ಮಂಗಳವಾರ, ಡಿಸೆಂಬರ್ 1, 2020
18 °C

ಆಸ್ತಿ ವಿವರ ಸಲ್ಲಿಸದ ಮಾಜಿ ಸದಸ್ಯರ ವಿರುದ್ಧ ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ’ಲೋಕಾಯುಕ್ತರ ಆದೇಶಕ್ಕೂ ಬೆಲೆ ಕೊಡದ ‍ಪಾಲಿಕೆಯ 124 ಮಾಜಿ ಸದಸ್ಯರು ತಮ್ಮ ಆಸ್ತಿ ವಿವರ ಸಲ್ಲಿಸದೆ ದ್ರೋಹ ಎಸಗಿದ್ದು, ಅವರಿಗೆ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು. ಅವರ ಮೇಲೆ ಕ್ರಮ ಕೈಗೊಳ್ಳಬೇಕು‘ ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ರಾಜ್ಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಅವರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ಬಳಿಕ ಮಾತನಾಡಿದ ಅವರು, ’2019ರ ಆಗಸ್ಟ್‌ 28ರಂದು ಆದೇಶ ಹೊರಡಿಸಿದ್ದ ಲೋಕಾಯುಕ್ತರು, 198 ವಾರ್ಡ್‌ಗಳ ಸದಸ್ಯರು ತಮ್ಮ ಆಸ್ತಿ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಹೇಳಿದ್ದರು. ಈ ಆದೇಶ ನೀಡಿ ಒಂದು ವರ್ಷವಾದರೂ, 124 ಸದಸ್ಯರು ಇನ್ನೂ ತಮ್ಮ ವಿವರಗಳನ್ನು ಸಲ್ಲಿಸಿಲ್ಲ. ಇಂತಹ ಸದಸ್ಯರ ಹೆಚ್ಚುವರಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು‘ ಎಂದು ಹೇಳಿದರು.

ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಮಾತನಾಡಿ, ’ಜನಪ್ರತಿನಿಧಿಗಳು ಪ್ರತಿವರ್ಷ ಜೂನ್‌ 30ರ ಒಳಗಾಗಿ ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಬೇಕೆಂಬ ನಿಯಮ 2009ರಲ್ಲೇ ರೂಪಿತವಾಗಿತ್ತು. ಒಂದು ದಶಕದಷ್ಟು ಸಮಯ ಕಳೆದರೂ, ಈ ನಿಯಮವನ್ನು ಸರಿಯಾಗಿ ಜಾರಿಗೆ ತಂದಿಲ್ಲ. ಆಸ್ತಿ ವಿವರ ಸಲ್ಲಿಸದ ಮಾಜಿ ಸದಸ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು‘ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.