ಮಂಗಳವಾರ, ಮಾರ್ಚ್ 2, 2021
31 °C
ಸಾಲು ಮಂಟಪಗಳಲ್ಲಿ ಮಳೆ ನೀರು ನಿಂತು ದುರ್ವಾಸನೆ

ಹಂಪಿ: ಎ.ಎಸ್‌.ಐ. ನಿರ್ಲಕ್ಷ್ಯ, ಜೀರ್ಣೊದ್ಧಾರ ನನೆಗುದಿಗೆ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ತಾಲ್ಲೂಕಿನ ಹಂಪಿ ರಥಬೀದಿಯ ಸಾಲುಮಂಟಪದಿಂದ ಅತಿಕ್ರಮಣವನ್ನು ತೆರವುಗೊಳಿಸಿ ದಶಕಕ್ಕೂ ಹೆಚ್ಚು ಸಮಯವಾಗುತ್ತ ಬಂದಿದೆ. ಆದರೆ, ಅದರ ಜೀರ್ಣೊದ್ಧಾರ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿದೆ.

ಸಾಲು ಮಂಟಪದ ಕಂಬಗಳನ್ನು ತೆಗೆದು, ಪುನಃ ಅದಕ್ಕೆ ಗಟ್ಟಿ ತಳಪಾಯ ಹಾಕಿ, ಕ್ರೇನ್‌ ಸಹಾಯದಿಂದ ಕೆಲವೆಡೆ ಕಂಬಗಳನ್ನು ಮರು ಜೋಡಿಸಲಾಗಿದೆ. ಆದರೆ, ಅವುಗಳಿಗೆ ಮಂಟಪದ ಸ್ವರೂಪ ಕೊಡುವ ಕೆಲಸ ನನೆಗುದಿಗೆ ಬಿದ್ದಿದೆ. 

ತಿಂಗಳ ಹಿಂದೆ ಸುರಿದ ಮಳೆಯಿಂದ ಅಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದೆ. ಹೀಗೆ ಅನೇಕ ದಿನಗಳು ಕಳೆದರೂ ನೀರು ತೆರವುಗೊಳಿಸುವ ಕೆಲಸ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎ.ಎಸ್‌.ಐ.) ಮಾಡಿಲ್ಲ. ಇದರಿಂದ ಇಡೀ ಪರಿಸರದಲ್ಲಿ ದುರ್ಗಂಧ ಹರಡಿದೆ. ಸೊಳ್ಳೆ ಕಾಟ ಹೆಚ್ಚಾಗಿದೆ.

ವಿರೂಪಾಕ್ಷೇಶ್ವರ ದೇಗುಲದ ಪ್ರವೇಶ ದ್ವಾರದಲ್ಲೇ ಈ ರೀತಿ ಅಸ್ವಚ್ಛತೆಯಿದ್ದರೂ ಅದರ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿರುವ ಎ.ಎಸ್‌.ಐ. ಅಧಿಕಾರಿಗಳ ವಿರುದ್ಧ ಸ್ಥಳೀಯರು ಕಿಡಿ ಕಾರುತ್ತಿದ್ದಾರೆ. 

‘ಹಂಪಿಯಲ್ಲಿ ವಿರೂಪಾಕ್ಷೇಶ್ವರ ದೇವಸ್ಥಾನ ಪ್ರಮುಖ ಸ್ಮಾರಕಗಳಲ್ಲಿ ಒಂದು. ಇಡೀ ಹಂಪಿಯಲ್ಲಿ ಇಲ್ಲಿ ಮಾತ್ರ ಪೂಜೆ ನೆರವೇರುತ್ತದೆ. ಸ್ಮಾರಕ ಕಣ್ತುಂಬಿಕೊಳ್ಳುವುದರ ಜತೆಗೆ ದೇವರ ದರ್ಶನಕ್ಕೆ ದೇಶ–ವಿದೇಶಗಳಿಂದ ನಿತ್ಯ ನೂರಾರು ಸಂಖ್ಯೆಯಲ್ಲಿ ಜನ ಬರುತ್ತಾರೆ. ಹೀಗಿದ್ದರೂ ದೇಗುಲದ ಪ್ರವೇಶ ದ್ವಾರದಲ್ಲೇ ನೀರು ನಿಂತು ದುರ್ಗಂಧ ಹರಡಿದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ಧೋರಣೆ ಸರಿಯಲ್ಲ’ ಎಂದು ಹಂಪಿಯ ರಾಜು ಅಸಮಾಧಾನ ಹೊರ ಹಾಕಿದ್ದಾರೆ.

‘ಎರಡ್ಮೂರು ವರ್ಷಗಳ ಹಿಂದೆಯೇ ಸಾಲುಮಂಟಪದ ಜೀರ್ಣೋದ್ಧಾರ ಕೆಲಸ ಕೈಗೆತ್ತಿಕೊಂಡಿದ್ದಾರೆ. ಆದರೆ, ಇದುವರೆಗೆ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಳಿಸಿದರೆ ಹಂಪಿಯಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಗಾಂಧಿ ಜಯಂತಿ ನಿಮಿತ್ತ ದೇಶದಾದ್ಯಂತ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇಂತಹ ಹೊತ್ತಿನಲ್ಲಿ ವಿಶ್ವ ಪಾರಂಪರಿಕ ತಾಣದಲ್ಲೇ ಅಸ್ವಚ್ಛತೆಯಿದ್ದರೂ ಗಮನ ಹರಿಸದೇ ಇರುವುದು ದುರದೃಷ್ಟಕರ’ ಎಂದಿದ್ದಾರೆ.

‘ಒಂದೆಡೆ ದೇವಸ್ಥಾನ, ಇನ್ನೊಂದೆಡೆ ಜನತಾ ಕಾಲೊನಿ ಇದೆ. ಮನೆಗಳು, ಹೋಟೆಲ್‌ಗಳಿವೆ. ಹೊಂಡದಂತೆ ನೀರು ನಿಂತಿರುವುದರಿಂದ ಎಲ್ಲೆಡೆ ಕೆಟ್ಟ ವಾಸನೆ ಬರುತ್ತಿದೆ. ಜನ ಹೋಟೆಲ್‌ಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಸ್ಥಳೀಯ ನಿವಾಸಿ ರಮೇಶ ತಿಳಿಸಿದರು.

‘ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ಆರೋಗ್ಯ ಇಲಾಖೆಯವರು ಪ್ರಚಾರ ಮಾಡುತ್ತಾರೆ. ಇಲ್ಲಿ ನೀರು ಸಂಗ್ರಹಗೊಂಡು ತಿಂಗಳಾಗುತ್ತ ಬಂದರೂ ಯಾರೊಬ್ಬರೂ ಗಮನ ಹರಿಸುತ್ತಿಲ್ಲ. ಹಂಪಿ ಗ್ರಾಮ ಪಂಚಾಯಿತಿ ಅಧಿಕಾರಿಗಳಾದರೂ ಈ ಕಡೆಗೆ ಗಮನ ಹರಿಸಬೇಕು. ಇಲ್ಲವಾದಲ್ಲಿ ಡೆಂಗಿಯಂತಹ ಮಾರಕ ಕಾಯಿಲೆಗಳಿಗೆ ಕಾರಣವಾಗಬಲ್ಲ ಸೊಳ್ಳೆಗಳು ಹುಟ್ಟಿಕೊಳ್ಳಬಹುದು’ ಎಂದು ಎಚ್ಚರಿಸಿದರು.

‘ನೀರು ನಿಂತು ಜನರಿಗೆ ತೊಂದರೆಯಾಗುತ್ತಿರುವ ವಿಷಯವನ್ನು ಸ್ವತಃ ನಾನೇ ಎ.ಎಸ್‌.ಐ. ಸೂಪರಿಟೆಂಡೆಂಟ್‌ ಪಿ. ಕಾಳಿಮುತ್ತು ಅವರಿಗೆ ತಿಳಿಸಿದ್ದೇನೆ. ಹಂಪಿ ಪರಿಸರ ಕೋರ್‌ ಜೋನ್‌ಗೆ ಬರುವುದರಿಂದ ಅಲ್ಲಿ ಪಂಚಾಯಿತಿ ವತಿಯಿಂದ ಏನೂ ಮಾಡುವಂತಿಲ್ಲ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಸಂಬಂಧ ಪಿ. ಕಾಳಿಮುತ್ತು ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ. 

*
ಎ.ಎಸ್‌.ಐ.ಗೆ. ಸೇರಿದ ಜಾಗದಲ್ಲಿ ಪಂಚಾಯಿತಿಯವರು ಏನೂ ಮಾಡುವಂತಿಲ್ಲ. ಅಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ವರ ಜವಾಬ್ದಾರಿ.
–ರಾಜೇಶ್ವರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹಂಪಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು