ಮಂಗಳವಾರ, ಸೆಪ್ಟೆಂಬರ್ 28, 2021
22 °C

ವಿಮಾನ ನಿಲ್ದಾಣ ಮೆಟ್ರೊ ಮಾರ್ಗಕ್ಕೆ 3,366 ಮರ ಬಲಿ ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಸೆಂಟ್ರಲ್ ಸಿಲ್ಕ್‌ ಬೋರ್ಡ್‌–ಕೆ.ಆರ್. ಪುರ–  ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ನಮ್ಮ ಮೆಟ್ರೊ ರೈಲು ಮಾರ್ಗ ನಿರ್ಮಾಣಕ್ಕೆ ಅಡ್ಡಿಯಾಗಿರುವ 3,366 ಮರಗಳನ್ನು ಕಡಿಯಲು ಬಿಬಿಎಂಪಿಯ ಅರಣ್ಯ ವಿಭಾಗದಿಂದ ಬೆಂಗಳೂರು ಮೆಟ್ರೊ ರೈಲು ನಿಗಮವು ಅನುಮತಿ ಕೋರಿದೆ. ಈ ಪ್ರಸ್ತಾವಕ್ಕೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಬಿಬಿಎಂಪಿ ಅರಣ್ಯ ವಿಭಾಗವು ಕೇವಲ ಹತ್ತು ದಿನಗಳ ಕಾಲಾವಕಾಶ ನೀಡಿದೆ. 

ಕಾಡುಬೀಸನಹಳ್ಳಿಯಿಂದ ಬೈಯಪ್ಪನಹಳ್ಳಿ ಡಿಪೊವರೆಗಿನ ಮೆಟ್ರೊ ಮಾರ್ಗ ನಿರ್ಮಾಣಕ್ಕೆ 1,025 ಮರಗಳನ್ನು ಕಡಿಯಲು ಅನುಮತಿ ನೀಡುವ ಕುರಿತು ಬಿಬಿಎಂಪಿ ಅರಣ್ಯ ವಿಭಾಗವು ಲಾಕ್‌ಡೌನ್‌ ಸಂದರ್ಭದಲ್ಲಿ, ಅಂದರೆ ಏ.30ರಂದು ಅಧಿಸೂಚನೆ ಹೊರಡಿಸಿತ್ತು. ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ಕಡಿಮೆ ಇದ್ದ ಬಗ್ಗೆ ಪರಿಸರ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ ಲಾಕ್‌ಡೌನ್‌ ತೆರವುಗೊಂಡ ನಂತರ ಹತ್ತು ದಿನಗಳವರೆಗೆ ಕಾಲಾವಕಾಶ ನೀಡಲಾಗುವುದು ಎಂದು ಬಿಬಿಎಂಪಿ ಭರವಸೆ ನೀಡಿತ್ತು. ಪರಿಷ್ಕೃತ ದಿನಾಂಕದ ಪ್ರಕಾರ ಆಕ್ಷೇಪಣೆ ಸಲ್ಲಿಕೆಗೆ ಜೂನ್‌ 30 ಕೊನೇಯ ದಿನವಾಗಿದೆ. 

ನಮ್ಮ ಮೆಟ್ರೊ 2ಎ ಮತ್ತು 2ಬಿ ಮಾರ್ಗಗಳ ಕಾಮಗಾರಿಗೆ ಕಡಿಯುವ ಮರಗಳ ವಿವರವನ್ನು ಜೂನ್‌ 23ರಂದು ಪ್ರಕಟಿಸಲಾಗಿದೆ. ಸಿಲ್ಕ್‌ ಬೋರ್ಡ್‌ನಿಂದ ಕಾಡುಬೀಸನಹಳ್ಳಿಯವರೆಗೆ 833, ಕಸ್ತೂರಿ ನಗರ ಮತ್ತು ಹೆಬ್ಬಾಳ ಬಳಿಯ ಕೆಂಪಾಪುರದವರೆಗೆ 1,507 ಮರಗಳನ್ನು ಕಡಿಯಲಾಗುತ್ತಿದೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಕೆಗೆ ಹತ್ತು ದಿನ ಕಾಲಾವಕಾಶ ನೀಡಲಾಗಿದೆ. 

‘ಒಂದೇ ಯೋಜನೆಯಡಿ ಕಡಿಯುತ್ತಿರುವ ಮರಗಳ ಸಂಖ್ಯೆಯನ್ನು ತಿಳಿಸಿದರೆ ವಿರೋಧ ವ್ಯಕ್ತವಾಗುತ್ತದೆ ಎಂಬ ಕಾರಣಕ್ಕೆ, ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗುತ್ತಿದೆ. ಕಡಿಯುತ್ತಿರುವ ಮರಗಳ ಸಂಖ್ಯೆ ಹೆಚ್ಚು ಎನಿಸಬಾರದು ಎಂಬ ಉದ್ದೇಶ ನಿಗಮಕ್ಕೆ ಇದ್ದಂತಿದೆ’ ಎಂದು ಜಯನಗರದ ಸಾಮಾಜಿಕ ಕಾರ್ಯಕರ್ತರಾದ ರಜನಿ ಸಂತೋಷ್‌ ಟೀಕಿಸಿದರು. 


ಮೆಟ್ರೊ ಯೋಜನೆಗೆ ಕಡಿಯುತ್ತಿರುವ ಮರಗಳ ವಿವರ

‘ಒಂದೇ ಯೋಜನೆಯಡಿ ಹೀಗೆ ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸುವುದರಿಂದ ಸಾರ್ವಜನಿಕರಿಗೂ ಈ ಬಗ್ಗೆ ಗಮನ ಹರಿಸಲು ಆಗುವುದಿಲ್ಲ. ಆಕ್ಷೇಪಣೆ ಸಲ್ಲಿಸುವ ವೇಳೆಯೂ ಗೊಂದಲವಾಗುತ್ತದೆ. ಮರಗಳನ್ನು ರಕ್ಷಿಸಲು, ನಗರದಲ್ಲಿ ಹಸಿರು ಉಳಿಸಲು ಹೆಚ್ಚು ಜನ ಕೈಜೋಡಿಸಬೇಕಾಗಿದೆ’ ಎಂದು ಪರಿಸರ ಕಾರ್ಯಕರ್ತ ದತ್ತಾತ್ರೇಯ ದೇವರೆ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು