ಬುಧವಾರ, ಜನವರಿ 29, 2020
27 °C

ಬಳ್ಳಾರಿ| ಕಲಿಕೆಯೊಂದಿಗೆ ವೃತ್ತಿ ಶಿಕ್ಷಣ: ಸರ್ಕಾರಿ ಶಾಲೆಯಲ್ಲಿ ವಿನೂತ ಪ್ರಯೋಗ

ಸಿ. ಶಿವಾನಂದ Updated:

ಅಕ್ಷರ ಗಾತ್ರ : | |

Prajavani

ಹಗರಿಬೊಮ್ಮನಹಳ್ಳಿ: ಕಲಿಕಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ನೀಡಿ ಅವರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತಿದೆ ತಾಲ್ಲೂಕಿನ ಉಪನಾಯಕನಹಳ್ಳಿ ಸರ್ಕಾರಿ ಪ್ರೌಢಶಾಲೆ.

ಭವಿಷ್ಯ ಉತ್ತಮವಾಗಿ ರೂಪುಗೊಳ್ಳಬಹುದು ಎಂಬ ದೃಷ್ಟಿಯಿಂದ ಪೋಷಕರೇ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡುತ್ತಿದ್ದಾರೆ. ಶಾಲೆಯ ಈ ಕಾರ್ಯದಿಂದ ಹಾಜರಾತಿಯಲ್ಲಿ ಹೆಚ್ಚಳವಾಗಿದೆ.

ಮಕ್ಕಳಿಗೆ ತರಗತಿಗಳನ್ನು ಹೊರತುಪಡಿಸಿ ನಿತ್ಯ ಕೆಲವೊಂದಿಷ್ಟು ಸಮಯ ಟೈಲರಿಂಗ್, ಎಂಬ್ರಾಯಿಡರಿ, ಸೀರೆಗಳಿಗೆ ಕುಚ್ಚು ಕಟ್ಟುವುದು, ರೇಷ್ಮೆ ದಾರದ ಆಭರಣಗಳ ತಯಾರಿಕೆ, ಸ್ಪಂಜ್‍ನಿಂದ ಗೊಂಬೆಗಳ ತಯಾರಿಕೆ, ಬಾಗಿಲು ತೋರಣ ಸೇರಿದಂತೆ ಇತರೆ ಅಲಂಕಾರಿಕ ವಸ್ತುಗಳ ತಯಾರಿಕೆ ಬಗ್ಗೆ ತರಬೇತಿ ಕೊಡಲಾಗುತ್ತಿದೆ. ಮಕ್ಕಳು ಕೂಡ ಅದನ್ನು ಆಸಕ್ತಿಯಿಂದ ಕಲಿಯುತ್ತಿದ್ದಾರೆ.

ಇಲ್ಲಿ ತರಬೇತಿ ಪಡೆದ ಕೆಲವು ಮಕ್ಕಳು ರಜಾ ದಿನಗಳಲ್ಲಿ ಮನೆಯಲ್ಲೇ ಕೆಲಸ ನಿರ್ವಹಿಸಿ ಹಣ ಗಳಿಸುತ್ತಿದ್ದಾರೆ. ಕಲಿಯುವ ಹಂತದಲ್ಲೇ ಆರ್ಥಿಕ ಸದೃಢತೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.

ಶಾಲೆಯ ಕೊಟ್ರಮ್ಮ, ಅಶ್ವಿನಿ, ರಾಜ, ನಿರ್ಮಲಾ, ಹುಲಿಗೆಮ್ಮ ಸೇರಿದಂತೆ 50ಕ್ಕೂ ವಿದ್ಯಾರ್ಥಿನಿಯರು ಸ್ವಯಂ ಉದ್ಯೋಗದಲ್ಲಿ ತೊಡಗಿಕೊಳ್ಳಲು ಬೇಕಾದ ಎಲ್ಲ ಪ್ರಾಯೋಗಿಕ ತರಬೇತಿಯನ್ನು ಪಡೆದಿದ್ದಾರೆ. ಒಂದು ಸೀರೆಗೆ ಕುಚ್ಚು ಹಾಕಲು ₹200 ಪಡೆಯುತ್ತಿದ್ದಾರೆ.

ಈ ಎಲ್ಲ ಸಾಧನೆಯ ಹಿಂದಿನ ಶಕ್ತಿ ಶಾಲೆಯ ವೃತ್ತಿ ಶಿಕ್ಷಣ ಶಿಕ್ಷಕಿ ಜಿ.ಎಂ.ಉಮಾದೇವಿ. ವಿದ್ಯಾರ್ಥಿಗಳಿಗೆ ಸ್ವಯಂ ಉದ್ಯೋಗಕ್ಕೆ ಬೇಕಾದ ಎಲ್ಲಾ ರೀತಿಯ ಮಾರ್ಗದರ್ಶನ ಮಾಡುತ್ತಿದ್ದಾರೆ.

ಈಚೆಗೆ ಬಳ್ಳಾರಿಯಲ್ಲಿ ನಡೆದ ಜಿಲ್ಲಾಮಟ್ಟದ ವಸ್ತುಪ್ರದರ್ಶನದಲ್ಲಿ ಇವರ ನೇತೃತ್ವದಲ್ಲೇ ಶಾಲೆಯ ತಂಡ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು