ಶನಿವಾರ, ಮೇ 8, 2021
27 °C

ಪ್ರತ್ಯೇಕ ಅಪಘಾತ; ವ್ಯವಸ್ಥಾಪಕ ಸೇರಿ ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಗುರುವಾರ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಸೆಕ್ಯುರಿಟಿ ಏಜೆನ್ಸಿಯೊಂದರ ವ್ಯವಸ್ಥಾಪಕ ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ಗೋಪಾಲಕೃಷ್ಣ (55) ಹಾಗೂ ಜಯಂತ್ (27) ಮೃತರು. ಎರಡೂ ಅಪಘಾತ ಸಂಬಂಧ ಶಿವಾಜಿನಗರ ಹಾಗೂ ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸೆಕ್ಯುರಿಟಿ ಏಜೆನ್ಸಿಯೊಂದರಲ್ಲಿ ವ್ಯವಸ್ಥಾಪಕರಾಗಿದ್ದ ಗೋಪಾಲಕೃಷ್ಣ, ದ್ವಿಚಕ್ರ ವಾಹನದಲ್ಲಿ ಗುರುವಾರ ರಾತ್ರಿ ಕಬ್ಬನ್ ರಸ್ತೆಯಲ್ಲಿ ಹೊರಟಿದ್ದರು. ಅದೇ ಸಂದರ್ಭದಲ್ಲೇ ದ್ವಿಚಕ್ರ ವಾಹನ ಹಾಗೂ ಆಟೊ ನಡುವೆ ಅಪಘಾತವಾಗಿದೆ. ರಸ್ತೆ ಮೇಲೆ ಬಿದ್ದಿದ್ದ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು’ ಎಂದು ಪೊಲೀಸರು ಹೇಳಿದರು.

‘ಗಾಯಾಳು ಗೋಪಾಲಕೃಷ್ಣ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಗೋಪಾಲಕೃಷ್ಣ ಅವರೇ ಆಟೊಗೆ ಗುದ್ದಿದ್ದರೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆಟೊ ಚಾಲಕ ಲೋಕೇಶ್ ದೂರು ನೀಡಿದ್ದು, ತನಿಖೆ ಮುಂದುವರಿದಿದೆ’ ಎಂದೂ ಪೊಲೀಸರು ತಿಳಿಸಿದರು.

ಟ್ರ್ಯಾಕರ್‌ ಡಿಕ್ಕಿ ಹೊಡೆದು ಸಾವು: ಇನ್ನೊಂದು ಪ್ರಕರಣದಲ್ಲಿ ಬೈಕ್‌ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಸವಾರ ಜಯಂತ್ ಮೃತಪಟ್ಟಿದ್ದಾರೆ.

‘ಹಿಂದೂಪುರದ ಜಯಂತ್, ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ಕಂಪನಿಯೊಂದರಲ್ಲಿ ಲೆಕ್ಕಾಧಿಕಾರಿ ಆಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಹಬ್ಬಕ್ಕೆಂದು ಊರಿಗೆ ಹೋಗಿದ್ದ ಅವರು, ಸ್ನೇಹಿತ ಹರೀಶ್ ಜೊತೆ ವಾಪಸು ಗುರುವಾರ ಬೆಳಿಗ್ಗೆ ಬೆಂಗಳೂರಿಗೆ ಬರುತ್ತಿದ್ದಾಗಲೇ ಈ ಅಪಘಾತ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು.

‘ಯಲಹಂಕ ಜಕ್ಕೂರು ಮೇಲ್ಸೇತುವೆಯಲ್ಲಿ ಜಯಂತ್ ಬೈಕ್‌ಗೆ ಟ್ರಾಕ್ಟರ್‌ ಡಿಕ್ಕಿ ಹೊಡೆದಿತ್ತು. ರಸ್ತೆಯಲ್ಲೇ ಉರುಳಿಬಿದ್ದು ತೀವ್ರವಾಗಿ ಗಾಯಗೊಂಡ ಜಯಂತ್ ಹಾಗೂ ಹೇಮಂತ್ ಅವರನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಜಯಂತ್ ಮೃತಪಟ್ಟಿದ್ದಾರೆ. ಹರೀಶ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ’ ಎಂದೂ ತಿಳಿಸಿದರು.

‘ಅಪಘಾತದ ನಂತರ ಟ್ರ್ಯಾಕ್ಟರ್ ಸಮೇತ ಚಾಲಕ ಪರಾರಿಯಾಗಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.