ಭಾನುವಾರ, ಮೇ 22, 2022
21 °C

ವಚನ ಚಳವಳಿ ಅಸ್ಮಿತೆಯ ಚಳವಳಿ: ಬಸವರಾಜ ಸಾದರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ವಚನ ಚಳವಳಿ ಮನುಷ್ಯನ ಅಸ್ಮಿತೆ ಮತ್ತು ಅರಿವನ್ನು ಜಾಗೃತಗೊಳಿಸುವ ಕೆಲಸ ಮಾಡಿತು’ ಎಂದು ಬೆಂಗಳೂರು ಆಕಾಶವಾಣಿ ಕೇಂದ್ರದ ನಿವೃತ್ತ ನಿರ್ದೇಶಕ ಬಸವರಾಜ ಸಾದರ ತಿಳಿಸಿದರು.

ಕೂಡಲಸಂಗಮ ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದಿಂದ ಮಂಗಳವಾರ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು. 

‘ವಚನ ಚಳವಳಿಯು ಪ್ರಮುಖವಾಗಿ ಪ್ರಶ್ನಿಸುವ, ಪ್ರತಿಭಟಿಸುವ, ನಿರಾಕರಿಸುವ ಮತ್ತು ಪರ್ಯಾಯ ಸೂಚಿಸುವ ಅಂಶಗಳನ್ನು ಒಳಗೊಂಡಿದೆ. ಅರಿವೇ ನಿಜವಾದ ಧರ್ಮ ಎಂಬುದನ್ನು ತೋರಿಸಿಕೊಟ್ಟಿತು. ಮನುಷ್ಯರಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕುವ ಪ್ರವೃತ್ತಿಯನ್ನು ಬೆಳಸಿತು. ಇದಕ್ಕೆ ನಿದರ್ಶನವಾಗಿ ಈಗ ದೊರಕಿರುವ 23 ಸಾವಿರ ವಚನಗಳಲ್ಲಿ 10 ಸಾವಿರ ವಚನಗಳು ಪ್ರಶ್ನೆಯ ರೂಪದಲ್ಲಿರುವುದನ್ನು ಕಾಣಬಹುದು’ ಎಂದು ಹೇಳಿದರು.

‘ವಚನ ಚಳವಳಿಯು ಪ್ರಪಂಚದ ಇತರ ಕ್ರಾಂತಿಗಳಂತೆ ಇತಿಹಾಸದಲ್ಲಿ ಸರಿಯಾಗಿ ದಾಖಲಾಗಲಿಲ್ಲ. ವಚನ ಕ್ರಾಂತಿಯನ್ನು ಸಾಹಿತ್ಯ ಚಳವಳಿಯಾಗಿ ನೋಡಿದರೇ ಹೊರತು, ಸಾಮಾಜಿಕ ಕ್ರಾಂತಿಯಾಗಿ ಪರಿಗಣಿಸಲಿಲ್ಲ. ಇಂದಿಗೂ ಶರಣ ಚಳವಳಿಯನ್ನು ಹಿಂದೆ ತಳ್ಳುವ ಗೌಪ್ಯ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಲಿವೆ. ಇಂದು ಶರಣ ಚಳವಳಿಯನ್ನು ನಡೆಸುವ ಸಂಸ್ಥೆಗಳು ಶರಣೋದ್ಯಮಗಳಾಗುತ್ತಿವೆ’ ಎಂದು ವಿಷಾದಿಸಿದರು.

ವಿಶ್ರಾಂತ ಕುಲಪತಿ ಎ. ಮುರಿಗೆಪ್ಪ ಮಾತನಾಡಿ, ‘ಬಸವಣ್ಣನವರು ಜಾತಿ ಸೂತಕ ಬೇಡವೆಂದು ದೂರವಿದ್ದವರು. ಆದರೆ, ಇಂದು ಅವರನ್ನು ಮತ್ತೆ ಜಾತಿಯ ಬಂಧನಕ್ಕೆ ಸೀಮಿತಗೊಳಿಸುವ ಕೆಲಸವಾಗುತ್ತಿದೆ’ ಎಂದರು.

ಕುಲಪತಿ ಪ್ರೊ. ಸ.ಚಿ. ರಮೇಶ, ‘ಬಸವಣ್ಣನವರ ಚಿಂತನೆಗಳು ಎಲ್ಲಾ ಕಾಲಕ್ಕೂ ಪ್ರಸ್ತುತ. ಬಡವರು, ಅಂಚಿನ ಸಮುದಾಯದವರು, ಹಿಂದುಳಿದವರನ್ನು ಒಟ್ಟುಗೂಡಿಸಿ ಸಮ ಸಮಾಜ ನಿರ್ಮಾಣದ ಕಾರ್ಯ ಮಾಡಿದ್ದರು. ಬಸವಣ್ಣನವರು ಸಮಾಜದಲ್ಲಿನ ವೃತ್ತಿಗಳನ್ನು ಹಿರಿದು–ಕಿರಿದು ಎಂದು ಬೇಧ ಭಾವ ಮಾಡದೇ ಸಮಾನವಾಗಿ ಗೌರವಿಸುವ ಮೂಲಕ ವ್ಯಕ್ತಿಯ ಸ್ವಾಭಿಮಾನವನ್ನು ಎತ್ತಿ ಹಿಡಿದಿದ್ದರು’ ಎಂದು ಹೇಳಿದರು.

ಕುಲಸಚಿವ ಅಶೋಕಕುಮಾರ ರಂಜೇರೆ, ಪ್ರಾಧ್ಯಾಪಕ ಅಮರೇಶ ನುಗಡೋಣಿ, ಕೂಡಲಸಂಗಮದ 
ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದ ಸಂಚಾಲಕ ಎಸ್.ಆರ್ ಚನ್ನವೀರಪ್ಪ, ವಿದ್ಯಾರ್ಥಿಗಳಾದ ಗಂಗಮ್ಮ, ರಾಮಕೃಷ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು