ಭಾನುವಾರ, ಸೆಪ್ಟೆಂಬರ್ 26, 2021
21 °C
ಬಯಲು ವಸ್ತು ಸಂಗ್ರಹಾಲಯ, ತುಂಗಭದ್ರಾ ಜಲಾಶಯ ವೀಕ್ಷಣೆ

ಹಂಪಿಗೆ ಉಪರಾಷ್ಟ್ರಪತಿ; ಸಿದ್ಧತೆ ಜೋರು

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರು ವಿಶ್ವಪ್ರಸಿದ್ಧ ಹಂಪಿಗೆ ಭೇಟಿ ನೀಡುತ್ತಿದ್ದು, ಅವರನ್ನು ಬರಮಾಡಿಕೊಳ್ಳಲು ಸಿದ್ಧತಾ ಕಾರ್ಯ ಭರದಿಂದ ನಡೆಯುತ್ತಿದೆ.

ಆ.19ರಂದು ವಿಶೇಷ ಹೆಲಿಕ್ಯಾಪ್ಟರ್‌ನಲ್ಲಿ ನಗರದ ಮುನ್ಸಿಪಲ್‌ ಕಾಲೇಜಿನ ಹೆಲಿಪ್ಯಾಡ್‌ಗೆ ಬಂದಿಳಿಯಲಿದ್ದಾರೆ. ಬಳಿಕ ಅಲ್ಲಿಂದ ನೇರವಾಗಿ ವಿಶೇಷ ಭದ್ರತೆಯಲ್ಲಿ ರಸ್ತೆ ಮಾರ್ಗವಾಗಿ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡುವರು. ಸಂಜೆ ಅಲ್ಲಿಂದ ತಾಲ್ಲೂಕಿನ ಕಮಲಾಪುರ ಸಮೀಪದ ಮಯೂರ ಭುವನೇಶ್ವರಿ ಹೋಟೆಲ್‌ಗೆ ತೆರಳಿ ವಾಸ್ತವ್ಯ ಮಾಡುವರು.

ಆ. 20ರಂದು ದಿನವಿಡೀ ಹಂಪಿಯಲ್ಲಿ ಕಾಲ ಕಳೆಯುವರು. ಬೆಳಿಗ್ಗೆ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನದೊಂದಿಗೆ ಅವರ ಪ್ರವಾಸ ಆರಂಭವಾಗಲಿದೆ. ಬಳಿಕ ಒಂದೊಂದಾಗಿ ಅಲ್ಲಿನ ಪ್ರಮುಖ ಸ್ಮಾರಕಗಳನ್ನು ವೀಕ್ಷಿಸುವರು. ಈ ವಿಷಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.

ಉಪರಾಷ್ಟ್ರಪತಿ ಅವರು ಕುಟುಂಬ ಸಮೇತರಾಗಿ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅವರ ಭೇಟಿ ಹಿನ್ನೆಲೆಯಲ್ಲಿ ಭದ್ರತೆಗೆ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅವರ ಜತೆ ಅವರ ಕಚೇರಿಯ ಕೆಲ ಅಧಿಕಾರಿಗಳು ಕೂಡ ಬರಲಿದ್ದಾರೆ. ಅಧಿಕಾರಿಗಳ ವಾಸ್ತವ್ಯಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅತಿಥಿ ಗೃಹವನ್ನು ಮೀಸಲಿಡಲಾಗಿದೆ. ಇದನ್ನು ವಿಶ್ವವಿದ್ಯಾಲಯದವರು ದೃಢಪಡಿಸಿದ್ದಾರೆ.

ಉಪರಾಷ್ಟ್ರಪತಿ ಅವರು ಹಂಪಿಯ ಪ್ರಮುಖ ಸ್ಮಾರಕಗಳನ್ನು ವೀಕ್ಷಿಸುವ ಕಾರ್ಯಕ್ರಮ ಇರುವುದರಿಂದ ಎಲ್ಲ ಸ್ಮಾರಕಗಳ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ಭರದಿಂದ ನಡೆಯುತ್ತಿದೆ. ಹೊಸಪೇಟೆ–ಕಮಲಾಪುರ ಮುಖ್ಯರಸ್ತೆಯಿಂದ ಹಂಪಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿಯಲ್ಲಿ ಬೆಳೆದು ನಿಂತಿರುವ ಪೊದೆ, ಮುಳ್ಳು ತೆರವುಗೊಳಿಸಲಾಗುತ್ತಿದೆ. ಮಳೆಯಿಂದ ಅಲ್ಲಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲಾಗುತ್ತಿದೆ.

ಇನ್ನು, ಸ್ಮಾರಕಗಳನ್ನು ಏರಿ ಇಳಿಯಲು ಸುಲಭವಾಗುವಂತೆ ತಾತ್ಕಾಲಿಕವಾಗಿ ಕಟ್ಟಿಗೆಯ ಮೆಟ್ಟಿಲುಗಳನ್ನು ನಿರ್ಮಿಸಲಾಗುತ್ತಿದೆ. ಕಡಲೆಕಾಳು ಗಣಪ ಸ್ಮಾರಕದ ಬಳಿ ಈ ಹಿಂದೆ ಇದ್ದ ಕಟ್ಟಿಗೆಯ ಮೆಟ್ಟಿಲುಗಳು ಹಾಳಾಗಿದ್ದವು. ಅಲ್ಲಿ ಈಗ ಹೊಸದಾಗಿ ಕಟ್ಟಿಗೆಯಿಂದ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ವಿಜಯ ವಿಠಲ ದೇವಸ್ಥಾನದಲ್ಲಿ ನೆಲಹಾಸು ಕೂಡ ಸರಿಪಡಿಸಲಾಗಿದೆ.

ಈಗಾಗಲೇ ವಾರಾಂತ್ಯಕ್ಕೆ ಹಂಪಿ ವೀಕ್ಷಣೆಗೆ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ. ಗುರುವಾರದಿಂದ ಉಪರಾಷ್ಟ್ರಪತಿಯವರು ಮೂರು ದಿನ ಹಂಪಿ ಪರಿಸರದಲ್ಲೇ ಕಾಲ ಕಳೆಯುವುದರಿಂದ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು