ಬೆಂಗಳೂರು: ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳದ ಮಾರುತಿನಗರ ಮುಖ್ಯರಸ್ತೆಯಲ್ಲಿ ಮಂಗಳವಾರ ರಾತ್ರಿ ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ಉಪನ್ಯಾಸಕ ಹಾಗೂ ಶಿಕ್ಷಕಿ ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.
ಕೆಂಗೇರಿ ಸರ್ಕಾರಿ ಕಾಲೇಜಿನ ಉಪನ್ಯಾಸಕ, ರಾಮಸಮುದ್ರದ ನಿವಾಸಿ ನರಸಪ್ಪ (51) ಹಾಗೂ ಕಿಡ್ಸ್ ಕೇರ್‌ನ ಶಿಕ್ಷಕಿ ಉಲ್ಲಾಳದ ರಕ್ಷಾ (21) ಮೃತಪಟ್ಟವರು.
ಗಾಯಗೊಂಡಿರುವ ಚಂದನ್ (23) ಅವರು ವಿಜಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
‘ರಾತ್ರಿ 11.40ರ ಸುಮಾರಿಗೆ ಚಂದನ್ ಅವರು ಪಲ್ಸರ್ ಬೈಕ್‌ನಲ್ಲಿ ರಕ್ಷಾ ಅವರೊಂದಿಗೆ ತೆರಳುತ್ತಿದ್ದರು. ಮಾರುತಿನಗರ ಕಡೆಯಿಂದ ಕೆಎಲ್‌ಇ ಕಾಲೇಜು ಕಡೆಗೆ ವೇಗವಾಗಿ ತೆರಳುತ್ತಿದ್ದ ವೇಳೆ ಅದೇ ಮಾರ್ಗದಲ್ಲಿ ಎದುರಿನಿಂದ ಬರುತ್ತಿದ್ದ ನರಸಪ್ಪ ಅವರ ಬೈಕ್‌ಗೆ ಡಿಕ್ಕಿಯಾಗಿದೆ. ನರಸಪ್ಪ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಚಂದನ್ ಹಾಗೂ ರಕ್ಷಾ ಅವರ ಬೈಕ್‌ನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದರು. ರಕ್ಷಾ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ರಕ್ಷಾ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
ಹೆಲ್ಮೆಟ್ ಧರಿಸದೇ ಪ್ರಯಾಣ:
‘ಚಂದನ್ ಹಾಗೂ ರಕ್ಷಾ ಅವರ ಹೆಲ್ಮೆಟ್ ಧರಿಸಿರಲಿಲ್ಲ. ಅಲ್ಲದೇ ಮೋಜು–ಮಸ್ತಿಗಾಗಿ ಅತ್ಯಂತ ವೇಗವಾಗಿ ಬೈಕ್‌ನಲ್ಲಿ ತೆರಳುತ್ತಿದ್ದರು. ಡಿಕ್ಕಿಯ ರಭಸಕ್ಕೆ ಬೈಕ್ 50 ಮೀಟರ್‌ನಷ್ಟು ದೂರಕ್ಕೆ ಉಜ್ಜಿಕೊಂಡು ಹೋಗಿತ್ತು. ಅಜಾಗರೂಕ ಚಾಲನೆ ಆರೋಪದ ಅಡಿ ಚಂದನ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.