ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಯುಯುಸಿಎಂಎಸ್‌ನಿಂದ ಪದವಿ ಪ್ರವೇಶ ನಿಧಾನ, ವಿದ್ಯಾರ್ಥಿಗಳಿಗೆ ಸಮಸ್ಯೆ

ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಸ್ಯೆ; ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ₹200
Last Updated 19 ಜುಲೈ 2022, 19:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ’ (ಯು.ಯು.ಸಿ.ಎಂ.ಎಸ್.) ಜಾರಿಗೆ ಬಂದ ನಂತರ ಜಿಲ್ಲೆಯ ಪದವಿ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ತೀರ ನಿಧಾನ ಗತಿಯಲ್ಲಿ ನಡೆಯುತ್ತಿದೆ.

ಯು.ಯು.ಸಿ.ಎಂ.ಎಸ್‌. ಅನುಷ್ಠಾನಕ್ಕೆ ಬಂದ ನಂತರ ವಿದ್ಯಾರ್ಥಿಗಳು ಅವರಿದ್ದ ಸ್ಥಳದಲ್ಲಿಯೇ ಕಾಲೇಜು ಆಯ್ಕೆ ಮಾಡಿಕೊಂಡು ಸುಲಭವಾಗಿ ಪ್ರವೇಶ ಪಡೆಯಬಹುದು ಎಂದು ಸರ್ಕಾರ ಹೇಳುತ್ತಿದೆ. ಆದರೆ, ಅನೇಕ ವಿದ್ಯಾರ್ಥಿಗಳಿಗೆ ಇದು ಕಗ್ಗಂಟಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದವರು ಇದರಿಂದ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಕೂಡ ನಿಧಾನ ಗತಿಯ ಪ್ರವೇಶ ಪ್ರಕ್ರಿಯೆಗೆ ಮುಖ್ಯ ಕಾರಣ.

ಮೂಲಗಳ ಪ್ರಕಾರ, ನಗರದ ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜು.10ರಿಂದ ಇದುವರೆಗೆ 300 ವಿದ್ಯಾರ್ಥಿಗಳಷ್ಟೇ ಪ್ರವೇಶ ಪಡೆಯಲು ಸಾಧ್ಯವಾಗಿದೆ. ಹೋದ ವರ್ಷ ಇದೇ ಸಂದರ್ಭದಲ್ಲಿ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದರು. ಜಿಲ್ಲೆಯ ಹೆಚ್ಚಿನ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಇದೇ ಪರಿಸ್ಥಿತಿ ಇದೆ. ಸರ್ಕಾರಿ ಕಾಲೇಜುಗಳಿಗೆ ಹೋಲಿಸಿದರೆ ಖಾಸಗಿ ಅನುದಾನಿತ ಕಾಲೇಜುಗಳ ಪರಿಸ್ಥಿತಿ ಉತ್ತಮವಾಗಿದೆ.

ಅನುದಾನಿತ ಕಾಲೇಜುಗಳ ಆಡಳಿತ ಮಂಡಳಿಯವರು ವಿಶೇಷ ಆಸಕ್ತಿ ವಹಿಸಿ ಅವರ ಸಿಬ್ಬಂದಿಗೆ ಯು.ಯು.ಸಿ.ಎಂ.ಎಸ್‌. ಬಗ್ಗೆ ತರಬೇತಿ ಕೊಟ್ಟಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಅವರೇ ಉಚಿತವಾಗಿ ಮಾಡಿಕೊಡುತ್ತಿದ್ದಾರೆ. ವಿದ್ಯಾರ್ಥಿಗಳು ಬಯಸಿದರೆ ಮಾರ್ಗದರ್ಶನವೂ ಮಾಡುತ್ತಿದ್ದಾರೆ. ಆದರೆ, ಸರ್ಕಾರಿ ಕಾಲೇಜುಗಳಲ್ಲಿ ಈ ವ್ಯವಸ್ಥೆ ಇಲ್ಲ ಎನ್ನುವುದು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಅಳಲು.

‘ಹೋದ ವರ್ಷ ಆನ್‌ಲೈನ್‌ ಹಾಗೂ ಆಫ್‌ಲೈನ್‌ ಎರಡರಲ್ಲೂ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈ ವರ್ಷ ಸಂಪೂರ್ಣವಾಗಿ ಆನ್‌ಲೈನ್‌ನಲ್ಲೇ ಮಾಡಿರುವುದರಿಂದ ಬಹಳ ಸಮಸ್ಯೆಯಾಗುತ್ತಿದೆ. ಕೆಲವು ತಾಂತ್ರಿಕ ವಿಷಯಗಳು ಗೊತ್ತಾಗದ ಕಾರಣ ಪ್ರವೇಶ ಪಡೆಯಲು ಆಗುತ್ತಿಲ್ಲ’ ಎಂದು ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ವಿದ್ಯಾರ್ಥಿನಿ ನಾಗಲಾಂಬಿಕೆ ಹೇಳಿದರು.

‘ಯು.ಯು.ಸಿ.ಎಂ.ಎಸ್‌. ಸುಲಭ ಎಂದು ಹೇಳುತ್ತಿದ್ದಾರೆ. ಆದರೆ, ಪದೇ ಪದೇ ‘ಹ್ಯಾಂಗ್‌’ ಆಗುತ್ತದೆ. ‘ಪೇಮೆಂಟ್‌’ ಆಗುವುದಿಲ್ಲ. ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳದೇ ಹಣ ಕಡಿತವಾಗುತ್ತಿದೆ. ಹಣವಿದ್ದವರೂ ಖಾಸಗಿಯವರ ಬಳಿ ಹೋಗಿ ₹200ರಿಂದ ₹300ರ ವರೆಗೆ ಕೊಟ್ಟು ಅರ್ಜಿ ಹಾಕಿಸುತ್ತಿದ್ದಾರೆ. ಗ್ರಾಮೀಣ ಬಡವರಿಗೆ ಇದು ಹೆಚ್ಚಿನ ಹೊರೆ. ಕೆಲವು ಕೇಂದ್ರಗಳವರು ಇದನ್ನೇ ಬಂಡವಾಳ ಮಾಡಿಕೊಂಡು ಹಣ ಗಳಿಸುತ್ತಿದ್ದಾರೆ’ ಎಂದು ಹೊಸಪೇಟೆಯ ಬಸವರಾಜ, ರೋಹಿತ್‌, ಮಲ್ಲಿಕಾರ್ಜುನ ತಿಳಿಸಿದರು.

‘ಯು.ಯು.ಸಿ.ಎಂ.ಎಸ್‌. ಬಂದ ನಂತರ ಅನೇಕ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಬೇಗ ಪ್ರವೇಶ ಪಡೆಯದೇ ಒದ್ದಾಡುತ್ತಿದ್ದಾರೆ. ಅನೇಕ ಜನ ನಿತ್ಯ ಕಾಲೇಜಿಗೆ ಬಂದು ಹೋಗುತ್ತಿದ್ದಾರೆ. ಅವರಿಗೆ ಸರಿಯಾಗಿ ಮಾರ್ಗದರ್ಶನ ಮಾಡುವವರೇ ಇಲ್ಲದಂತಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ಸರ್ಕಾರಿ ಕಾಲೇಜಿನ ಪ್ರಾಧ್ಯಾಕರೊಬ್ಬರು ತಿಳಿಸಿದರು.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎಸ್‌.ಸಿ. ಪಾಟೀಲ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ಹೊಸ ವ್ಯವಸ್ಥೆ ಬಹಳ ಸರಳವಾಗಿದೆ. ಹತ್ತು ನಿಮಿಷದಲ್ಲಿ ಪ್ರಕ್ರಿಯೆ ಮುಗಿಸಬಹುದು. ಮೊಬೈಲ್‌ನಲ್ಲೇ ಮಾಡಬಹುದು. ಒಂದುವೇಳೆ ಎಲ್ಲಾದರೂ ನಿರ್ದಿಷ್ಟವಾಗಿ ಸಮಸ್ಯೆಯಿದ್ದರೆ ಅದನ್ನು ಗಮನಕ್ಕೆ ತಂದರೆ ಬಗೆಹರಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT