ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಆಸ್ತಿ ವಿವರ ಮುಚ್ಚಿಟ್ಟಿದ್ದ ಮಾಯಣ್ಣ!

Last Updated 24 ನವೆಂಬರ್ 2021, 21:22 IST
ಅಕ್ಷರ ಗಾತ್ರ

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿರುವ ಬಿಬಿಎಂಪಿ ಕೇಂದ್ರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮಾಯಣ್ಣ ಹಲವು ವರ್ಷಗಳಿಂದ ತನ್ನ ಆಸ್ತಿ ಮತ್ತು ಬಾಧ್ಯತೆಯ ವಿವರಗಳನ್ನೇ ಸಲ್ಲಿಸಿರಲಿಲ್ಲ. ಸಕ್ಷಮ ಪ್ರಾಧಿಕಾರವೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂಬುದು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ತನಿಖೆಯಲ್ಲಿ ಬಯಲಿಗೆ ಬಂದಿದೆ.

ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿರುವ ಮಾಯಣ್ಣ, ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷರಾಗಿದ್ದರು. ಹಲವು ವರ್ಷಗಳಿಂದಲೂ ಸಂಘದ ಪದಾಧಿಕಾರಿಯಾಗಿದ್ದಾರೆ. ಅದೇ ಪ್ರಭಾವವನ್ನು ಬಳಸಿಕೊಂಡು ಆಸ್ತಿ ವಿವರ ಸಲ್ಲಿಸುವುದರಿಂದ ತಪ್ಪಿಸಿಕೊಳ್ಳುತ್ತಿದ್ದರು. ವರ್ಷಗಳ ಕಾಲದಿಂದಲೂ ಇದು ನಡೆದುಕೊಂಡು ಬಂದಿದೆ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.

ನಿಯಮಗಳ ಪ್ರಕಾರ, ಸರ್ಕಾರದ ಎಲ್ಲ ನೌಕರರು ಪ್ರತಿ ವರ್ಷವೂ ತಮ್ಮ ಆಸ್ತಿ ಮತ್ತು ಬಾಧ್ಯತೆಯ ವಿವರಗಳುಳ್ಳ ಪ್ರಮಾಣಪತ್ರವನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಆದರೆ, ಮಾಯಣ್ಣ ಹಲವು ವರ್ಷಗಳಿಂದ ಈ ನಿಯಮ ಪಾಲನೆ ಮಾಡಿರಲಿಲ್ಲ ಎಂಬ ಮಾಹಿತಿ ಲಭಿಸಿದೆ.

ಬೇನಾಮಿ ಆಸ್ತಿಗೆ ಶೋಧ: ಮಾಯಣ್ಣ ಮೂವರು ಬೇನಾಮಿಗಳ ಹೆಸರಿನಲ್ಲಿ ಆಸ್ತಿ ಹೊಂದಿರುವ ಶಂಕೆ ಇದೆ. ಈ ಕಾರಣಕ್ಕಾಗಿ ಮೂರು ಸ್ಥಳಗಳಲ್ಲಿ ಎಸಿಬಿ ತಂಡ ಬುಧವಾರ ಶೋಧ ನಡೆಸಿದೆ.

ಪಾಲಿಕೆಯ ಸಿಬ್ಬಂದಿಯೂ ಆಗಿರುವ ಉಮಾದೇವಿ ಎಂಬುವವರ ಮನೆಯಲ್ಲೂ ಎಸಿಬಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಮಾಯಣ್ಣ ಮತ್ತು ಉಮಾದೇವಿ ಬ್ಯಾಂಕ್‌ ಖಾತೆಗಳ ಮೂಲಕ ದೊಡ್ಡ ಪ್ರಮಾಣದ ವಹಿವಾಟು ನಡೆಸಿರುವ ಮಾಹಿತಿ ತನಿಖಾ ತಂಡಕ್ಕೆ ಲಭ್ಯವಾಗಿತ್ತು. ಅದೇ ಆಧಾರದಲ್ಲಿ ಶೋಧ ನಡೆದಿದೆ ಎಂದು ಗೊತ್ತಾಗಿದೆ.

‘ಅಕ್ರಮವೇ ಇಲ್ಲ’: ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಮಾಯಣ್ಣ, ‘ನಾನು ಯಾವುದೇ ಅಕ್ರಮ ಎಸಗಿಲ್ಲ. ತನಿಖಾ ತಂಡದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ಯಾವುದೇ ಅಕ್ರಮವೂ ಇಲ್ಲ. ಸಾಹಿತ್ಯ ಪರಿಷತ್‌ ಚುನಾವಣೆ ಕಾರಣಕ್ಕೆ ದಾಳಿ ನಡೆದಿರಬಹುದು’ ಎಂದರು.

ಮೂಲ ಪತ್ತೆಯ ಸವಾಲು: ಮಾರಪ್ಪನಪಾಳ್ಯ ಬಿಬಿಎಂಪಿ ಪ್ರೌಢಶಾಲೆ ‘ಡಿ’ ದರ್ಜೆ ನೌಕರ ಜಿ.ವಿ. ಗಿರಿ ಆಸ್ತಿ ಮತ್ತು ಆದಾಯದ ನಡುವೆ ಭಾರಿ ವ್ಯತ್ಯಾಸ ಕಂಡುಬಂದಿದೆ. ಇವರ ಬಳಿ ನಾಲ್ಕು ಕಾರುಗಳು ಪತ್ತೆಯಾಗಿವೆ. ಕಡಿಮೆ ಸಂಬಳದ ಹುದ್ದೆಯಲ್ಲಿದ್ದರೂ ಕೋಟಿಗಟ್ಟಲೆ ಆಸ್ತಿ ಸಂಪಾದಿಸಿದ್ದು ಯಾವ ‘ಮೂಲ’ದಿಂದ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಎಸಿಬಿ ಅಧಿಕಾರಿಗಳು ಶೋಧ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT