ಶನಿವಾರ, ಸೆಪ್ಟೆಂಬರ್ 18, 2021
26 °C
ವಾರ್ಡ್‌ವಾರು ಮೀಸಲು, ಮತದಾರರ ಪಟ್ಟಿಯಲ್ಲಿ ಗೊಂದಲದ ಆರೋಪ

ಸದ್ಯಕ್ಕಿಲ್ಲ ಹೊಸಪೇಟೆ ನಗರಸಭೆಗೆ ಚುನಾವಣೆ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

ಹೊಸಪೇಟೆ: ರಾಜ್ಯದಲ್ಲಿನ ಸ್ಥಳೀಯ ಸಂಸ್ಥೆಗಳಿಗೆ ಮೇ 29ರಂದು ಚುನಾವಣೆ ಮುಹೂರ್ತ ನಿಗದಿಯಾಗಿದೆ. ಆದರೆ, ಇಲ್ಲಿನ ನಗರಸಭೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ.

ವಾರ್ಡ್‌ವಾರು ಮೀಸಲು ಕರಡು ಪಟ್ಟಿಯನ್ನು ಅವೈಜ್ಞಾನಿಕವಾಗಿ ತಯಾರಿಸಲಾಗಿದೆ ಎಂದು ಆರೋಪಿಸಿ ಇಲ್ಲಿನ ಆರನೇ ವಾರ್ಡಿನ ಮಾಜಿ ನಗರಸಭೆ ಸದಸ್ಯ ಡಿ. ವೇಣುಗೋಪಾಲ ಅವರು ಧಾರವಾಡ ಹೈಕೋರ್ಟ್‌ ಸಂಚಾರಿ ಪೀಠದ ಮೊರೆ ಹೋಗಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಇದೇ ವೇಳೆ 14ನೇ ವಾರ್ಡಿನ ಕೆಲವು ನಿವಾಸಿಗಳು, ಮತದಾರರ ಪಟ್ಟಿಯಲ್ಲಿ ದೋಷವಿದೆ ಎಂದು ಆರೋಪಿಸಿ ನ್ಯಾಯಾಲಯದ ಕದ ತಟ್ಟಿದ್ದಾರೆ. ಎರಡು ವಿಚಾರಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕಿರುವುದರಿಂದ ಸದ್ಯದ ಮಟ್ಟಿಗೆ ಚುನಾವಣೆ ನಡೆಯುವುದು ದೂರದ ಮಾತಾಗಿದೆ.

2018ರ ನವೆಂಬರ್‌ನಲ್ಲಿ ವಾರ್ಡ್‌ವಾರು ಮೀಸಲು ಕರಡು ಪಟ್ಟಿ ಪ್ರಕಟಿಸಲಾಗಿತ್ತು. ಅದರ ವಿರುದ್ಧ ಕೆಲವರು ಆಕ್ಷೇಪಣೆ ಸಲ್ಲಿಸಿದ್ದರು. ಹೀಗಾಗಿ ಜನವರಿಯಲ್ಲಿ ಅಂತಿಮ ಕರಡು ಪಟ್ಟಿ ಪ್ರಕಟ ಮಾಡಲಾಗಿತ್ತು. ಈಗ ಅದರ ಬಗ್ಗೆಯೂ ತಕರಾರು ಕೇಳಿ ಬಂದಿದೆ.

28ನೇ ವಾರ್ಡಿನ ನಗರಸಭೆ ಮಾಜಿ ಸದಸ್ಯ ಚಂದ್ರಕಾಂತ ಕಾಮತ್‌ ಅವರು ಮತದಾರರ ಪಟ್ಟಿಯಲ್ಲಿನ ಗೊಂದಲದ ಕುರಿತು ಚುನಾವಣಾ ಆಯೋಗದ ಕೇಂದ್ರ ಕಚೇರಿಗೆ ದೂರು ಸಲ್ಲಿಸಿದ್ದಾರೆ.

‘ನನ್ನ ಗಮನಕ್ಕೆ ಬಂದಿರುವಂತೆ 28ನೇ ವಾರ್ಡ್‌ (ಎಂ.ಜೆ.ನಗರ), 29ನೇ ವಾರ್ಡ್‌ನ (ರಾಜೀವ್‌ ನಗರ) ಮತದಾರರ ಪಟ್ಟಿಯಲ್ಲಿ ಸಾಕಷ್ಟು ದೋಷಗಳಿವೆ. ಈ ಕುರಿತು ಚುನಾವಣಾ ಆಯೋಗಕ್ಕೆ ದಾಖಲೆಗಳ ಸಮೇತ ದೂರು ಸಲ್ಲಿಸಿದ್ದೇನೆ’ ಎಂದು ಚಂದ್ರಕಾಂತ ಕಾಮತ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಈ ಎರಡೂ ವಾರ್ಡ್‌ಗಳಲ್ಲಿ ಒಬ್ಬೊಬ್ಬ ವ್ಯಕ್ತಿಯ ಹೆಸರಿನಲ್ಲಿ ನಾಲ್ಕೈದು ಮತದಾನದ ಗುರುತಿನ ಕಾರ್ಡುಗಳಿವೆ. ಎರಡೆರಡು ಬೂತ್‌ಗಳಲ್ಲಿ ಕೆಲವರು ಹೆಸರು ನೋಂದಣಿ ಮಾಡಿಸಿದ್ದಾರೆ. ಮತದಾರರ ಪಟ್ಟಿಯಲ್ಲಿನ ದೋಷ ಸರಿಪಡಿಸಬೇಕು. ನಾನು ಕೊಟ್ಟಿರುವ ದೂರಿಗೆ ಆಯೋಗದಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಒಂದುವೇಳೆ ಗೊಂದಲ ನಿವಾರಿಸದೆ ಚುನಾವಣೆ ಸಂಘಟಿಸಿದಲ್ಲಿ ಅದರ ವಿರುದ್ಧ ಬಿಜೆಪಿಯಿಂದ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಕೆಲವರು ವಾಮ ಮಾರ್ಗದಿಂದ ಚುನಾವಣೆಯಲ್ಲಿ ಗೆಲ್ಲಲ್ಲು ಕುತಂತ್ರ ನಡೆಸುತ್ತಿದ್ದಾರೆ. ದೋಷಪೂರಿತ  ಮತದಾರರ ಪಟ್ಟಿ ಅದರ ಭಾಗ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.