ಶುಕ್ರವಾರ, ಜೂನ್ 18, 2021
24 °C
ವೈದ್ಯರು, ಪೊಲೀಸರಿಂದ ದಾಖಲಾತಿ ನಿರಾಕರಣೆ l ಲೈಂಗಿಕ ಶೋಷಣೆಗೊಳಗಾದವರ ದೂರು

ಸಂತ್ರಸ್ತ ಮಕ್ಕಳ ಕೈಸೇರದ ದಾಖಲೆ

ಮನೋಹರ್‌ ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ಬಾಲನ್ಯಾಯ ಕಾಯ್ದೆ ಅನ್ವಯ ₹1 ಲಕ್ಷದವರೆಗೆ ವೈದ್ಯಕೀಯ ವೆಚ್ಚ ಭರಿಸಲು ಸರ್ಕಾರ ‘ಅಭಯ ನಿಧಿ’ ಸ್ಥಾಪಿಸಿದೆ. ಆದರೆ, ನಿಧಿಯ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಪಡೆಯಲು ಸಂತ್ರಸ್ತರು ಹರಸಾಹಸ ಪಡಬೇಕಾಗಿದೆ.

ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ದೂರನ್ನು ಸ್ವೀಕರಿಸಿದ ಕೂಡಲೇ ಅಥವಾ ಆಸ್ಪತ್ರೆಗೆ ದಾಖಲಾದ ತಕ್ಷಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ₹5 ಸಾವಿರ ಪರಿಹಾರ ನೀಡಲಾಗುತ್ತದೆ. ಮಕ್ಕಳ ರಕ್ಷಣಾ ಘಟಕಗಳಿಂದ ವೈದ್ಯರ ಶಿಫಾರಸಿನ ಅನ್ವಯ ಸಂತ್ರಸ್ತ ಮಕ್ಕಳಿಗೆ ಔಷಧಿ, ಆಹಾರ ಹಾಗೂ ಪ್ರಾಸಂಗಿಕ ವೆಚ್ಚ (ಬಟ್ಟೆ, ನೀರು) ಭರಿಸಲು ವಿವಿಧ ಹಂತಗಳಲ್ಲಿ ಪರಿಹಾರ ನೀಡಲಾಗುತ್ತದೆ.

ಇದಕ್ಕಾಗಿ ಸಂತ್ರಸ್ತರು ವೈದ್ಯರು ದೃಢೀಕರಿಸಿದ ಪ್ರಮಾಣಪತ್ರ ಹಾಗೂ ಸ್ಥಳೀಯ ಠಾಣೆಯಲ್ಲಿ ದಾಖಲಾಗುವ ಪ್ರಥಮ ತನಿಖಾ ವರದಿ (ಎಫ್‌ಐಆರ್‌) ದಾಖಲೆಗಳನ್ನು ಸಲ್ಲಿಸಬೇಕು. ಆದರೆ, ವೈದ್ಯರು ಹಾಗೂ ಪೊಲೀಸರು ಸಂತ್ರಸ್ತರಿಗೆ ಅಗತ್ಯ ದಾಖಲೆಗಳನ್ನು ನೀಡುತ್ತಿಲ್ಲ. ಇದರಿಂದಾಗಿ ಪರಿಹಾರ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಂತ್ರಸ್ತರು ಮಕ್ಕಳ ಕಲ್ಯಾಣ ಸಮಿತಿಗೆ  ದೂರು ನೀಡುತ್ತಿದ್ದಾರೆ.

‘ವೈದ್ಯಕೀಯ ವರದಿ ಹಾಗೂ ಎಫ್‌ಐಆರ್‌ ಪ್ರತಿಯನ್ನು ಪಡೆದುಕೊಳ್ಳುವುದು ಸಂತ್ರಸ್ತರ ಕಾನೂನಾತ್ಮಕ ಹಕ್ಕು. ಸಂತ್ರಸ್ತರಿಗೆ ದಾಖಲಾತಿ  ಒದಗಿಸುವುದು ವೈದ್ಯರು ಹಾಗೂ ಪೊಲೀಸರ ಕರ್ತವ್ಯ. ಸಂತ್ರಸ್ತರಿಗೆ ಅಭಯ ನೀಡಿ, ಆತ್ಮಸ್ಥೈರ್ಯ ತುಂಬಬೇಕಾದವರೇ ಈ ರೀತಿ ಅಸಡ್ಡೆ ತೋರುತ್ತಿದ್ದಾರೆ. ಈ ಬಗ್ಗೆ ಸಮಿತಿಗೆ ಪದೇ ಪದೇ ದೂರುಗಳು ಬರುತ್ತಿವೆ’ ಎಂದು ಮಕ್ಕಳ ಕಲ್ಯಾಣ ಸಮಿತಿಯ ಬೆಂಗಳೂರು ಘಟಕದ ಅಧ್ಯಕ್ಷೆ ಅಂಜಲಿ ರಾಮಣ್ಣ ದೂರಿದರು.

‘ದೌರ್ಜನ್ಯಕ್ಕೊಳಗಾದ ಮಕ್ಕಳ ಪರವಾಗಿ ಪೋಷಕರು ಅಥವಾ ಬೆಂಬಲಿತ ವ್ಯಕ್ತಿಗಳು ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಲು ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆಯಲ್ಲಿ (ಪೋಕ್ಸೊ) ಅವಕಾಶವಿದೆ. ನೊಂದವರಿಗೆ ಪರಿಹಾರ ನೀಡಲು ಸರ್ಕಾರ ಹಣ ಬಿಡುಗಡೆ ಮಾಡಿದರೂ ಅದು ಫಲಾನುಭವಿಗಳ ಕೈಸೇರುತ್ತಿಲ್ಲ. ಸಂತ್ರಸ್ತರೊಡನೆ ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರು ಒರಟಾಗಿ ನಡೆದುಕೊಂಡಿರುವ ಬಗ್ಗೆಯೂ ಅನೇಕ ದೂರುಗಳು ಬಂದಿವೆ’ ಎಂದರು.

‘ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಗೆ, ನಗರ ಪೊಲೀಸ್‌ ಆಯುಕ್ತರಿಗೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಸಂತ್ರಸ್ತ ಮಕ್ಕಳಿಗೆ ಪರಿಹಾರದ ಹಣ ಪಡೆಯಲು ಅಗತ್ಯ ದಾಖಲೆ ಪೂರೈಸುವಂತೆ ವೈದ್ಯರು ಹಾಗೂ ಪೊಲೀಸರಿಗೆ ಸೂಚನೆ ನೀಡಿ ಸುತ್ತೋಲೆ ಹೊರಡಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು ಮಾಹಿತಿ ನೀಡಿದರು. 

2016ರಿಂದ 2019ರ ಏಪ್ರಿಲ್‌ವರೆಗೆ 61 ಸಂತ್ರಸ್ತರ ಮಕ್ಕಳಿಗೆ ಪರಿಹಾರ ಪಡೆದಿದ್ದಾರೆ.

***

ಸಂತ್ರಸ್ತರು ಸಲ್ಲಿಸಬೇಕಾದ ದಾಖಲೆಗಳು

ಪ್ರಥಮ ವರ್ತಮಾನ ವರದಿ (ಎಫ್‌ಐಆರ್‌)

ಆಸ್ಪತ್ರೆಗೆ ದಾಖಲಾದ ವೈದ್ಯಕೀಯ ವರದಿ

ಸಂತ್ರಸ್ತರ ಬ್ಯಾಂಕ್‌ ಖಾತೆ ಪ್ರತಿ

ಸಂತ್ರಸ್ತರು ಅಥವಾ ಪೋಷಕರ ಆಧಾರ್‌ ಕಾರ್ಡ್‌ ಪ್ರತಿ

***

‘ಸಿಪಿಎಸ್‌’ ಯೋಜನೆಯಡಿ ರಾಜ್ಯದ ‘ಪೋಕ್ಸೊ’ ಸಂತ್ರಸ್ತರಿಗೆ ಬಿಡುಗಡೆಯಾದ ಹಣ 

ವರ್ಷ; ಬಿಡುಗಡೆಯಾದ ಹಣ (₹ಕೋಟಿಗಳಲ್ಲಿ) 

2017; 37.20

2018; 32.72 

2019; 40.22 

***

ನಗರದಲ್ಲಿ ದಾಖಲಾದ ಪೋಕ್ಸೊ ಪ್ರಕರಣಗಳು

ವರ್ಷ; ಪ್ರಕರಣಗಳು; 

2017; 1,966; 

2018; 2,014

2019(ಅಕ್ಟೋಬರ್‌ವರೆಗೆ);1,125 

***

ವೈದ್ಯರು ಹಾಗೂ ಪೊಲೀಸರು ಸಂತ್ರಸ್ತ ಮಕ್ಕಳು ಅಥವಾ ಪೋಷಕರಿಗೆ ಅಗತ್ಯ ದಾಖಲೆ ಒದಗಿಸಬೇಕು. ಸಂತ್ರಸ್ತರ ಜೊತೆ ಮೃದುವಾಗಿ ವರ್ತಿಸಬೇಕು.
– ಅಂಜಲಿ ರಾಮಣ್ಣ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ, ಬೆಂಗಳೂರು

***

ಪೋಕ್ಸೊ ಕಾಯ್ದೆಯಡಿ ಎಲ್ಲ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳ ಮಾಹಿತಿ ಹಾಗೂ ಎಷ್ಟು ಮಂದಿ ಸಂತ್ರಸ್ತರಿಗೆ ಪರಿಹಾರ ಹಣ ಸಿಕ್ಕಿದೆ ಎಂದು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು.
–ಭಾಸ್ಕರ್‌ ರಾವ್‌, ಬೆಂಗಳೂರು ನಗರ ಪೊಲೀಸ್ ಆಯುಕ್ತ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು