ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಅಪಾರ್ಟ್‌ಮೆಂಟ್‌ಗೆ ವಾರಕ್ಕೆ 35 ಸಾವಿರ ಲೀಟರ್‌ ಕಾವೇರಿ ನೀರು

ಹೊರವಲಯದ ಪ್ರದೇಶಗಳಿಗೆ ಜಲಮಂಡಳಿ ಅಧ್ಯಕ್ಷರ ಭೇಟಿ; ನೀರಿನ ಸರಬರಾಜು ವ್ಯವಸ್ಥೆ ಪರಿಶೀಲನೆ
Published 10 ಮಾರ್ಚ್ 2024, 16:03 IST
Last Updated 10 ಮಾರ್ಚ್ 2024, 16:03 IST
ಅಕ್ಷರ ಗಾತ್ರ

ಬೆಂಗಳೂರು: ಪಾಲಿಕೆ ನಿಯಮಾವಳಿಗಳ ಪ್ರಕಾರ, ಅಪಾರ್ಟ್‍ಮೆಂಟ್‍ಗೆ ದೈನಂದಿನ ಕುಡಿಯುವ ಮತ್ತು ಅಡುಗೆ ಅಗತ್ಯಗಳಿಗಾಗಿ ವಾರಕ್ಕೆ 35 ಸಾವಿರ ಲೀಟರ್ ಕಾವೇರಿ ನೀರನ್ನು ಸರಬರಾಜು ಮಾಡಲಾಗುತ್ತದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್‌ ಭರವಸೆ ನೀಡಿದರು.

ಶನಿವಾರ ಮತ್ತು ಭಾನುವಾರ ನಗರದ ಹೊರ ವಲಯದ ಪ್ರದೇಶದಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಪರಿಶೀಲಿಸಿ, ನಾಗರಿಕರ ಸಮಸ್ಯೆಗಳನ್ನು ಆಲಿಸಿ ಅವರು ಮಾತನಾಡಿದರು.

ಕಮ್ಮನಹಳ್ಳಿಯ ಅಮೋದ ವಾಲ್‌ಮಾರ್ಟ್‌ ಅಪಾರ್ಟ್‍ಮೆಂಟ್ ಮಾಲೀಕರ ಸಂಘದ ಸದಸ್ಯರು ಕೊಳವೆಬಾವಿಗಳು ಬತ್ತಿರುವುದರಿಂದ ಉಂಟಾಗಿರುವ ಸಮಸ್ಯೆಗಳನ್ನು ವಿವರಿಸಿದರು. ಅಪಾರ್ಟ್‍ಮೆಂಟ್‍ಗೆ ಕಾವೇರಿ ನೀರು ಸಂಪರ್ಕಕ್ಕಾಗಿ 2013ರಲ್ಲಿ ನೀರಿನ ಸಂಪರ್ಕಕ್ಕಾಗಿ ಬಿಲ್ಡರ್ ಈಗಾಗಲೇ ಅಗತ್ಯ ಶುಲ್ಕವನ್ನು ಮಂಡಳಿಗೆ ಪಾವತಿಸಿದ್ದಾರೆ ಎಂದು ತಿಳಿಸಿದರು.

‘ಕಮ್ಮನಹಳ್ಳಿ ಗ್ರಾಮವು ಬಿಬಿಎಂಪಿಯ 110 ಗ್ರಾಮಗಳ ವ್ಯಾಪ್ತಿಗೆ ಬರುತ್ತಿದ್ದು, ಕಾವೇರಿ 5ನೇ ಹಂತ ಕಾರ್ಯಾರಂಭವಾದ ಮೇಲೆ ನೀರು ಸಿಗುತ್ತದೆ’ ಎಂದು ಅಧ್ಯಕ್ಷರು ಹೇಳಿದರು.

ಕಮ್ಮನಹಳ್ಳಿ ಕೆರೆಯ ಪಕ್ಕದಲ್ಲಿ ಫಿಲ್ಟರ್ ಬೋರ್‌ವೆಲ್‌ ಕೊರೆದು, ಸಮೀಪದ ಅಪಾರ್ಟ್‍ಮೆಂಟ್‍ಗಳಿಗೆ ಕುಡಿಯಲು ಮತ್ತು ಅಡುಗೆ ಹೊರತುಪಡಿಸಿ ಇತರೆ ಅಗತ್ಯಗಳಿಗಾಗಿ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚಿಸಿದರು.

ಹೊಂಗಸಂದ್ರದ ಗಾರ್ವೆಭಾವಿಪಾಳ್ಯದಲ್ಲಿರುವ ಪೂರ್ವವೆಸ್ಟೆಂಡ್ ಸಮೀಪದ ಅಗರ ಮತ್ತು ಚಿಕ್ಕಬೇಗೂರು ಕೆರೆಗಳ ಬಳಿ ಫಿಲ್ಟರ್‌ ಬೋರ್‌ವೆಲ್‌ ಕೊರೆದು ನೀರು ಪೂರೈಸಲು ಹೇಳಿದರು.

ಹೆಚ್ಚುವರಿ ಟ್ಯಾಂಕ್‌ ಅಳವಡಿಸಲು ಸೂಚನೆ: ವಸಂತಪುರ ವಾರ್ಡ್‍ನ ಯಾದಳಂ ನಗರದ ಕೊಳೆಗೇರಿಯಲ್ಲಿ ಸ್ಥಳೀಯರೊಂದಿಗೆ ಚರ್ಚಿಸಿದ ಅಧ್ಯಕ್ಷರು, ಚಿಕ್ಕ ಗಲ್ಲಿಗಳಲ್ಲಿನ ಮನೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಮುಖ್ಯ ಎಂಜಿನಿಯರ್ ಎಸ್.ವಿ.ವೆಂಕಟೇಶ್ ಅವರಿಗೆ ಸೂಚನೆ ನೀಡಿದರು. ಜನರ ಮನವಿಯಂತೆ ಹೆಚ್ಚಿನ ಟ್ಯಾಂಕ್‌ ಅಳವಡಿಸಲು ಹೇಳಿದರು.

ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದ ಗುಲ್ಬರ್ಗ ಕಾಲೊನಿಯ ಜನರೊಂದಿಗೆ ಮಾತುಕತೆ ನಡೆಸಿ, ಕಾಲೊನಿ ಮತ್ತು ಇತರ ಅಗತ್ಯವಿರುವ ಪ್ರದೇಶಗಳಲ್ಲಿ ಹೆಚ್ಚುವರಿ 2 ಸಾವಿರ ಲೀಟರ್ ಟ್ಯಾಂಕ್‍ಗಳನ್ನು ಅಳವಡಿಸಬೇಕು. ಈಗಿರುವ ಕೊಳವೆಬಾವಿಗಳನ್ನು ದುರಸ್ತಿ ಮಾಡಿ, ಪೈಪ್‍ಲೈನ್ ಬದಲು ಟ್ಯಾಂಕ್‍ನಿಂದ ನೀರು ಸಂಗ್ರಹಿಸಲು ಜನರಿಗೆ ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಗುಬ್ಬಲಾಳದ ಮಂತ್ರಿ ಟ್ರಾಂಕ್ವಿಲ್ ವಸತಿ ಸಮುಚ್ಛಯದಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಶೀಲಿಸಿದ ರಾಮ್‌ ಪ್ರಸಾತ್‌ ಮನೋಹರ್‌, ಕುಡಿಯುವ ನೀರು ಪೂರೈಸುವುದಾಗಿ ಭರವಸೆ ನೀಡಿದರು. ಇನ್ನಿತರ ಬಳಕೆಗೆ ತ್ಯಾಜ್ಯ ನೀರನ್ನು ಸಂಸ್ಕರಿಸಿ ಬಳಸಬೇಕು ಎಂದು ಸೂಚನೆ ನೀಡಿದರು.

ಸುಬ್ರಮಣ್ಯಪುರ ಹಾಗೂ ದೊರಕೆರೆ ಅಂಗಳದಲ್ಲಿ ನೀರು ಸಂಸ್ಕರಣ ಘಟಕಗಳನ್ನು ನಿರ್ಮಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಸಾಧ್ಯತೆಯನ್ನು ತಜ್ಞರೊಂದಿಗೆ ಪರಿಶೀಲಿಸಿ ದೀರ್ಘಕಾಲದ ಪರಿಹಾರವಾಗಿ ಪರಿಗಣಿಸಲು ಅಧಿಕಾರಿಗಳಿಗೆ ಆದೇಶಿಸಿದರು.

ಅಗರ ಕೆರೆ ಬಳಿಯ ಎಸ್‍ಟಿಪಿಯಲ್ಲಿ ನೀರು ಶುದ್ಧೀಕರಿಸಿ ಪೂರೈಕೆ ಮಾಡುತ್ತಿರುವುದನ್ನು ಪರಿಶೀಲಿಸಿ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದರು.

ಎ.ನಾರಾಯಣಪುರ, ಕೆ.ಆರ್.ಪುರ, ವಿಜ್ಞಾನ ನಗರ, ಎಚ್‍ಎಎಲ್ ವಾರ್ಡ್‍ಗೆ ಟ್ಯಾಂಕರ್‌ ನೀರು ಸರಬರಾಜು ವ್ಯವಸ್ಥೆ ಪರಿಶೀಲಿಸಿದರು. ಕೃಷ್ಣನಗರದ ಕೊಳೆಗೇರಿಗೆ ಭೇಟಿ ನೀಡಿ, ಹೆಚ್ಚುವರಿಯಾಗಿ ಒಂದು ಟ್ಯಾಂಕ್‌ ಅಳವಡಿಸಲು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT