ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ಫಲಿತಾಂಶವೇಕೆ ಕುಸಿತ: ಬಿಇಒಗೆ ಪ್ರಶ್ನೆ

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ
Last Updated 16 ಸೆಪ್ಟೆಂಬರ್ 2020, 13:04 IST
ಅಕ್ಷರ ಗಾತ್ರ

ಹೊಸಪೇಟೆ: ‘ಸರ್ಕಾರ ಪ್ರತಿವರ್ಷ ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಣೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಹೀಗಿದ್ದರೂ ವರ್ಷದಿಂದ ವರ್ಷಕ್ಕೆ ಅವುಗಳ ಫಲಿತಾಂಶವೇಕೆ ಕುಸಿಯುತ್ತಿದೆ?’

ಹೀಗೆ ಮೇಲಿನಂತೆ ಪ್ರಶ್ನಿಸಿದವರು ತಾಲ್ಲೂಕು ಪಂಚಾಯಿತಿ ಸದಸ್ಯ ಕೆ. ಗಾದಿಲಿಂಗಪ್ಪ. ಬುಧವಾರ ನಗರದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಬಹಳ ಕಡಿಮೆ ಸಂಪನ್ಮೂಲಗಳಿದ್ದರೂ ಖಾಸಗಿ ಶಾಲೆಗಳ ಫಲಿತಾಂಶ ಉತ್ತಮವಾಗಿ ಬರುತ್ತಿದೆ. ಆದರೆ, ಎಲ್ಲ ಇದ್ದರೂ ಸರ್ಕಾರಿ ಶಾಲೆಗಳಿಗೇಕೆ ಅದು ಸಾಧ್ಯವಾಗುತ್ತಿಲ್ಲ’ ಎಂದು ಆಕ್ರೋಶಭರಿತರಾಗಿ ನುಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ, ‘ಶಿಕ್ಷಕರು ಸೇರಿದಂತೆ ಸುಸಜ್ಜಿತ ಕಟ್ಟಡ, ಮೂಲಸೌಕರ್ಯಗಳ ಕೊರತೆ ಇದೆ. ಹೀಗಿದ್ದರೂ ಉತ್ತಮ ರೀತಿಯಲ್ಲಿ ಪಾಠ ಪ್ರವಚನ ಮಾಡಲಾಗುತ್ತಿದೆ. ಶಿಕ್ಷಕರು ವಿದ್ಯಾಗಮ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುತ್ತಿದ್ದಾರೆ’ ಎಂದರು.

‘ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ತರಲು ಪ್ರಯತ್ನಿಸಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ಶಿಕ್ಷಕರ ನಿರಂತರ ತರಬೇತಿಗೆ ಖಾಸಗಿ ಶಾಲೆಗಳನ್ನು ಅವಲಂಬಿಸಬೇಕಿದೆ. ಗುರುಭವನ ಹಿಂಭಾಗದಲ್ಲಿ ಸುಸಜ್ಜಿತ ತರಬೇತಿ ಕೇಂದ್ರ, ಪಠ್ಯಪುಸ್ತಕಗಳ ಸಂಗ್ರಹಕ್ಕೆ ಕಟ್ಟಡ ಬೇಕಿದೆ’ ಎಂದರು.

‘ರೈತರಿಗೆ ಸಕಾಲಕ್ಕೆ ರಸಗೊಬ್ಬರ, ಬೀಜ ಸಿಗುತ್ತಿಲ್ಲ. ತಾಡಪಾಲು ನೀಡದ್ದರಿಂದ ರೈತರ ಬೆಳೆ ನೀರುಪಾಲಾಗುತ್ತಿದೆ. ಆದರೂ ಕೃಷಿ ಇಲಾಖೆ ಎಲ್ಲ ನೋಡಿಕೊಂಡು ಸುಮ್ಮನಿದೆ’ ಎಂದು ಸದಸ್ಯ ಬಿ.ಎಸ್‌. ರಾಜಪ್ಪ ಖಾರವಾಗಿ ಹೇಳಿದರು.

‘ರೈತರಿಗೆ ಯೂರಿಯಾ ಪೂರೈಕೆಗೆ ಒಂದು ವಾರ ತಡವಾಗಿದೆಯಷ್ಟೇ. ಇದುವರೆಗೆ ಸರ್ಕಾರದಿಂದ ತಾಡಪಾಲು ಬಂದಿಲ್ಲ. ಬಂದ ನಂತರವೇ ಶೀಘ್ರವಾಗಿ ಎಲ್ಲರಿಗೂ ವಿತರಿಸಲಾಗುವುದು’ ಎಂದು ಸಹಾಯಕ ಕೃಷಿ ನಿರ್ದೇಶಕಿ ಎಚ್‌. ನಾಗರತ್ನ ತಿಳಿಸಿದರು.

ಅಧ್ಯಕ್ಷೆ ನಾಗವೇಣಿ ಬಸವರಾಜ, ‘ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳ ನಿರ್ವಹಣೆ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಇದರಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ಅವುಗಳ ನಿರ್ವಹಣೆಗೆ ಒತ್ತು ಕೊಡಬೇಕು’ ಎಂದು ಸೂಚನೆ ಕೊಟ್ಟರು.

‘ಪ್ರತಿಯೊಂದು ಕಾಯಿಲೆಗೂ ರೋಗಿಗಳನ್ನು ಬಳ್ಳಾರಿಯ ವಿಮ್ಸ್‌ಗೆ ಕಳಿಸಿಕೊಡಲಾಗುತ್ತಿದೆ. ತಾಲ್ಲೂಕು ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡುವಂತಾಗಬೇಕು’ ಎಂದು ಸದಸ್ಯ ರಾಜಪ್ಪ ಆಗ್ರಹಿಸಿದರು.

ತಾಲ್ಲೂಕು ಆರೋಗ್ಯ ಅಧಿಕಾರಿ ಭಾಸ್ಕರ್‌ ಪ್ರತಿಕ್ರಿಯಿಸಿ, ‘ತಾಲ್ಲೂಕು ಆಸ್ಪತ್ರೆಯಲ್ಲಿ ಕೆಲವೊಂದು ಚಿಕಿತ್ಸಾ ಸಾಧನಗಳಿಲ್ಲ. ಹಾಗಾಗಿ ಕೆಲವರನ್ನು ವಿಮ್ಸ್‌ಗೆ ಕಳಿಸಿಕೊಡುತ್ತಿರುವುದು ನಿಜ. ತಾಲ್ಲೂಕಿನಲ್ಲಿ ಒಟ್ಟು 5,400 ಜನರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಈ ಪೈಕಿ 400 ಸಕ್ರಿಯ ಪ್ರಕರಣಗಳಿವೆ. 60 ಜನ ಸಾವಿಗೀಡಾಗಿದ್ದಾರೆ. ಚೇತರಿಕೆ ಪ್ರಮಾಣ ಹೆಚ್ಚಿದೆ’ ಎಂದು ತಿಳಿಸಿದರು.

ಕಾರ್ಯನಿರ್ವಾಹಕ ಅಧಿಕಾರಿ ಆರ್.ಕೆ. ಶ್ರೀಕುಮಾರ್, ಉಪಾಧ್ಯಕ್ಷ ಮಜ್ಜಿಗಿ ಶಿವಪ್ಪ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಬ್ಬಮ್ಮ ನಾಯಕರ, ಸದಸ್ಯೆಯರಾದ ಲಕ್ಷ್ಮವ್ವ ಸೋಮಿನಾಯ್ಕ, ಹನುಮಕ್ಕ, ಜೋಗದ ನೀಲಮ್ಮ, ತೋಟಗಾರಿಕೆ ಇಲಾಖೆಯ ನಿರ್ದೇಶಕ ರಾಜೇಂದ್ರ, ವಲಯ ಅರಣ್ಯ ಅಧಿಕಾರಿ ವಿನಯ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಿಶೋರ ಕುಮಾರ, ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಹನುಮಂತಪ್ಪ, ಅಕ್ಷರ ದಾಸೋಹ ಅಧಿಕಾರಿ ಪನಮೇಶಲು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT