ಗುರುವಾರ , ಜೂನ್ 4, 2020
27 °C

ತಬಲ ಸಾಧಕ ಕೊಟ್ರೇಶ್‌

ಸಿ.ಶಿವಾನಂದ Updated:

ಅಕ್ಷರ ಗಾತ್ರ : | |

Prajavani

ಹಗರಿಬೊಮ್ಮನಹಳ್ಳಿ: ತಬಲ ವಾದನದಲ್ಲಿ ಹಿರಿದಾದ ಸಾಧನೆ ಮಾಡುತ್ತಿರುವ ಸಿ.ಕೊಟ್ರೇಶ್‌, ಅಪ್ಪಟ್ಟ ಗ್ರಾಮೀಣ ಪ್ರತಿಭೆ.

ತಾಲ್ಲೂಕಿನ ಮೋರಿಗೇರಿಯ ಕೃಷಿಕ ಮನೆತನದಲ್ಲಿ ಜನಿಸಿರುವ ಕೊಟ್ರೇಶ್‌, ಹದಿನೈದು ವರ್ಷಗಳಿಂದ ತಬಲ ನುಡಿಸುತ್ತ ಸಂಗೀತ ಸೇವೆ ಮಾಡುತ್ತಿದ್ದಾರೆ.

ಅಂದಹಾಗೆ, ಕೊಟ್ರೇಶ್‌ ಅವರಿಗೆ ತಬಲ ನುಡಿಸುವುದರ ಬಗ್ಗೆ ಆಸಕ್ತಿ ಬೆಳೆದದ್ದು ನಾಲ್ಕನೇ ತರಗತಿಯಲ್ಲಿದ್ದಾಗ. ಅವರ ತಂದೆ ಸಿ. ಬಸವರಾಜಪ್ಪ ಅವರು ಮಗನಿಗೆ ತಬಲ ವಾದಕ, ಗಾಯಕ ಹಕ್ಕಂಡಿ ವಾಮದೇವ ಗವಾಯಿಗಳ ಬಳಿ ಸಂಗೀತ ಶಿಕ್ಷಣಕ್ಕೆ ಸೇರಿಸಿದರು. ಸತತವಾದ ಕಠಿಣ ಪರಿಶ್ರಮದಿಂದ ಕೊಟ್ರೇಶ್‌, ಗುರುಗಳ ಮೆಚ್ಚಿನ ಶಿಷ್ಯರಾದರು. ಅಪ್ಪನ ನಿರೀಕ್ಷೆಗೆ ಅನುಗುಣವಾಗಿ ತಬಲದಲ್ಲಿ ಕಿರಿಯ, ಹಿರಿಯ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಉತ್ತೀರ್ಣರಾಗಿ ಅಪ್ಪಟ್ಟ ತಬಲ ವಾದಕರಾಗಿ ಹೊರಹೊಮ್ಮಿದರು. ಖ್ಯಾತ ತಬಲ ವಾದಕರಾದ ಭೀಮಸೇನ್ ಮರೋಳ್ ಮತ್ತು ಗುಡದಪ್ಪ ಮರೋಳ್ ಅವರ ಒಡನಾಟ ಬೆಳೆಸಿಕೊಂಡು ಉತ್ತಮ ಕಲಾವಿದರಾದರು.

ಕೊಟ್ರೇಶ್‌ ಎಂ.ಎ.,ಬಿ.ಇಡಿ. ಪದವೀಧರರೂ ಹೌದು. ಶೈಕ್ಷಣಿಕ ಚಟುವಟಿಕೆಗಳ ಜತೆಗೆ ತಬಲ ವಾದನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅವರು ಪದವಿಯಲ್ಲಿದ್ದಾಗ ಕಲಬುರ್ಗಿಯಲ್ಲಿ ಹಮ್ಮಿಕೊಂಡಿದ್ದ ಅಂತರ ಕಾಲೇಜು ಯುವಜನೋತ್ಸವದಲ್ಲಿ ತಬಲ ನುಡಿಸಿ ಬೆಳ್ಳಿ ಪದಕ ಗೆದ್ದಿದ್ದರು. 

2017ರಲ್ಲಿ ಮಣಿಪುರದಲ್ಲಿ ನಡೆದ ಅಂತರರಾಷ್ಟ್ರೀಯ ಹೊರನಾಡು ಉತ್ಸವದಲ್ಲಿ ತಬಲ ನುಡಿಸಿ ನೆರೆದ ಸಾವಿರಾರು ಜನರ ಮೆಚ್ಚುಗೆಗೆ ಪಾತ್ರರಾದರು. ಪ್ರತಿ ವರ್ಷ ಹಂಪಿ ಉತ್ಸವದಲ್ಲೂ ಕಾರ್ಯಕ್ರಮ ನೀಡುತ್ತಾರೆ. ಆಕಾಶವಾಣಿ, ದೂರದರ್ಶನದಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅನೇಕ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ.

ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಹೆಸರಾಂತ ಕಲಾವಿದರಾದ ಶಿವಾನಂದ ಪಾಟೀಲ ಬಾಂಬೆ, ಶ್ವೇತಾ ಪ್ರಭು, ಮಧುರೆ ಮರಿಸ್ವಾಮಿ ಅವರೊಂದಿಗೆ ಕಾರ್ಯಕ್ರಮ ನೀಡಿದ್ದಾರೆ. ಬಡ ಪ್ರತಿಭೆಗಳಿಗೆ ಉಚಿತ ಸಂಗೀತ ಶಿಕ್ಷಣ ನೀಡುವ ಯೋಚನೆ ಕೊಟ್ರೇಶ್‌ ಹೊಂದಿದ್ದಾರೆ.

‘ನಿತ್ಯ ನಿರಂತರ ಪರಿಶ್ರಮದಿಂದಷ್ಟೇ ಸಾಧನೆ ಸಾಧ್ಯ. ಅದಕ್ಕೆ ಬೇರೆ ಮಾರ್ಗವಿಲ್ಲ. ನಾನು ಕಲಿತ ಕಲೆ ನನ್ನೊಂದಿಗೆ ಕೊನೆಯಾಗಬಾರದು. ಈ ಕಾರಣಕ್ಕಾಗಿ ಆಸಕ್ತರಿಗೆ ಉಚಿತವಾಗಿ ತಬಲ ತರಬೇತಿ ನೀಡಲು ಯೋಚಿಸುತ್ತಿದ್ದೇನೆ‘ ಎಂದು ಕೊಟ್ರೇಶ್‌ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು