ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್‌ ಯುಗದಲ್ಲಿ ತಂತ್ರಜ್ಞಾನದ ಅರಿವು ಅಗತ್ಯ: ಪ್ರೊ. ಸದ್ಯೋಜಾತ ಅಭಿಮತ

Last Updated 15 ಸೆಪ್ಟೆಂಬರ್ 2021, 11:39 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಎಲ್ಲಾ ವಲಯಗಳು ಡಿಜಿಟಲೀಕರಣಗೊಂಡಿವೆ. ತಂತ್ರಜ್ಞಾನದ ಅರಿವು ಅಗತ್ಯ’ ಎಂದು ಬಳ್ಳಾರಿ ಬಿ.ಐ.ಟಿ.ಎಂ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಕೆ.ಎಂ. ಸದ್ಯೋಜಾತ ತಿಳಿಸಿದರು.

ಎಂಜಿನಿಯರ್‌ ದಿನಾಚರಣೆ ಪ್ರಯುಕ್ತ ನಗರದ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ (ಪಿಡಿಐಟಿ) ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ವಾಣಿಜ್ಯ, ಉತ್ಪಾದನೆ, ಆರೋಗ್ಯ, ಶಿಕ್ಷಣ ಮುಂತಾದ ಕ್ಷೇತ್ರಗಳು ಡಿಜಿಟಲೀಕರಣದ ಮೂಲಕ ತಮ್ಮ ಸೇವಾ ವಲಯಗಳನ್ನು ಜಾಗತಿಕ ಮಟ್ಟಕ್ಕೆ ಚಾಚಿಕೊಂಡಿವೆ. ಅದರ ಸದುಪಯೋಗ ಪಡೆಯಬೇಕಾದರೆ ತಂತ್ರಜ್ಞಾನ ತಿಳಿಯುವುದು ಅಗತ್ಯ. ಈ ಕಾಲದ ತುರ್ತು ಕೂಡ ಹೌದು’ ಎಂದು ಹೇಳಿದರು.

‘ಮಾರುಕಟ್ಟೆ ಪರಿಣಿತರ ಪ್ರಕಾರ ಕೋವಿಡ್ ಸಂಕಷ್ಟಕ್ಕೆ ತಕ್ಷಣದ ಪರಿಹಾರ ಕಂಡುಕೊಳ್ಳಲು ಆಗದಿದ್ದರೂ ಕ್ರಮೇಣ ಪರಿಸ್ಥಿತಿ ಸುಧಾರಿಸಬಹುದು. ಈ ನಿಟ್ಟಿನಲ್ಲಿ ತಾಂತ್ರಿಕ ಪರಿಣಿತರ ಪಾತ್ರ ಬಹು ಮುಖ್ಯವಾಗಿದೆ. ಸಮಾಜವನ್ನು ಮುನ್ನಡೆಸುವ, ಗ್ರಾಮೀಣ ಜನರನ್ನು ಕೂಡ ತಮ್ಮ ಜೊತೆಗೆ ಕರೆದೊಯ್ಯುವ ಸವಾಲು ಇದೆ. ಅದನ್ನು ತಂತ್ರಜ್ಞರು ನಿಭಾಯಿಸಬೇಕು’ ಎಂದು ತಿಳಿಸಿದರು.

‘ಕೋವಿಡ್ ಅನೇಕ ಸಂಕಟಗಳನ್ನು ತಂದಂತೆ ಅನೇಕ ಅವಕಾಶಗಳ ಬಾಗಿಲುಗಳನ್ನು ಕೂಡ ತೆರೆದಿದೆ. ನಿರುದ್ಯೋಗ ಪರಿಹರಿಸಲು ಹೊಸ ಕೌಶಲ ಅಳವಡಿಸಿಕೊಳ್ಳಬೇಕು. ಇಂದಿನ ಸಂದರ್ಭಕ್ಕೆ ಕೌಶಲ ಅಳವಡಿಸಿಕೊಳ್ಳುವುದು ಬಿಟ್ಟರೆ ಬೇರೆ ಮಾರ್ಗವಿಲ್ಲ’ ಎಂದರು.

ಮುನಿರಾಬಾದಿನ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರ್ಸ್‌ ಘಟಕದ ಅಧ್ಯಕ್ಷ ಪ್ರಹ್ಲಾದ್ ಮಾತನಾಡಿ, ‘ತಮ್ಮ ಸಂಸ್ಥೆಯು ಕೋವಿಡ್ ಸಂದರ್ಭದಲ್ಲಿ ಕೂಡ ಹಲವು ವೆಬಿನಾರ್ ಸರಣಿಗಳ ಮೂಲಕ ಆಧುನಿಕ ತಾಂತ್ರಿಕ ವಿಷಯಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿದೆ. ಶತಮಾನ ಪೂರೈಸಿದ ಈ ರಾಷ್ಟ್ರೀಯ ಸಂಸ್ಥೆಯನ್ನು ನಿರ್ವಹಿಸುವ ಹೊಣೆಗಾರಿಕೆ ಯುವ ಪೀಳಿಗೆ ಮೇಲಿದೆ’ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಎಸ್.ಎಂ.ಶಶಿಧರ್ ಮಾತನಾಡಿ, ‘ಎಂಜಿನಿಯರುಗಳು ತಮ್ಮ ವೃತ್ತಿ ಚೌಕಟ್ಟಿನ ಆಚೆಗೆ ಸಮಾಜದ ಅಗತ್ಯಗಳಿಗೆ ಸ್ಪಂದಿಸುವ, ತಾಂತ್ರಿಕ ಪರಿಹಾರಗಳನ್ನು ಒದಗಿಸುವ ಕಡೆ ಗಮನ ಹರಿಸಬೇಕು’ ಎಂದರು.

ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಪಲ್ಲೇದ ದೊಡ್ಡಪ್ಪ, ‘ಸಮಾಜ ಮತ್ತು ದೇಶವನ್ನು ಕಟ್ಟಲು ಎಂಜಿನಿಯರಿಂಗ್ ವೃತ್ತಿಪರರ ಕೊಡುಗೆ ಅಪಾರ. ಸೃಜನಶೀಲತೆ, ಆವಿಷ್ಕಾರ ಹಾಗೂ ವಿಜ್ಞಾನದ ಸರಿಯಾದ ಅಳವಡಿಕೆಯಿಂದ ಯಾವುದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ’ ಎಂದು ತಿಳಿಸಿದರು.

ಮುನಿರಾಬಾದಿನ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರ್ಸ್‌ ಘಟಕದ ಕಾರ್ಯದರ್ಶಿ ಡಬ್ಲ್ಯೂ. ಲಲಿತ್ ಪ್ರಸಾದ್, ಎ.ವಿ. ವಿಜಯಕುಮಾರ್‌, ಪ್ರೊ. ಮಧ್ವರಾಜ, ಚಂದ್ರಗೌಡ, ಪ್ರೊ. ವೀಣಾ, ಪ್ರೊ. ಬಸವರಾಜ, ಪ್ರೊ. ರಜನಿ ಉಮಾಪತಿ, ಪ್ರೊ.ಜಿ.ಸಿ. ಸುಮಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT