.

ಗ್ರಾಮಸ್ಥರಿಂದ ಸಂಗ್ರಹಿಸಿದ ₹75 ಸಾವಿರ ದೇಣಿಗೆಯಲ್ಲಿ ಅತ್ಯುತ್ತುಮ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್ ಕ್ಲಾಸ್ ಆರಂಭಿಸಿದ್ದಾರೆ. ಕಂಪ್ಯೂಟರ್, ಪ್ರಾಜೆಕ್ಟರ್, ಹೋಮ್ ಥಿಯೇಟರ್‌, ಯು.ಪಿ.ಎಸ್‌. ಮತ್ತು ಪ್ರಿಂಟರ್ ಖರೀದಿಸಲಾಗಿದೆ. 

ಶಾಲೆಯಲ್ಲಿ ಒಟ್ಟು 176 ವಿದ್ಯಾರ್ಥಿಗಳಿದ್ದು, ಈ ಪೈಕಿ 112 ವಿದ್ಯಾರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದ್ದಾರೆ.

ಶಾಲೆಯ ಐದರಿಂದ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್, ಕನ್ನಡ ವ್ಯಾಕರಣ, ರೈಮ್ಸ್, ಇಂಗ್ಲಿಷ್ –ಕನ್ನಡ ಪದ್ಯಗಳು, ಕವಿ– ಕಾವ್ಯ –ಪರಿಚಯ, ವಿಜ್ಞಾನ ಮತ್ತು ಗಣಿತ ಪ್ರಯೋಗಗಳ ಎಲ್ಲ ಪಾಠಗಳು ಉದಾಹರಣೆ ಸಮೇತ ಅತ್ಯುತ್ತಮ ಗುಣಮಟ್ಟದ ಧ್ವನಿ ಮತ್ತು ಚಿತ್ರಗಳ ಸಹಿತ ಪಾಠಗಳನ್ನು ಕಣ್ಣಿಗೆ ಕಟ್ಟುವಂತೆ ದೊಡ್ಡ ಪರದೆಯಲ್ಲಿ ವಿದ್ಯಾರ್ಥಿಗಳ ಮುಂದೆ ಪ್ರತಿದಿನ ಪ್ರದರ್ಶಿಸಲಾಗುತ್ತದೆ.

‘ಈ ಮೂಲಕ ಬೋರ್ಡ್ ಪಾಠಗಳಿಗಿಂತಲೂ ಈ ಸ್ಮಾರ್ಟ್ ಕ್ಲಾಸ್ ಪಾಠಗಳನ್ನು ಶೀಘ್ರ ಮನನ ಮಾಡಿಕೊಳ್ಳಲು ಸಾಧ್ಯವಾಗಿದೆ’ ಎನ್ನುತ್ತಾರೆ ಶಾಲೆಯ ವಿದ್ಯಾರ್ಥಿಗಳು.

ಪಾಠದ ಜತೆಗೆ ಶಾಲೆಯಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ. ವಿಶೇಷವಾದ ಮೂತ್ರಾಲಯಗಳನ್ನು ಶಾಲೆಯ ಶಿಕ್ಷಕರೇ ಅತಿ ಕಡಿಮೆ ಖರ್ಚಿನಲ್ಲಿ ನಿರ್ಮಿಸಿದ್ದಾರೆ. ಕೇವಲ ₹2,700 ಮೊತ್ತದಲ್ಲಿ ಮೂತ್ರಾಲಯಗಳನ್ನು ನಿರ್ಮಿಸಲಾಗಿದೆ. ಶಾಲೆಯ ಹಿರಿಯ ವಿದ್ಯಾರ್ಥಿಯೊಬ್ಬರಿಂದ ಪಡೆದ 15ಕ್ಕೂ ಹೆಚ್ಚು ಪ್ಲಾಸ್ಟಿಕ್ ನೀರಿನ ಟ್ಯಾಂಕ್‍ಗಳಿಂದಲೇ ಮೂತ್ರಾಲಯದ ಬೇಸಿನ್ ತಯಾರಿಸಲಾಗಿದೆ. 

ಸ್ಕೂಲ್ ಬ್ಯಾಂಕ್

ಶಾಲೆಯ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ಬ್ಯಾಂಕ್ ಸ್ಥಾಪಿಸಲಾಗಿದೆ. 82 ಬಾಲಕರು, 55 ಬಾಲಕಿಯರು ಖಾತೆ ತೆರೆದು ಮನೆಯಲ್ಲಿ ಪಾಲಕರು ನೀಡುವ ಹಣ ಉಳಿತಾಯ ಮಾಡುತ್ತಿದ್ದಾರೆ. ಜನವರಿಯಿಂದ ಇದುವರೆಗೆ ಒಟ್ಟು ₹5 ಸಾವಿರ ಜಮೆ ಆಗಿದೆ.

‘ಏಳನೇ ತರಗತಿ ವಿದ್ಯಾರ್ಥಿನಿ ಎಸ್.ಅಕ್ಷತಾ ಈಚೆಗೆ ಉಳಿತಾಯ ಮಾಡಿದ ದುಡ್ಡಿನಲ್ಲೇ ಇಂಗ್ಲಿಷ್-ಕನ್ನಡ ನಿಘಂಟು ಖರೀದಿಸಿದ್ದಾಳೆ. ಬ್ಯಾಂಕ್‍ನ ಎಲ್ಲ ನಿರ್ವಹಣೆಯನ್ನು ಸಹಶಿಕ್ಷಕ ಡಿ.ವಾಮದೇವಪ್ಪ ಮಾಡುತ್ತಿದ್ದಾರೆ. ಈ ಮೂಲಕ ಪ್ರಾಥಮಿಕ ಶಾಲೆಯ ಹಂತದಿಂದಲೇ ವಿದ್ಯಾರ್ಥಿಗಳಿಗೆ ಬ್ಯಾಂಕ್ ವ್ಯವಹಾರದ ನಿರ್ವಹಣೆ ಮತ್ತು ಹಣ ಉಳಿತಾಯ ಮಾಡುವ ಕುರಿತು ತಿಳಿಸಿಕೊಡಲಾಗುತ್ತಿದೆ’ ಎನ್ನುತ್ತಾರೆ ಮುಖ್ಯ ಶಿಕ್ಷಕ ಎಚ್.ಬಿ. ಬಸವನಗೌಡ್ರು.

ಕೈ ತೋಟ
’ಶಾಲೆಯ ಆವರಣದಲ್ಲಿ ತೆಂಗು, ಬಾಳೆ, ಅಶೋಕ, ಬದಾಮಿ, ದಾಸವಾಳ, ಕಣಗಿಲ, ಕನಕಾಂಬರ, ಮಲ್ಲಿಗೆ ಗಿಡಗಳನ್ನು ಬೆಳೆಯಲಾಗಿದೆ. ಹತ್ತು ಬಾಳೆ ಗಿಡಗಳಲ್ಲಿ ಬಿಟ್ಟ ಗೊನೆಗಳನ್ನು ಹಣ್ಣಿಗಿಡಲಾಗಿದೆ. ಅವುಗಳನ್ನು ವಿದ್ಯಾರ್ಥಿಗಳಿಗೆ ಹಂಚಲಾಗುವುದು’ ಎನ್ನುತ್ತಾರೆ ಮುಖ್ಯ ಶಿಕ್ಷಕರು.

‘ಶಾಲೆಯಲ್ಲಿ ದತ್ತಿ ನಿಧಿ ಸ್ಥಾಪಿಸಿ ₹33 ಸಾವಿರ ಬ್ಯಾಂಕಿನಲ್ಲಿ ಎಫ್‍.ಡಿ. ಮಾಡಲಾಗಿದೆ. ಬರುವ ಬಡ್ಡಿ ಹಣವನ್ನು ಎಲ್ಲ ತರಗತಿಗಳಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿ ತರಗತಿಯ ಇಬ್ಬರಿಗೆ ಬಹುಮಾನ ನೀಡುವ ಪರಿಪಾಠ ಶಾಲೆಯಲ್ಲಿದೆ. ಶೈಕ್ಷಣಿಕ ಪ್ರಗತಿ, ಸ್ವಚ್ಛತೆ, ನೈರ್ಮಲ್ಯ ಕಾಪಾಡಿಕೊಂಡಿದ್ದರಿಂದ ಶಾಲೆಯಿಂದ ಕೂಗಳತೆ ದೂರದಲ್ಲಿ ಖಾಸಗಿ ಶಾಲೆಗಳಿದ್ದರೂ ವಿದ್ಯಾರ್ಥಿಗಳು ಮಾತ್ರ ಆಕಡೆ ಮುಖ ಮಾಡಿಲ್ಲ. ವರ್ಷದಿಂದ ವರ್ಷಕ್ಕೆ ದಾಖಲಾಗುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದು ಎಚ್.ಬಿ.ಬಸವನಗೌಡ್ರು ಹೆಮ್ಮೆಯಿಂದ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು