ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಯಲ್ಲಿ ಇಸಿಜಿಗೆ ಹೋಗಿದ್ದ ಮಹಿಳೆ ಮಾಂಗಲ್ಯ ಕಳವು: ದೂರು ದಾಖಲು

Published 12 ಫೆಬ್ರುವರಿ 2024, 16:26 IST
Last Updated 12 ಫೆಬ್ರುವರಿ 2024, 16:26 IST
ಅಕ್ಷರ ಗಾತ್ರ

ಬೆಂಗಳೂರು: ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ಹೋಗಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರ ಕಳ್ಳತನವಾಗಿದ್ದು, ಈ ಸಂಬಂಧ ಗೋವಿಂದರಾಜನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಪಟ್ಟೇಗಾರಪಾಳ್ಯದ ನಿವಾಸಿಯಾಗಿರುವ 36 ವರ್ಷದ ಮಹಿಳೆ ಕಳ್ಳತನ ಸಂಬಂಧ ದೂರು ನೀಡಿದ್ದಾರೆ. ಮೂಡಲಪಾಳ್ಯದಲ್ಲಿರುವ ಆಸ್ಪತ್ರೆಯೊಂದರ ಶುಶ್ರೂಷಕಿಯರು ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಫೆ. 8ರಂದು ಮಹಿಳೆಗೆ ಎದೆ ನೋವು ಕಾಣಿಸಿಕೊಂಡಿತ್ತು. ತಪಾಸಣೆಗೆಂದು ಪತಿ ಜೊತೆ ಆಸ್ಪತ್ರೆಗೆ ಹೋಗಿದ್ದರು. ತಪಾಸಣೆ ಮಾಡಿದ್ದ ವೈದ್ಯೆ, ಇಸಿಜಿ ಮಾಡಿಸಲು ಹೇಳಿದ್ದರು. ಆಸ್ಪತ್ರೆಯಲ್ಲಿದ್ದ ಆರೋಪಿಗಳು, ಮಹಿಳೆಯನ್ನು ಇಸಿಜಿ ಕೊಠಡಿಗೆ ಕರೆದೊಯ್ದಿದ್ದರು. ಪತಿ ಹೊರಗಡೆ ಇದ್ದರು.’

‘ಮಹಿಳೆಯ ಬಳಿ ₹ 2.50 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರವಿತ್ತು. ಇಸಿಜಿ ಮಾಡುವುದಕ್ಕೂ ಮುನ್ನ ಅದನ್ನು ತೆಗೆಯುವಂತೆ ಆರೋಪಿಗಳು ಹೇಳಿದ್ದರು. ಸರ ತೆಗೆದಿದ್ದ ಮಹಿಳೆ, ಪತಿಗೆ ನೀಡಲು ಮುಂದಾಗಿದ್ದರು. ಆದರೆ, ಪತಿಯನ್ನು ಕೊಠಡಿಯೊಳಗೆ ಕರೆಸಲು ಆರೋಪಿಗಳು ನಿರಾಕರಿಸಿದ್ದರು. ಚಿನ್ನದ ಸರವನ್ನು ತಲೆದಿಂಬಿನ ಕೆಳಗೆ ಇರಿಸುವಂತೆ ಆರೋಪಿಗಳು ಹೇಳಿದ್ದರು. ಅದರಂತೆ ಮಹಿಳೆ, ದಿಂಬಿನ ಕೆಳಗೆ ಸರ ಇರಿಸಿದ್ದರು.’

‘ಇಸಿಜಿ ಮುಗಿಯುತ್ತಿದ್ದಂತೆ ಆರೋಪಿಗಳು, ತರಾತುರಿಯಲ್ಲಿ ಮಹಿಳೆಯನ್ನು ಕೊಠಡಿಯಿಂದ ಹೊರಗೆ ಕಳುಹಿಸಿದ್ದರು. ದಿಂಬಿನ ಕೆಳಗೆ ಸರ ಇರಿಸಿದ್ದನ್ನು ಮರೆತಿದ್ದ ಮಹಿಳೆ, ಮನೆಗೆ ಹೋಗಿದ್ದರು. ಸ್ನಾನ ಮಾಡುವ ಸಂದರ್ಭದಲ್ಲಿ ಮಾಂಗಲ್ಯ ಸರ ಇಲ್ಲದಿರುವುದು ಗೊತ್ತಾಗಿತ್ತು. ಆಸ್ಪತ್ರೆಗೆ ಹೋಗಿ ವಿಚಾರಿಸಿದಾಗ, ತಮಗೆ ಏನು ಗೊತ್ತಿಲ್ಲವೆಂದು ಹೇಳಿದ್ದರು. ನಂತರ, ಮಹಿಳೆ ಠಾಣೆಗೆ ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT