ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ | ತಿಮ್ಮಲಾಪುರ: ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ, ಕಾಮಗಾರಿಗಳ ಪರಿಶೀಲನೆ

Last Updated 20 ಫೆಬ್ರುವರಿ 2021, 7:02 IST
ಅಕ್ಷರ ಗಾತ್ರ

ವಿಜಯನಗರ (ಹೊಸಪೇಟೆ): ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ತಾಲ್ಲೂಕಿನ ತಿಮ್ಮಲಾಪುರ ಗ್ರಾಮದಲ್ಲಿ ಆರಂಭಗೊಂಡಿದೆ.

ಸಾರ್ವಜನಿಕರ ಕುಂದು ಕೊರತೆ ಆಲಿಸುವುದಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಗ್ರಾಮದ ಸುತ್ತಮುತ್ತ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ತಾಳೆಬಸಾಪುರ ತಾಂಡಾದ ತಾಳೆ ವನದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಇಂಗುಗುಂಡಿ ಕಾಮಗಾರಿ ವೀಕ್ಷಿಸಿದರು. ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದರು. ಪುಷ್ಕರಣಿ ಜೀರ್ಣೋದ್ಧಾರ ಕೆಲಸ ನೋಡಿದರು.
ಬಳಿಕ ಗ್ರಾಮ ಹೊರವಲಯದ ಜಂಬುನಾಥ ಕೆರೆ ವೀಕ್ಷಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಸರ್ಕಾರದ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮದ ಭಾಗವಾಗಿ ತಿಮ್ಮಲಾಪುರದಲ್ಲಿ ಗ್ರಾಮ ವಾಸ್ತವ್ಯ ಆಯೋಜಿಸಲಾಗಿದೆ.

ಮೊದಲು ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿ, ಬಳಿಕ ಗ್ರಾಮಸ್ಥರ ಸಮಸ್ಯೆ ಆಲಿಸಲಾಗುವುದು. ಕಂದಾಯ ವಿಷಯ, ಸರ್ಕಾರದ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಪಿಂಚಣಿ ಯೋಜನೆಗಳು ಸೇರಿದಂತೆ ಗ್ರಾಮಸ್ಥರ ಎಲ್ಲ ರೀತಿಯ ಸಮಸ್ಯೆ ಆಲಿಸಿ, ಸಾಧ್ಯವಾದರೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗುವುದು. ಸ್ಥಳದಲ್ಲೇ ಆಗದಕ್ಕೆ ಬಳಿಕ ಪರಿಹಾರ ಕಲ್ಪಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಗೊಂಡ ನಂತರ ಅನೇಕ ಗ್ರಾಮಗಳಿಗೆ ಸರ್ವೀಸ್ ರಸ್ತೆ ಇಲ್ಲದಕ್ಕೆ ತೊಂದರೆಯಾಗುತ್ತಿದೆ. ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಇನ್ನು ಮುಂದೆ ಪ್ರತಿ ತಿಂಗಳ ಮೂರನೇ ಶನಿವಾರ ಗ್ರಾಮ ವಾಸ್ತವ್ಯ ಮಾಡಲಾಗುವುದು. ಗ್ರಾಮಸ್ಥರಿಗೆ ಸರ್ಕಾರದ ಎಲ್ಲ ಸೌಕರ್ಯ ತಲುಪಿಸುವುದು ಇದರ ಮುಖ್ಯ ಉದ್ದೇಶ ಎಂದು ಹೇಳಿದರು.

ಸ್ವಚ್ಛತೆ ಸೇರಿದಂತೆ ಇತರೆ ಸಣ್ಣಪುಟ್ಟ ಕೆಲಸಗಳನ್ನು ನಿರ್ವಹಿಸಲು ಗ್ರಾಮ ಪಂಚಾಯಿತಿಗಳಿಗೆ ಅಧಿಕಾರ ನೀಡಲಾಗಿರುತ್ತದೆ. ಅದನ್ನವರು ಸಮರ್ಥವಾಗಿ ನಿಭಾಯಿಸಬೇಕು. ಎಲ್ಲದಕ್ಕೂ ಜಿಲ್ಲಾಡಳಿತದ ಮೇಲೆ ಅವಲಂಬಿಸಬಾರದು ಎಂದರು.

ಕೇರಳ ಗಡಿಯಲ್ಲಿ ಇರುವ ಜಿಲ್ಲೆಗಳಿಗೆ ಕೊರೊನಾ ಹೊಸ ರೂಪಾಂತರ ವೈರಸ್ ನ ಭೀತಿ ಇದೆ. ನಮ್ಮ ಜಿಲ್ಲೆಗೆ ಆಂಧ್ರ ಪ್ರದೇಶದ ಗಡಿ‌ ಇದೆ. ಆಂಧ್ರದಲ್ಲಿ ಆ ರೀತಿಯ ಪ್ರಕರಣಗಳು ಬೆಳಕಿಗೆ ಬಂದಿಲ್ಲ. ಆದರೂ ಮುನ್ನೆಚ್ಚರಿಕೆ ವಹಿಸುವುದು ಉತ್ತಮ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ, ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಭಾಸ್ಕರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT