ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೈಗಾರಿಕಾ ಮೂಲಸೌಕರ್ಯಕ್ಕೆ ₹5 ಸಾವಿರ ಕೋಟಿ ಸಾಲ: ಸಚಿವ ಎಂ.ಬಿ.ಪಾಟೀಲ

Published 5 ಸೆಪ್ಟೆಂಬರ್ 2024, 20:03 IST
Last Updated 5 ಸೆಪ್ಟೆಂಬರ್ 2024, 20:03 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿರುವ ಕೈಗಾರಿಕಾ ಪ್ರದೇಶಗಳಿಗೆ ನದಿ ಮೂಲದಿಂದ ಪ್ರತ್ಯೇಕ ನೀರು ಸರಬರಾಜು ವ್ಯವಸ್ಥೆ ಹಾಗೂ ಮೂಲಸೌಕರ್ಯ ಕಲ್ಪಿಸಲು ₹5 ಸಾವಿರ ಕೋಟಿ ಸಾಲ ಪಡೆಯಲಾಗುತ್ತದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಏರ್ಪಡಿಸಿದ್ದ 'ಇನ್ನೋವರ್ಜ್' ಸಮಾವೇಶದಲ್ಲಿ ಅವರು ಗುರುವಾರ ಮಾತನಾಡಿದರು.

‘ಉದ್ದೇಶಿತ ನೀರು ಸರಬರಾಜು ಯೋಜನೆಗೆ ಅಂದಾಜು ₹2 ಸಾವಿರ ಕೋಟಿ ಬೇಕಾಗುತ್ತದೆ. ಉಳಿದ ₹3 ಸಾವಿರ ಕೋಟಿಯನ್ನು ಹಳೇ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯ ಒದಗಿಸಲು ಹಾಗೂ ಹೊಸ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ, ಭೂಸ್ವಾಧೀನಕ್ಕೆ ಬಳಸಲಾಗುವುದು’ ಎಂದು ಅವರು ಹೇಳಿದರು.

‘ರಾಜ್ಯದಲ್ಲಿರುವ ಬಹುತೇಕ ಕೈಗಾರಿಕಾ ಪ್ರದೇಶಗಳಲ್ಲಿ ನಿರೀಕ್ಷಿತ ಮೂಲಸೌಕರ್ಯ ಇಲ್ಲ. ಪ್ರತ್ಯೇಕ ನೀರು ಸರಬರಾಜು ವ್ಯವಸ್ಥೆಯಂತೂ ಇಲ್ಲವೇ ಇಲ್ಲ. ಹೀಗಾಗಿ, ಹಣಕಾಸು ಇಲಾಖೆ ಜತೆಗೂ ಚರ್ಚಿಸಲಾಗುತ್ತಿದೆ’ ಎಂದು ಅವರು ಹೇಳಿದರು.

ಸಿಐಐ ಇಂಡಿಯಾ ಅಧ್ಯಕ್ಷ, ವೊಲ್ವೊ ಅಧ್ಯಕ್ಷ ಕಮಲ್ ಬಾಲಿ, ಸಿಐಐ ಕರ್ನಾಟಕ ಘಟಕದ ಅಧ್ಯಕ್ಷ ಎನ್. ವೇಣು, ಉಪಾಧ್ಯಕ್ಷ ರಬೀಂದ್ರ ಶ್ರೀಕಂಠನ್, ಐಟಿ-ಬಿಟಿ ಇಲಾಖೆಯ ಕಾರ್ಯದರ್ಶಿ ಏಕರೂಪ್ ಕೌರ್ ಉಪಸ್ಥಿತರಿದ್ದರು.

ಕೆೆಎಚ್‌ಐಆರ್‌ಸಿಗೆ 10 ದಿನದಲ್ಲಿ ಚಾಲನೆ

ಬೆಂಗಳೂರಿನ ಹೊರ ವಲಯದಲ್ಲಿ 2000 ಎಕರೆ ವಿಸ್ತೀರ್ಣದಲ್ಲಿ ಎರಡು ಹಂತಗಳಲ್ಲಿ ನಿರ್ಮಾಣವಾಗುವ ‘ ಜ್ಞಾನ– ಆರೋಗ್ಯ– ಆವಿಷ್ಕಾರ ಮತ್ತು ಸಂಶೋಧನಾ ನಗರ’ (ಕೆಎಚ್‌ಐಆರ್‌ಸಿ) ಯೋಜನೆಗೆ 10 ದಿನದೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಬೃಹತ್‌ ಮತ್ತು ಎಂ.ಬಿ. ಪಾಟೀಲ ತಿಳಿಸಿದರು. ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಎರಡು ಪ್ರತ್ಯೇಕ ಸ್ಟಾರ್ಟಪ್ ಪಾರ್ಕ್ ಸ್ಥಾಪಿಸಲಾಗುವುದು. ಅದಕ್ಕೆ ಅಗತ್ಯವಾಗಿರುವ ಭೂಮಿಯನ್ನು ಬೆಂಗಳೂರಿನಲ್ಲಿ ಗುರುತಿಸಲಾಗಿದೆ. ಬೆಳಗಾವಿಯಲ್ಲಿ ಪರಿಶೀಲಿಸಲಾಗುತ್ತಿದೆ. ಬೆಳಗಾವಿಯಲ್ಲಿ ‘ಮೆಡ್-ಟೆಕ್ ಸ್ಟಾರ್ಟಪ್ ಪಾರ್ಕ್’ ಸ್ಥಾಪಿಸುವ ಉದ್ದೇಶವಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT