ಮಂಗಳವಾರ, ಆಗಸ್ಟ್ 3, 2021
26 °C
ವೈದ್ಯರೊಂದಿಗಿನ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸೂಚನೆ

ಹಣದ ಕೊರತೆ ಇಲ್ಲ, ಒಗ್ಗಟ್ಟಿನಿಂದ ಕೆಲಸ ಮಾಡಿ: ಸಚಿವ ಆನಂದ್‌ ಸಿಂಗ್‌ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹೊಸಪೇಟೆ: ‘ಕೋವಿಡ್‌ ಎದುರಿಸಲು ಹಣದ ಕೊರತೆ ಇಲ್ಲ. ಈಗ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಹೇಳಿದರು.

ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಹೋಟೆಲ್‌ ಮಾಲೀಕರು ಹಾಗೂ ವೈದ್ಯರೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ‘ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಹೋಟೆಲ್‌ ಮಾಲೀಕರಿಗೆ ಹಣ ಮಾಡುವುದು ಉದ್ದೇಶವಾಗಬಾರದು. ಜನರ ಪ್ರಾಣ ಉಳಿಸುವುದು ಎಲ್ಲಕ್ಕಿಂತ ಮುಖ್ಯ’ ಎಂದರು.

‘ಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳು ಹೆಚ್ಚಾಗಲಿವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅದನ್ನು ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುವುದು ಅಗತ್ಯ. ಹೋಟೆಲ್‌ಗಳನ್ನು ಗುರುತಿಸಿ, ಅಲ್ಲಿ ಅಗತ್ಯ ತಯಾರಿ ಮಾಡಬೇಕು. ಹೋಟೆಲ್‌ ಮಾಲೀಕರನ್ನು ಕೇಳಿದರೆ ಅವರು ಏನೂ ಹೇಳುತ್ತಿಲ್ಲ. ಹೇಳುವುದೂ ಇಲ್ಲ. ಯಾವ ಹೋಟೆಲ್‌ಗಳು ರೋಗಿಗಳ ಆರೈಕೆಗೆ ಸೂಕ್ತ ಎನ್ನುವುದನ್ನು ತಹಶೀಲ್ದಾರ್‌ ಹಾಗೂ ವೈದ್ಯರು ಗುರುತಿಸಿ ತಿಳಿಸಿದರೆ ಅವುಗಳನ್ನು ಅಂತಿಮಗೊಳಿಸಲಾಗುವುದು’ ಎಂದು ಹೇಳಿದರು.

‘ಎಲ್ಲ ಹೋಟೆಲ್‌ ಮಾಲೀಕರು ಅಗತ್ಯ ಸಹಕಾರ ಕೊಡುತ್ತಾರೆ ಎಂಬ ಭರವಸೆ ಇದೆ. ಯಾವ ಹೋಟೆಲ್‌ಗಳನ್ನು ರೋಗಿಗಳ ಆರೈಕೆಗೆ ಪಡೆಯಲಾಗುತ್ತದೋ ಅವುಗಳಿಗೆ ಹಣ ಪಾವತಿಸಲಾಗುವುದು. ಯಾರೂ ಹಣದ ಬಗ್ಗೆ ಅನಗತ್ಯವಾಗಿ ತಲೆ ಕೆಡಿಸಿಕೊಳ್ಳಬೇಕಿಲ್ಲ. ಹಣದ ವ್ಯವಸ್ಥೆ ಮಾಡುವುದು ನನಗೆ ಬಿಟ್ಟು ಬಿಡಿ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಹಣದ ವ್ಯವಸ್ಥೆ ಮಾಡುವುದು ನನ್ನ ಜವಾಬ್ದಾರಿ. ಹಣದ ಬಗ್ಗೆ ಸಮಸ್ಯೆ ಎದುರಾದರೆ ಅಧಿಕಾರಿಗಳು ನೇರವಾಗಿ ನನ್ನನ್ನು ಸಂಪರ್ಕಿಸಬಹುದು’ ಎಂದು ಅಭಯ ನೀಡಿದರು.

‘ಬಳ್ಳಾರಿಯ ಒಂದೇ ಆಸ್ಪತ್ರೆಯಲ್ಲಿ ಎಲ್ಲ ಸೋಂಕಿತರಿಗೂ ಚಿಕಿತ್ಸೆ ಕೊಡುವುದು ಬರುವ ದಿನಗಳಲ್ಲಿ ಕಷ್ಟವಾಗುತ್ತದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೋವಿಡ್‌  ರೋಗಿಗಳಿಗೆ ಚಿಕಿತ್ಸೆ ಕೊಡಲು ನಿರ್ಧರಿಸಲಾಗಿದೆ. ಹೀಗಾಗಿಯೇ ಸೂಕ್ತ ಸೌಲಭ್ಯ ಇರುವ ಹೋಟೆಲ್‌ಗಳನ್ನು ಗುರುತಿಸಿ, ಅಲ್ಲಿ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ’ ಎಂದರು.

‘ಇಡೀ ಜಿಲ್ಲೆಯಲ್ಲಿ ಹೊಸಪೇಟೆಯಲ್ಲಿ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಜನರ ಸಹಕಾರ ಕೂಡ ಅಷ್ಟೇ ಇದೆ. ಸಂಜೆ ಎಂಟು ಗಂಟೆ ನಂತರ ಜನ ಸ್ವಯಂಪ್ರೇರಣೆಯಿಂದ ಮಳಿಗೆಗಳನ್ನು ಮುಚ್ಚುತ್ತಿದ್ದಾರೆ. ಆದರೆ, ಬಳ್ಳಾರಿ ನಗರದಲ್ಲಿ ಈ ಪರಿಸ್ಥಿತಿ ಇಲ್ಲ. ಭಾನುವಾರದ ಲಾಕ್‌ಡೌನ್‌ ಇನ್ನಷ್ಟು ಬಿಗಿ ಮಾಡಬೇಕು. ಅನವಶ್ಯಕವಾಗಿ ಯಾರೂ ಹೊರಗೆ ಓಡಾಡದಂತೆ ತಡೆಯಬೇಕು’ ಎಂದು ಸೂಚಿಸಿದರು.

ಉಪವಿಭಾಗಾಧಿಕಾರಿ ಶೇಕ್‌ ತನ್ವೀರ್‌ ಆಸಿಫ್‌, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಭಾಸ್ಕರ್‌ ಇದ್ದರು.

‘ಬೇರೆ ಜಿಲ್ಲೆಗಳ ಫಲಿತಾಂಶ ನೋಡಿ ಲಾಕ್‌ಡೌನ್‌’

‘ಬಳ್ಳಾರಿ ಜಿಲ್ಲೆಯಲ್ಲಿ ಸದ್ಯಕ್ಕೆ ಲಾಕ್‌ಡೌನ್‌ ಮಾಡುವುದಿಲ್ಲ. ಸದ್ಯ ಯಾವ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಮಾಡಲಾಗಿದೆಯೋ ಅಲ್ಲಿ ಸಕಾರಾತ್ಮಕ ಫಲಿತಾಂಶ ಬಂದರಷ್ಟೇ ಜಿಲ್ಲೆಯಲ್ಲಿ ಲಾಕ್‌ಡೌನ್‌ ಕುರಿತು ಚಿಂತಿಸಲಾಗುವುದು’ ಎಂದು ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆಲವರು ಲಾಕ್‌ಡೌನ್‌ ಮಾಡಿ ಎಂದರೆ, ಕೆಲವರು ಬೇಡ ಎನ್ನುತ್ತಿದ್ದಾರೆ. ಕೂಲಿ ಕಾರ್ಮಿಕರು, ಆಟೊ ಚಾಲಕರು ಸೇರಿದಂತೆ ಸಣ್ಣಪುಟ್ಟ ಕೆಲಸ ಮಾಡುವವರಿಗೆ ಲಾಕ್‌ಡೌನ್‌ ಮಾಡಿದರೆ ಬಹಳ ತೊಂದರೆ ಆಗುತ್ತದೆ. ಹೀಗಾಗಿ ಎಲ್ಲವನ್ನೂ ಆಲೋಚಿಸಿ ಮುಂದುವರೆಯಲು ತೀರ್ಮಾನಿಸಲಾಗಿದೆ. ಲಾಕ್‌ಡೌನ್‌ ಮಾಡುವಂತೆ ಶಾಸಕ ಭೀಮಾ ನಾಯ್ಕ ನೀಡಿರುವ ಸಲಹೆ ಪರಿಗಣಿಸಲಾಗುವುದು’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು