ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ ಶಾಸಕರಿಗೆ ₹225 ಕೋಟಿ: 9 ವಿಧಾನಸಭೆ ಕ್ಷೇತ್ರಗಳಿಗೆ ವಿಶೇಷ ಅನುದಾನ

9 ವಿಧಾನಸಭೆ ಕ್ಷೇತ್ರಗಳಿಗೆ ಮುಖ್ಯಮಂತ್ರಿಯವರ ವಿಶೇಷ ಅನುದಾನ
Published 9 ಮಾರ್ಚ್ 2024, 21:22 IST
Last Updated 9 ಮಾರ್ಚ್ 2024, 21:22 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್ ಶಾಸಕರಿರುವ ನಗರದ ಒಂಬತ್ತು ವಿಧಾನಸಭೆ ಕ್ಷೇತ್ರಗಳಿಗೆ ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ ₹225 ಕೋಟಿ ವೆಚ್ಚದ ಕಾಮಗಾರಿಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ.

ಹೆಬ್ಬಾಳ, ಗೋವಿಂದರಾಜನಗರ, ವಿಜಯನಗರ, ಪುಲಕೇಶಿನಗರ, ಬಿಟಿಎಂ ಲೇಔಟ್‌, ಚಾಮರಾಜಪೇಟೆ, ಸರ್ವಜ್ಞನಗರ, ಗಾಂಧಿನಗರ ಮತ್ತು ಶಿವಾಜಿನಗರ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ ₹25 ಕೋಟಿಯನ್ನು ವಿಶೇಷ ಅನುದಾನವಾಗಿ ಬಿಡುಗಡೆ ಮಾಡಿದ್ದಾರೆ.

ರಸ್ತೆ, ಚರಂಡಿ, ಪಾದಚಾರಿ ಮಾರ್ಗ ಅಭಿವೃದ್ಧಿ, ಡಾಂಬರೀಕರಣ, ಕಾಂಕ್ರೀಟ್‌ ರಸ್ತೆ ಕಾಮಗಾರಿಗಳು ಅತಿ ಹೆಚ್ಚಾಗಿದ್ದು, ಈಜುಕೊಳ ನಿರ್ಮಾಣ, ಬಸ್‌ನಿಲ್ದಾಣಗಳಲ್ಲಿ ನೀರು ಪೂರೈಕೆ ಕೇಂದ್ರ, ಮಳೆನೀರು ಸಂಗ್ರಹ, ಗ್ರಂಥಾಲಯ ನಿರ್ಮಾಣ, ಉದ್ಯಾನ ಅಭಿವೃದ್ಧಿ, ಕೊಳವೆಬಾವಿ ಕೊರೆಯುವುದು, ವಾಣಿಜ್ಯ ಕಟ್ಟಡ ನಿರ್ಮಾಣ ಕಾಮಗಾರಿಗಳು ಇವೆ.

₹5 ಕೋಟಿಗೆ ಕಡಿಮೆ ಇರದಂತೆ ಪ್ಯಾಕೇಜ್‌ಗಳನ್ನು ಮಾಡಿ ಇ–ಟೆಂಡರ್‌ ಮೂಲಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು. ಅನುಮೋದಿಸಲಾಗಿರುವ ಕ್ರಿಯಾಯೋಜನೆಯಲ್ಲಿ ಅನಿವಾರ್ಯವಾಗಿ ಬದಲಾವಣೆ ಇದ್ದರೆ ಬಿಬಿಎಂಪಿ ಮುಖ್ಯ ಆಯುಕ್ತರ ಶಿಫಾರಸ್ಸಿನ ಮೇರೆಗೆ ಇಲಾಖೆ ಸಚಿವರ ಅನುಮೋದನೆ ಪಡೆಯಬೇಕು. ತಾಂತ್ರಿಕ ಅನುಮೋದನೆ ಪಡೆದು, ಟೆಂಡರ್‌ ಕರೆದು ಟೆಂಡರ್‌ ಅನುಮೋದನೆ, ಆಡಳಿತಾತ್ಮಕ ಅನುಮೋದನೆಗೆ ಒಂದೇ ಬಾರಿಗೆ ಪ್ರಸ್ತಾವ ಸಲ್ಲಿಸಬೇಕು. ಅಂದಾಜಿನಲ್ಲಿರುವ ಕಾಮಗಾರಿಗಳನ್ನು ಕೈಬಿಡದಂತೆ ನೋಡಿಕೊಂಡು, ಅನುಮೋದಿಸಿದ ಅನುದಾನದ ಮಿತಿಯಲ್ಲೇ ಟೆಂಡರ್‌ ಪ್ರೀಮಿಯಂ ಕೂಡ ಇರುವಂತೆ ನೋಡಿಕೊಳ್ಳಬೇಕು ಎಂದು ಷರತ್ತು ವಿಧಿಸಲಾಗಿದೆ.

ಸಂಘದ ಹರ್ಷ: ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ ಅನುಮೋದನೆಯಾಗಿರುವ ಕ್ರಿಯಾಯೋಜನೆಯ ಕಾಮಗಾರಿಗಳ ಪ್ಯಾಕೇಜ್‌ ಅನ್ನು ₹5 ಕೋಟಿ ಮಿತಿಗೆ ಇಳಿಸಿರುವುದನ್ನು ಬಿಬಿಎಂಪಿ ಗುತ್ತಿಗೆದಾರರ ಸಂಘದ ಸದಸ್ಯರು ಸ್ವಾಗತಿಸಿದ್ದಾರೆ.

‘ಈ ಹಿಂದೆ ₹10 ಕೋಟಿ ಪ್ಯಾಕೇಜ್‌ಗಳನ್ನು ಮಾಡಲಾಗುತ್ತಿತ್ತು. ಸಣ್ಣ ಗುತ್ತಿಗೆದಾರರು ಇದರಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಲ್ಲಿ ಸಂಘದ ವತಿಯಿಂದ ಮನವಿ ಮಾಡಿಕೊಳ್ಳಲಾಗಿತ್ತು. ಮನವಿಗೆ ಸ್ಪಂದಿಸಿ ಪ್ಯಾಕೇಜ್‌ ಮೊತ್ತವನ್ನು ₹5 ಕೋಟಿಗೆ ಇಳಿಸಿರುವುದು ಸಣ್ಣ ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸಿ, ಕಾಮಗಾರಿ ನಡೆಸಲು ಅನುವು ಮಾಡಿಕೊಟ್ಟಂತಾಗಿದೆ’ ಎಂದು ಸಂಘದ ಅಧ್ಯಕ್ಷ ಜಿ.ಎಂ. ನಂದಕುಮಾರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT