ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಕಾಫಿ ಸಮ್ಮೇಳನ: ಪುಡಿ ತ್ಯಾಜ್ಯದಿಂದ ತೈಲೋತ್ಪಾದನೆ

ವಿಶ್ವ ಕಾಫಿ ಸಮ್ಮೇಳನದಲ್ಲಿ ಗಮನ ಸೆಳೆಯುತ್ತಿದೆ ಕಾಫಿ ಮೌಲ್ಯವರ್ಧಿತ ಉತ್ಪನ್ನ
Published 26 ಸೆಪ್ಟೆಂಬರ್ 2023, 0:27 IST
Last Updated 26 ಸೆಪ್ಟೆಂಬರ್ 2023, 0:27 IST
ಅಕ್ಷರ ಗಾತ್ರ

ಬೆಂಗಳೂರು: ಕಾಫಿ ಪುಡಿಯಿಂದ ಡಿಕಾಕ್ಷನ್‌ ತಯಾರಿಸಿದ ಮೇಲೆ ಉಳಿಯುವ ತ್ಯಾಜ್ಯ(ಚರಟ)ವನ್ನು ಹೋಟೆಲ್‌, ರೆಸ್ಟೋರೆಂಟ್‌ಗಳು, ಮನೆಗಳಲ್ಲಿ ಸಹಜವಾಗಿ ಹೊರಕ್ಕೆ ಎಸೆಯಲಾಗುತ್ತದೆ. ಇಲ್ಲವೇ ತೋಟದಲ್ಲಿರುವ ಗಿಡಗಳಿಗೆ ಗೊಬ್ಬರವಾಗಿ ಬಳಸುತ್ತಾರೆ. ಆದರೆ, ಕೋಲ್ಕತ್ತದ ಮಿತ್ರಾ ಎಂಬುವರು ಆ ತ್ಯಾಜ್ಯವನ್ನೇ ಬಳಸಿ ಕಾಫಿ ತೈಲ(ಎಣ್ಣೆ) ಸಂಶೋಧಿಸಿ ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ಈ ತೈಲವನ್ನು ಚರ್ಮಕ್ಕೆ ಲೇಪಿಸುವುದರಿಂದ ಕಾಂತಿ ವೃದ್ಧಿಸಲಿದೆ. ಜತೆಗೆ, ತಲೆಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯಲು ಸಹಕಾರಿಯಾಗಲಿದೆ. ವಿಟಮಿನ್‌–ಇ ಹೆಚ್ಚಲಿದೆ ಎಂದು ಹೇಳುತ್ತಾರೆ ಮಿತ್ರಾ. ಅವರು ‘ಕಫಾ ಕುವಾ ಕಂಪನಿ’ ಸ್ಥಾಪಿಸಿ, ಈ ಕಾಫಿ ಪುಡಿಯ ತ್ಯಾಜ್ಯವನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುತ್ತಿದ್ದಾರೆ.

ನಗರದ ಅರಮನೆ ಆವರಣದಲ್ಲಿ ಆರಂಭವಾಗಿರುವ 5ನೇ ವಿಶ್ವ ಕಾಫಿ ಸಮ್ಮೇಳನದ ವಸ್ತು ಪ್ರದರ್ಶನದ ನವೋದ್ಯಮ ವಿಭಾಗದಲ್ಲಿ ಈ ತೈಲ ಗಮನ ಸೆಳೆಯುತ್ತಿದೆ. ಈ ಉತ್ಪನ್ನಕ್ಕೆ ಅರೇಬಿಕಾ ಅಬ್ಸಲ್ಯೂಟ್ ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ.

‘ಕಾಫಿ ಪುಡಿಯನ್ನು ಬಳಸಿದ ಮೇಲೆ ಸಹಜವಾಗಿ ಅದು ನಿಷ್ಪ್ರಯೋಜಕ ಎಂದು ಎಸೆಯುತ್ತೇವೆ. ಅದನ್ನು ಸಂಗ್ರಹಿಸಿ, ಅದರಲ್ಲಿನ ನೀರಿನ ಅಂಶವನ್ನು ಹೊರಹಾಕಿ ಎಣ್ಣೆ ತೆಗೆಯಲಾಗುತ್ತಿದೆ. 10 ಕೆ.ಜಿ ತ್ಯಾಜ್ಯ ಬೇಯಿಸಿದರೆ 300ರಿಂದ 500 ಎಂ.ಎಲ್‌ನಷ್ಟು ತೈಲ ಬರುತ್ತದೆ. ಕೆಲವು ಬಾರಿ ವ್ಯತ್ಯಾಸ ಆಗಲಿದೆ. ಅದನ್ನು ಸಣ್ಣ ಬಾಟಲ್‌ಗಳಿಗೆ ತುಂಬಿ ಮಾರಾಟ ಮಾಡುತ್ತಿದ್ದೇವೆ’ ಎಂದು ಮಿತ್ರಾ ಹೇಳುತ್ತಾರೆ.

‘ಈ ತೈಲವನ್ನು ಬಳಸುವುದರಿಂದ ದೇಹಕ್ಕೆ ಹಾನಿ ಇಲ್ಲ. ತಲೆಯ ಕೂದಲ ಕಾಂತಿ ಹೆಚ್ಚಲಿದೆ. ಕೂದಲು ಉದುರುವಿಕೆ ಕಡಿಮೆಯಾಗಲಿದೆ. ಬಿಸಿಲಿನ ತಾಪವನ್ನು ತಡೆದುಕೊಳ್ಳುವ ಶಕ್ತಿಯೂ ಬರಲಿದೆ. ಇದು ಶುದ್ಧ ನೈಸರ್ಗಿಕ ಎಣ್ಣೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಚರಟವನ್ನೇ ಸಂಸ್ಕರಿಸಿ ರೋಲ್‌ ಆನ್‌ ಅಬ್ಸಲ್ಯೂಟ್ ಎಂಬ ಉತ್ಪನ್ನ ಸಹ ತಯಾರಿಸಲಾಗಿದೆ. ಈ ಎಣ್ಣೆಯನ್ನು ಕಾಲಿನ ಹಿಮ್ಮಡಿ ಭಾಗದಲ್ಲಿ ಉಂಟಾಗುವ ಬಿರುಕುಗಳಿಗೆ ಬಳಸಬಹುದು. ಇದು ಹಿಮ್ಮಡಿ ನೋವಿಗೆ ರಾಮಬಾಣ’ ಎಂದು ಹೇಳಿದರು.

‘ವಿವಿಧ ಅಳತೆಯ ಬಾಟಲಿಗಳಿಗೆ ₹ 432ರಿಂದ ₹ 550ರ ವರೆಗೆ ದರವಿದೆ. ಎರಡೂ ಉತ್ಪನ್ನಕ್ಕೆ ಪೇಟೆಂಟ್ ಲಭಿಸಿದೆ. ಬೇಡಿಕೆ ಹೆಚ್ಚಿದರೆ ಮಾರುಕಟ್ಟೆ ವಿಸ್ತರಿಸುವ ಆಲೋಚನೆಯಿದೆ. ಎಲ್ಲವೂ ಪರಿಸರ ಸ್ನೇಹಿ ಉತ್ಪನ್ನಗಳು. ತೈಲ ತೆಗೆದ ಮೇಲೆ ಉಳಿಯುವ ಪದಾರ್ಥವನ್ನು ಉರುವಲಾಗಿ ಬಳಸುತ್ತಿದ್ದೇವೆ. ಅದನ್ನೂ ಪ್ಯಾಕೆಟ್‌ ಮಾಡಿ ಮಾರಾಟ ಮಾಡುತ್ತಿದ್ದೇವೆ’ ಎಂದು ಹೇಳಿದರು.

ವಿಶ್ವ ಕಾಫಿ ಸಮ್ಮೇಳನದ ಪ್ರದರ್ಶನದಲ್ಲಿ ಕಂಡು ಬಂದ ಕಾಫಿ ತ್ಯಾಜ್ಯದಿಂದ ತಯಾರಿಸಿದ ತೈಲದ ಬಾಟಲಿಯನ್ನು ಮಿತ್ರಾ  ಪ್ರದರ್ಶಿಸಿದರು. ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್‌ ಪಿ.ಎಸ್‌.
ವಿಶ್ವ ಕಾಫಿ ಸಮ್ಮೇಳನದ ಪ್ರದರ್ಶನದಲ್ಲಿ ಕಂಡು ಬಂದ ಕಾಫಿ ತ್ಯಾಜ್ಯದಿಂದ ತಯಾರಿಸಿದ ತೈಲದ ಬಾಟಲಿಯನ್ನು ಮಿತ್ರಾ  ಪ್ರದರ್ಶಿಸಿದರು. ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್‌ ಪಿ.ಎಸ್‌.
ಹಿಮ್ಮಡಿಯ ಭಾಗಕ್ಕೆ ಬಳಸಬಹುದಾದ ಕಾಫಿ ಎಣ್ಣೆ.
ಹಿಮ್ಮಡಿಯ ಭಾಗಕ್ಕೆ ಬಳಸಬಹುದಾದ ಕಾಫಿ ಎಣ್ಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT