ಶುಕ್ರವಾರ, ಜನವರಿ 27, 2023
20 °C

ಮಾದಕ ವಸ್ತು ಜಾಲ | ಕಳೆದ 2 ತಿಂಗಳಲ್ಲಿ 9 ಪ್ರಕರಣ, 27 ಜನರ ಬಂಧನ: ಎನ್‌ಸಿಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡ್ರಗ್ಸ್ ಸಾಗಣೆ ಹಾಗೂ ಮಾರಾಟದ ವಿರುದ್ಧ ಎರಡು ತಿಂಗಳು ವಿಶೇಷ ಕಾರ್ಯಾಚರಣೆ ನಡೆಸಿರುವ ಎನ್‌ಸಿಬಿ (ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ) ಅಧಿಕಾರಿಗಳು, 9 ಪ್ರಕರಣಗಳಲ್ಲಿ 27 ಮಂದಿಯನ್ನು ಬಂಧಿಸಿದ್ದಾರೆ.

‘ಡಾರ್ಕ್‌ನೆಟ್, ವಾಟ್ಸ್‌ಆ್ಯಪ್, ಟೆಲಿಗ್ರಾಂ ಹಾಗೂ ಇತರೆ ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕ ಸಾಧಿಸುತ್ತಿದ್ದ ಪೆಡ್ಲರ್‌ಗಳು ಡ್ರಗ್ಸ್ ಮಾರುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ವಿಶೇಷ ಕಾರ್ಯಾಚರಣೆ ನಡೆಸಲಾಯಿತು’ ಎಂದು ಎನ್‌ಸಿಬಿ ಬೆಂಗಳೂರು ವಲಯ ನಿರ್ದೇಶಕ ಪಿ. ಅರವಿಂದನ್ ಹೇಳಿದರು.

‘ಎಲ್‌ಎಸ್‌ಡಿ ಕಾಗದ, ಕೊಕೇನ್, ಹಶೀಷ್, ಗಾಂಜಾ ಸೇರಿದಂತೆ ವಿವಿಧ ಪ್ರಕಾರದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಬೆಂಗಳೂರು, ಇರಾನ್, ಮುಂಬೈ, ತಮಿಳುನಾಡು, ಹೈದರಾಬಾದ್, ಮಿಜೋರಾಂ, ಹರಿಯಾಣ, ದೆಹಲಿ, ರಾಜಸ್ಥಾನ, ಕೋಲ್ಕತ್ತ ಹಾಗೂ ಉತ್ತರ ಪ್ರದೇಶದ 27 ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಅವರು ತಿಳಿಸಿದರು.

‘ಡ್ರಗ್ಸ್ ಮಾರುವವರು, ಸಾಗಿಸುವವರು, ಖರೀದಿಸುವವರು ಹಾಗೂ ಸಹಾಯ ಮಾಡಿದವರನ್ನೂ ಆರೋಪಿಗಳನ್ನಾಗಿ ಬಂಧಿಸಲಾಗಿದೆ. ಖಾಸಗಿ ಕಂಪನಿ ಉದ್ಯೋಗಿಗಳು, ವಿದ್ಯಾರ್ಥಿಗಳೂ ಬಂಧಿತರ ಪಟ್ಟಿಯಲ್ಲಿದ್ದಾರೆ’ ಎಂದರು.

‘ಆನ್‌ಲೈನ್ ಮೂಲಕವೇ ಡ್ರಗ್ಸ್ ಖರೀದಿ ನಡೆಯುತ್ತಿತ್ತು. ಕ್ರಿಪ್ಟೊ ಕರೆನ್ಸಿ ಮೂಲಕ ಹಣ ಪಾವತಿ ಮಾಡಲಾಗುತ್ತಿತ್ತು. ಜಾಲದಲ್ಲಿರುವ ಮತ್ತಷ್ಟು ಮಂದಿಯ ಬಂಧನಕ್ಕೆ ತನಿಖೆ ಮುಂದುವರಿಸಲಾಗಿದೆ’ ಎಂದು ಅರವಿಂದನ್ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು