ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ 2,500 ಎಕರೆ ಅರಣ್ಯ ಜಮೀನು ಒತ್ತುವರಿ: ಈಶ್ವರ ಖಂಡ್ರೆ

Published 7 ಡಿಸೆಂಬರ್ 2023, 16:12 IST
Last Updated 7 ಡಿಸೆಂಬರ್ 2023, 16:12 IST
ಅಕ್ಷರ ಗಾತ್ರ

ವಿಧಾನಸಭೆ: ‘ಬೆಂಗಳೂರು ನಗರದ ವ್ಯಾಪ್ತಿಯಲ್ಲಿ 2,500 ಎಕರೆ ಅರಣ್ಯ ಜಮೀನು ಒತ್ತವರಿಯಾಗಿದ್ದು, ಈವರೆಗೆ 400 ಎಕರೆ ಜಮೀನಿನ ಒತ್ತುವರಿ ತೆರವುಗೊಳಿಸಲಾಗಿದೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಬಿಜೆಪಿಯ ಎಂ. ಸತೀಶ್ ರೆಡ್ಡಿ ಅವರ ಪ್ರಶ್ನೆಗೆ ಗುರುವಾರ ಉತ್ತರಿಸಿದ ಸಚಿವರು, ‘ಬೆಂಗಳೂರಿನಲ್ಲಿ ಕೆಲವೇ ವರ್ಷಗಳಿಂದ ಈಚೆಗೆ 500 ಹೆಕ್ಟೇರ್‌ ಅರಣ್ಯ ಪ್ರದೇಶ ಕಡಿಮೆಯಾಗಿದೆ. ಇದು ಕೂಡ ನಗರದಲ್ಲಿ ಮಾನವ– ವನ್ಯಜೀವಿ ಸಂಘರ್ಷ ಉಂಟಾಗಲು ಕಾರಣ’ ಎಂದರು.

ನಗರದಲ್ಲಿ ಕಾಡಾನೆಗಳು ಜನವಸತಿ ಪ್ರದೇಶಕ್ಕೆ ಪ್ರವೇಶಿಸುವುದನ್ನು ತಪ್ಪಿಸಲು ಆನೆ ಕಾರ್ಯಪಡೆ ರಚಿಸಲಾಗಿದೆ. ಕಗ್ಗಲೀಪುರ, ಆನೇಕಲ್‌, ಯಲಹಂಕ, ಹೊಸಕೋಟೆ, ಕೆ.ಆರ್‌. ಪುರ ಮತ್ತಿತರ ಪ್ರದೇಶಗಳಲ್ಲಿ ಚಿರತೆಗಳು ಜನವಸತಿ ಪ್ರದೇಶಕ್ಕೆ ಪ್ರವೇಶಿಸಿ, ಸಮಸ್ಯೆ ಉಂಟಾಗುವುದನ್ನು ತಪ್ಪಿಸಲು ಚಿರತೆ ಕಾರ್ಯಪಡೆಯನ್ನೂ ರಚಿಸಲಾಗಿದೆ. ಈ ಕಾರ್ಯಪಡೆಗೆ 59 ಸಿಬ್ಬಂದಿ ಒದಗಿಸಲಾಗಿದೆ ಎಂದು ತಿಳಿಸಿದರು.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕೂಡ್ಲುವಿನಲ್ಲಿ ಇತ್ತೀಚೆಗೆ ಚಿರತೆಯೊಂದು ಜನವಸತಿ ಪ್ರದೇಶಕ್ಕೆ ಬಂದಿತ್ತು. ಅದನ್ನು ಸೆರೆ ಹಿಡಿಯಲು ಪ್ರಯತ್ನಿಸಲಾಗಿತ್ತು. ಕಾರ್ಯಾಚರಣೆ ವೇಳೆ ನಾಲ್ವರಿಗೆ ಗಾಯಗೊಳಿಸಿತ್ತು. ಅನಿವಾರ್ಯವಾಗಿ ಗುಂಡಿಕ್ಕಲಾಯಿತು. ಚಿಕಿತ್ಸೆಗೆ ಕೊಂಡೊಯ್ಯುವಾಗ ಅದು ಮೃತಪಟ್ಟಿತ್ತು ಎಂದರು.

ಬಿಜೆಪಿಯ ಎಂ. ಕೃಷ್ಣಪ್ಪ, ಎಸ್‌.ಆರ್‌. ವಿಶ್ವನಾಥ್‌, ಬಿ. ಸುರೇಶ್‌ ಗೌಡ ಸೇರಿದಂತೆ ಹಲವರು, ವನ್ಯಜೀವಿಗಳು ಜನವಸತಿ ಪ್ರದೇಶ ಪ್ರವೇಶಿಸದಂತೆ ತಡೆಯಲು ಆಗ್ರಹಿಸಿದರು.

ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವರ ಚಿಕಿತ್ಸೆ ಹಾಗೂ ಅಗತ್ಯ ಉಪಕರಣ ಖರೀದಿಗೆ ತಾವು ₹ 2 ಲಕ್ಷ ದೇಣಿಗೆ ನೀಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ತಿರಸ್ಕರಿಸಿದ್ದಾರೆ ಎಂದು ಸತೀಶ್ ರೆಡ್ಡಿ ತಿಳಿಸಿದರು. ದೇಣಿಗೆಯನ್ನು ಸ್ವೀಕರಿಸುವುದಾಗಿ ಖಂಡ್ರೆ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT