ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ವರ್ಷಕ್ಕೆ 'ಕಸ ತೆರಿಗೆ': ಆಯುಕ್ತೆ

ಬಳ್ಳಾರಿ ಪಾಲಿಕೆಯಲ್ಲಿ ಸಿದ್ಧತೆ ಶುರು:
Last Updated 10 ಡಿಸೆಂಬರ್ 2020, 12:39 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ ಹೋಟೆಲ್‌ಗಳು ಮತ್ತು ವಾಣಿಜ್ಯ ಮಳಿಗೆಗಳು 2021ರ ಜನವರಿಯಿಂದ ಪಾಲಿಕೆಗೆ ಕಸ ನಿರ್ವಹಣೆ ಶುಲ್ಕವನ್ನು ಪಾವತಿಸಲು ಸಿದ್ಧವಾಗಬೇಕು.

ಈ ಕುರಿತು ನಗರದಲ್ಲಿ ಗುರುವಾರ ಸುಳಿವು ನೀಡಿದ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೊಟ್‌, ‘ಮೊದಲ ಹಂತದಲ್ಲಿ ಉದ್ದಿಮೆದಾರರಿಂದ ಕಸ ಸಂಗ್ರಹ ಶುಲ್ಕವನ್ನು ವಸೂಲು ಮಾಡಲು ನಿರ್ಧರಿಸಲಾಗಿದ್ದು ಸಿದ್ಧತೆಗಳು ನಡೆದಿವೆ. ನಂತರ ಸಾರ್ವಜನಿಕರಿಂದಲೂ ಶುಲ್ಕ ವಸೂಲು ಮಾಡಲಾಗುವುದು’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಆಯುಕ್ತೆಯಾಗಿ ಅಧಿಕಾರಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಗರಕ್ಕೆ ಬರುವ ಯಾರಿಗೇ ಆದರೂ ಮೊದಲು ಕಸ ಕಣ್ಣಿಗೆ ರಾಚುತ್ತದೆ. ಜಿಲ್ಲಾ ಕೇಂದ್ರವಾದ ನಗರವು ಕಸದ ನಿರ್ವಹಣೆಯಲ್ಲಿ ಹಿಂದೆ ಉಳಿದಿದೆ ಎಂಬುದು ಅದರ ಮೂಲಕವೇ ಗೊತ್ತಾಗುತ್ತದೆ. ಈ ಸನ್ನಿವೇಶವನ್ನು ಬದಲಾಯಿಸುವುದು ಸದ್ಯ ಮೊದಲ ಆದ್ಯತೆ’ ಎಂದು ಹೇಳಿದರು.

‘ಪಾಲಿಕೆ ವ್ಯಾಪ್ತಿಯ ಪ್ರದೇಶಗಳಲ್ಲಿ ಕಸ ನಿರ್ವಹಣೆ ಸಮರ್ಪಕವಾಗಿಲ್ಲ. ವಾಣಿಜ್ಯ ಮಳಿಗೆಗಳು, ಹೋಟೆಲ್‌ಗಳ ಮಂದಿ ರಾತ್ರಿ ರಸ್ತೆಗೆ ಕಸ ತಂದು ಸುರಿಯುತ್ತಾರೆ. ಅದನ್ನು ಬೆಳಿಗ್ಗೆ ಪೌರಕಾರ್ಮಿಕರು ವಿಲೇವಾರಿ ಮಾಡುತ್ತಾರೆ. ಇದು ಅವ್ಯವಸ್ಥೆ. ಇದನ್ನು ಸರಿಪಡಿಸುವ ಪ್ರಯತ್ನ ಹಲವು ಹಂತಗಳಲ್ಲಿ ನಡೆಯಲಿದೆ’ ಎಂದರು.

‘ಸದ್ಯ ನಗರದಲ್ಲಿ ಮನೆಗಳಿಂದ, ವಾಣಿಜ್ಯ ಮಳಿಗೆಗಳಿಂದ ಕಸ ಸಂಗ್ರಹಿಸಲಾಗುತ್ತಿದೆ. ಆದರೆ ಕಸ ವಿಂಗಡಣೆ ಮತ್ತು ಸಂಸ್ಕರಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಕಸವನ್ನು ಸಂಗ್ರಹಿಸಿ ಒಂದೆಡೆ ಕೊಂಡೊಯ್ದು ಸುರಿಯಲಾಗುತ್ತಿದೆ. ಆದರೆ ಕಸದ ವೈಜ್ಞಾನಿಕ ವಿಲೇವಾರಿ, ಸಂಸ್ಕರಣೆ ಮತ್ತು ಪುನರ್‌ಬಳಕೆ ನಡೆಯುತ್ತಿಲ್ಲ. ಜೊತೆಗೆ ಜನ ಚರಂಡಿಗಳಿಗೇ ಕಸ ಸುರಿಯುತ್ತಿದ್ದಾರೆ. ಪ್ಲಾಸ್ಟಿಕ್‌ ಕಸ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಲಾಗುವುದು’ವಿಷಾದಿಸಿದರು.

‘ಬಿಬಿಎಂಪಿ, ಮೈಸೂರು ಸೇರಿದಂತೆ ವಿವಿಧೆಡೆ ಗಣನೀಯವಾಗಿ ಘನ ಕಸದ ವೈಜ್ಞಾನಿಕ ನಿರ್ವಹಣೆಯನ್ನು ಮಾಡುತ್ತಿರುವ ಏಜೆನ್ಸಿಯನ್ನು ಸಂಪರ್ಕಿಸಲಾಗಿದೆ. ಅಂಥ ಏಜೆನ್ಸಿಗಳ ಮೂಲಕವೇ ಕಸ ನಿರ್ವಹಣೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದರು.

‘ಕಸ ನಿರ್ವಹಣೆಯಲ್ಲಿ ಪೌರಕಾರ್ಮಿಕರು ಬಹಳ ಕಷ್ಟಪಡುತ್ತಿದ್ದಾರೆ. ಅವರ ಘನತೆಯನ್ನೂ ಜನ ಕಾಪಾಡಬೇಕು. ಏಕೆಂದರೆ ಕಸ ವಿಲೇವಾರಿ ನೋಡಲು ಮತ್ತು ಹೇಳಲು ಬಹಳ ಸುಲಭ. ಆದರೆ ಮಾಡುವುದು ಬಹಳ ಕಷ್ಟ. ಅಂತ ಕಷ್ಟಕರವಾದ ಕಾರ್ಯದ ವೈಜ್ಞಾನಿಕ ನಿರ್ವಹಣೆಗೆ ಜನಪ್ರತಿನಿಧಿಗಳು, ಸ್ವಯಂಸೇವಾ ಸಂಸ್ಥೆಗಳು, ಇಲಾಖೆಗಳು ಹಾಊ ಸಾರ್ವಜನಿಕರು ಕೈಜೋಡಿಸಬೇಕು’ ಎಂದು ಕೋರಿದರು.

’ನಗರದ ವಿವಿಧ ಪ್ರದೇಶಗಳಲ್ಲಿ ಕಸ ಹೇಗೆ ಸಂಗ್ರಹವಾಗುತ್ತಿದೆ. ವಿಲೇವಾರಿ ಹೇಗೆ ನಡೆದಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಸದ್ಯ ಕಸ ನಿರ್ವಹಣೆಗೆ ಮಾನವ ಸಂಪನ್ಮೂಲಕ್ಕಿಂತಲೂ ಯಂತ್ರಗಳು ಮತ್ತು ವಾಹನಗಳು ಹೆಚ್ಚು ಬೇಕಾಗಿವೆ. ಮನೆಗಳಿಗಂದ ಕಸ ಸಂಗ್ರಹಿಸಲು 100 ವಾಹನಗಳು ಬೇಕಾಗಿದ್ದು, ಸದ್ಯ 62 ವಾಹನಗಳಷ್ಟೇ ಇವೆ. ಮೂರು ತಿಂಗಳಲ್ಲಿ ವಾಹನಗಳ ವ್ಯವಸ್ಥೆ ಮಾಡಲಾಗುವುದು’ ಎಂದರು.

‘ಕಸವನ್ನು ಪಾಲಿಕೆ ಸಿಬ್ಬಂದಿಗೆ ನೀಡದೆ ಎಲ್ಲೆಂದರಲ್ಲಿ ಕಸ ಎಸೆದವರಿಂದ ದಂಡಶುಲ್ಕ ವಸೂಲು ಮಾಡಲಾಗುವುದು. ಕಸವಿಂಗಡಣೆ ಮಾಡದೇ ಇದ್ದರೂ ದಂಡ ಶುಲ್ಕ ವಿಧಿಸಲು ಅವಕಾಶವಿದೆ. ಈ ನಿಯಮಗಳನ್ನು ನಿಧಾನವಾಗಿ ಜಾರಿಗೊಳಿಸಲಾಗುವುದು’ ಎಂದರು.

‘ನಗರವನ್ನು ಬಯಲುಶೌಚ ಮುಕ್ತಗೊಳಿಸುವುದು ಮತ್ತು ಎಲ್ಲ ಮನೆಗೂ ಶೌಚಾಲಯ ಸೌಕರ್ಯವಿರುವಂತೆ ವ್ಯವಸ್ಥೆ ಮಾಡುವ ಸವಾಲು ಪಾಲಿಕೆ ಮುಂದಿದೆ. ಶೇ 100ರಷ್ಟು ಬಯಲು ಶೌಚಮುಕ್ತಗೊಳಿಸುವ ಸಲುವಾಗಿ ಮತ್ತೊಮ್ಮೆ ಸಮೀಕ್ಷೆ ನಡೆಸಲಾಗುವುದು’ ಎಂದು ಹೇಳಿದರು.

ಪಾಲಿಕೆ ಆರೋಗ್ಯಾಧಿಕಾರಿ ಡಾ.ಹನುಮಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT