ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಆರೈಕೆಯಲ್ಲಿ ‘ರಮ್ಯಾ’

ಕೆಂಡದಂತಹ ಬಿಸಿಲಿನಲ್ಲಿ ಆರೈಕೆಯೇ ದೊಡ್ಡ ಸವಾಲಿನ ವಿಷಯ
Last Updated 27 ಏಪ್ರಿಲ್ 2021, 13:35 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಯಸ್ಸಾಗಿ ನಿಶ್ಶ್ಯಕ್ತಿಯಿಂದ ಬಳಲುತ್ತಿರುವ ‘ರಮ್ಯಾ’ಗೆ (ಹೆಣ್ಣು ಹುಲಿ) ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ವಿಶೇಷ ಆರೈಕೆ ಮಾಡಲಾಗುತ್ತಿದೆ.

ಎರಡು ವರ್ಷಗಳ ಹಿಂದೆ ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಇಲ್ಲಿನ ವಾಜಪೇಯಿ ಉದ್ಯಾನಕ್ಕೆ ಬಂದ ರಮ್ಯಾಳಿಗೆ ಈಗ 20 ವರ್ಷ. ಸಾಮಾನ್ಯವಾಗಿ ಹುಲಿಗಳು ‌24ರಿಂದ 25 ವರ್ಷದ ವರೆಗೆ ಬದುಕುತ್ತವೆ. ಈ ಅವಧಿಯಲ್ಲಿ ಹುಲಿಗಳಿಗೆ ವಿಶೇಷ ಆರೈಕೆ ಅಗತ್ಯ ಇರುತ್ತದೆ. ಅದರಲ್ಲೂ ವಿಜಯನಗರ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ 40ರಿಂದ 45 ಡಿಗ್ರಿ ಸೆಲ್ಸಿಯಸ್‌ ವರೆಗೆ ಬಿಸಿಲು ಇರುತ್ತದೆ. ವಿಪರೀತ ಸೆಕೆ, ಬಿಸಿಲ ಝಳವೂ ಇರುತ್ತದೆ. ಇಂತಹ ಪ್ರತಿಕೂಲ ವಾತಾವರಣದಲ್ಲಿ ಅವುಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದ ಅಗತ್ಯ ಹೆಚ್ಚಿರುತ್ತದೆ. ಇದಕ್ಕೆ ಪೂರಕವಾಗಿ ಉದ್ಯಾನದಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

‘ರಮ್ಯಾ‘ಳನ್ನು ಇರಿಸಿರುವ ಹುಲಿ ಮನೆಯಲ್ಲಿ ಫ್ಯಾನ್‌, ಮಂಜಿನ ರೂಪದಲ್ಲಿ ನೀರು ಚಿಮ್ಮಿಸುವ ಫಾಗರ್‌ ಅಳವಡಿಸಲಾಗಿದೆ. ದಿನದ ಮೂರು ಸಮಯ ಹುಲಿ ಮನೆಯೊಳಗೆ ಹಾಗೂ ಅದರ ಸುತ್ತಮುತ್ತ ನೀರು ಚಿಮುಕಿಸಿ ಇಡೀ ಪರಿಸರ ತಂಪಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ. ಜೀರ್ಣಶಕ್ತಿ ಕುಂದುವುದರಿಂದ ಬೇಗ ಜಗಿದು ನುಂಗಲು ಸಹಾಯವಾಗುವಂತೆ ಮೃದುವಾದ ಮಾಂಸ ನೀಡಲಾಗುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ವೇಳೆ ನುರಿತ ವೈದ್ಯರು ಭೇಟಿ ನೀಡಿ, ಅದರ ಚಲನವಲನ ಪರಿಶೀಲಿಸುತ್ತಿದ್ದಾರೆ.

‘ರಮ್ಯಾ‘ಳನ್ನು ಏಪ್ರಿಲ್‌ ಕೊನೆಯ ವಾರ ಅಥವಾ ಮೇ ಮೊದಲ ವಾರ ಮೈಸೂರಿನ ಪ್ರಾಣಿ ಸಂಗ್ರಹಾಲಯದ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿಕೊಡಲು ಯೋಜಿಸಲಾಗಿತ್ತು. ಆದರೆ, ಅದಕ್ಕೆ ಪೂರಕವಾದ ವಾತಾವರಣ ಇಲ್ಲಿಯೇ ನಿರ್ಮಿಸಿರುವುದರಿಂದ ವಾಜಪೇಯಿ ಉದ್ಯಾನದಲ್ಲಿಯೇ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ.

‘ಎರಡು ವರ್ಷಗಳ ಹಿಂದೆ ನಮ್ಮ ಉದ್ಯಾನಕ್ಕೆ ಬಂದಿರುವ ರಮ್ಯಾ ಸ್ಥಳೀಯ ಪರಿಸರಕ್ಕೆ ಹೊಂದಿಕೊಂಡಿದ್ದಾಳೆ. ಆದರೆ, ಈಗ ವಯಸ್ಸಾಗಿದೆ. ಸಹಜವಾಗಿ ಮನುಷ್ಯರಂತೆಯೇ ಪ್ರಾಣಿಗಳಿಗೂ ನಿಶ್ಶ್ಯಕ್ತಿ ಶುರುವಾಗುತ್ತದೆ. ಮೇ ತಿಂಗಳಲ್ಲಿ ಹೆಚ್ಚು ಬಿಸಿಲು ಇರುವುದರಿಂದ ಮೈಸೂರಿನ ಜೂಗೆ ಕಳುಹಿಸಿಕೊಡಲು ಉದ್ದೇಶಿಸಲಾಗಿತ್ತು. ಮೃಗಾಲಯದ ಪ್ರಾಧಿಕಾರದ ಅಧಿಕಾರಿಗಳ ಸಲಹೆ ಮೇರೆಗೆ ಇಲ್ಲಿಯೇ ಉಳಿಸಿಕೊಳ್ಳಲು ತೀರ್ಮಾನಿಸಲಾಗಿದೆ’ ಎಂದು ವಾಜಪೇಯಿ ಉದ್ಯಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎನ್‌. ಕಿರಣ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಸಿಂಹಗಳು 45 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕ ಬಿಸಿಲಿದ್ದರೂ ಅದಕ್ಕೆ ಹೊಂದಿಕೊಳ್ಳುತ್ತವೆ. ಆದರೆ, ಹುಲಿಗಳು ಹಾಗಲ್ಲ. ಅದರಲ್ಲೂ ವಯಸ್ಸಾದ ನಂತರ ಅವುಗಳು ಸೂಕ್ಷ್ಮವಾಗುತ್ತವೆ. ದಿನದ 24 ಗಂಟೆ ಹುಲಿ ಮನೆ ತಂಪಾಗಿರಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT