ಬೆಂಗಳೂರು: ಅಪಾರ್ಟ್‌ಮೆಂಟ್ ಒಂದರ ಫ್ಲ್ಯಾಟ್ ಗಳ ಖಾತೆ ನೀಡಲು ₹ 5 ಲಕ್ಷ ಲಂಚ ಪಡೆದ ಬಿಬಿಎಂಪಿ ಮಹದೇವಪುರ ವಲಯದ ಕಂದಾಯ ನಿರೀಕ್ಷಕ ನಟರಾಜ್ ಮತ್ತು ಅವರ ಪರವಾಗಿ ಹಣ ಪಡೆದ ಖಾಸಗಿ ವ್ಯಕ್ತಿ ಪವನ್ ಎಂಬುವವರನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮುಕುಂದ್ ಡೆವಲಪರ್ಸ್ ಕೊಡಿಗೆಹಳ್ಳಿಯಲ್ಲಿ ಬೃಂದಾವನ ಹೆಸರಿನ ಅಪಾರ್ಟ್‌ಮೆಂಟ್ ನಿರ್ಮಿಸಿದೆ. ಅಲ್ಲಿನ ಫ್ಲ್ಯಾಟ್ ಗಳಿಗೆ ಖಾತಾ ಕೋರಿ ಮುಕುಂದ್ ಡೆವಲಪರ್ಸ್ ನ ಮಂಜುನಾಥ್ ಎಂಬುವವರು ಬಿಬಿಎಂಪಿಗೆ ಅರ್ಜಿ ಸಲ್ಲಿಸಿದ್ದರು.
ಪ್ರತಿ ಫ್ಲ್ಯಾಟ್ ನ ಖಾತೆಗೆ ತಲಾ ₹10,000ದಂತೆ ಒಟ್ಟು ₹7.90 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ನಟರಾಜ್, ಮುಂಗಡವಾಗಿ ₹5 ಲಕ್ಷ ಕೊಡುವಂತೆ ಕೇಳಿದ್ದರು. ಖಾತಾ ನೀಡಿದ ಬಳಿಕ ಬಾಕಿ ₹2.90 ಲಕ್ಷ ನೀಡುವಂತೆ ಸೂಚಿಸಿದ್ದರು. ಈ ಬಗ್ಗೆ ಮಂಜುನಾಥ್ ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ಘಟಕಕ್ಕೆ ದೂರು ನೀಡಿದ್ದರು.
ಶುಕ್ರವಾರ ಬಿಬಿಎಂಪಿ ಮಹದೇವಪುರ ಕಚೇರಿಗೆ ಹಣ ತಲುಪಿಸುವಂತೆ ನಟರಾಜ್ ಸೂಚಿಸಿದ್ದರು. ಗುರುವಾರ ಕೂಡ ಬಿಬಿಎಂಪಿಯ ಮಹದೇವಪುರ ವಲಯ ಕಚೇರಿ ಮೇಲೆ ದಾಳಿ ಮಾಡಿದ್ದ ಲೋಕಾಯುಕ್ತ ಪೊಲೀಸರು, ಶುಕ್ರವಾರವೂ ಶೋಧ ಮುಂದುವರಿಸಿದ್ದರು. ಕಾರ್ಯಾಚರಣೆ ನಡೆಯುತ್ತಿರುವಾಗಲೇ ಮಂಜುನಾಥ್ ಅವರನ್ನು ಭೇಟಿಮಾಡಿದ ನಟರಾಜ್, ಅಲ್ಲಿಯೇ ಇದ್ದ ಪವನ್ ಬಳಿ ಹಣ ಕೊಡುವಂತೆ ಸೂಚಿಸಿದರು. ಹಣ ಒಡೆದ ಪವನ್ ಅದನ್ನು ನಟರಾಜ್ ಗೆ ತಲುಪಿಸಿದರು. ತಕ್ಷಣ ದಾಳಿಮಾಡಿದ ಲೋಕಾಯುಕ್ತ ಪೊಲೀಸರು ಇಬ್ಬರನ್ನೂ ಬಂಧಿಸಿದರು.
ಲೋಕಾಯುಕ್ತದ ಬೆಂಗಳೂರು ನಗರ ಎಸ್ ಪಿ ಕೆ.ವಿ. ಅಶೋಕ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಸವರಾಜ ಮುಗ್ದಂ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.