ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಮಿಕ ಹೋರಾಟದ ಮ್ಯೂಸಿಯಂ ರಚನೆಗೆ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ

‘ಕಾಮ್ರೇಡ್‌ ಸೂರಿ 100’ ಕಾರ್ಯಕ್ರಮದಲ್ಲಿ ಸಿ.ಎಂ
Published : 24 ಆಗಸ್ಟ್ 2024, 15:38 IST
Last Updated : 24 ಆಗಸ್ಟ್ 2024, 15:38 IST
ಫಾಲೋ ಮಾಡಿ
Comments

ಬೆಂಗಳೂರು: ಕಾರ್ಮಿಕ ಚಳವಳಿಯ ಹೋರಾಟವನ್ನು ನೆನಪಿಸುವ ಮ್ಯೂಸಿಯಂ ರಚನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಶನಿವಾರ ಭರವಸೆ ನೀಡಿದರು.

ಕಾಮ್ರೇಡ್ ಸೂರ್ಯನಾರಾಯಣ ರಾವ್ ಅವರ ಜನ್ಮ ಶತಮಾನೋತ್ಸವ– ‘ಕಾಮ್ರೇಡ್‌ ಸೂರಿ 100’ ಪ್ರಯುಕ್ತ ನಡೆದ ‘ಕರ್ನಾಟಕದ ಅಭಿವೃದ್ಧಿಯಲ್ಲಿ ಕಾರ್ಮಿಕ‌ ಚಳವಳಿಯ ಪಾತ್ರ’ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.‌

ದುಡಿಯುವ ವರ್ಗದ ಸಾಧನೆಗಳು ಬಿಂಬಿಸುವ ಮ್ಯೂಸಿಯಂ ಬೇಕು ಎಂಬ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು’ ಎಂದರು.

‘ಕಾಮ್ರೇಡ್ ಸೂರ್ಯನಾರಾಯಣ ಮತ್ತು ನಾನು ಒಟ್ಟಿಗೆ ವಿಧಾನಸಭೆಗೆ ಪ್ರವೇಶಿಸಿದವರು. ಅವರು ಪೂರ್ಣ ತಯಾರಿಯೊಂದಿಗೆ ಸದನಕ್ಕೆ ಬಂದು ಕಾರ್ಮಿಕರ ಕಲ್ಯಾಣ ಮಾತ್ರವಲ್ಲ; ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಒಳನೋಟದಿಂದ ಮಾತನಾಡುತ್ತಿದ್ದರು. ಜನರ ಹಿತಕ್ಕಾಗಿ ಬದ್ಧತೆ ಮತ್ತು ಕಾಳಜಿಯಿಂದ ಸದನದ ಒಳಗೂ ಹೊರಗೂ ಹೋರಾಟ ಮಾಡುತ್ತಿದ್ದರು’ ಎಂದು ನೆನಪು ಮಾಡಿಕೊಂಡರು.

‘ಸೂರಿ ಅವರು ಸುಳ್ಳು ಹೇಳಿಕೆ ನೀಡಿ ಹೋರಾಟ ಮಾಡಿದವರಲ್ಲ. ಆಗಿನ ಬಹುತೇಕ ರಾಜಕಾರಣಿಗಳು ವಿಷಯಾಧಾರಿತವಾಗಿ, ಸತ್ಯ ವಿಚಾರ ತಿಳಿಸಿ ಎಚ್ಚರಿಸುತ್ತಿದ್ದರು. ಆದರೆ ಈಗ ಸುಳ್ಳುಗಳನ್ನೇ ನೂರು ಬಾರಿ ಹೇಳಿ ಸತ್ಯ ಎಂದು ಬಿಂಬಿಸುವ ರಾಜಕಾರಣಿಗಳೇ ಹೆಚ್ಚಾಗಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ವಿ.ಜೆ.ಕೆ.ನಾಯರ್‌, ‘ಕಾರ್ಮಿಕರ ಒಪ್ಪಿಗೆ ಪಡೆಯದೇ ಮುಖಂಡರು ಒಪ್ಪಂದ ಮಾಡಿಕೊಳ್ಳುತ್ತಿದ್ದರು. ಕಾಮ್ರೇಡ್‌ ಸೂರಿ ಅವರು ಈ ವ್ಯವಸ್ಥೆಯನ್ನು ತಪ್ಪಿಸಿದರು. ಕಾರ್ಮಿಕರ ಒಪ್ಪಿಗೆ ಪಡೆದೇ ಮುಂದುವರಿಯುವ ಕ್ರಮವನ್ನು ರೂಢಿಗೆ ತಂದರು’ ಎಂದು ಸ್ಮರಿಸಿದರು.

ದೇಶದ, ಸಮಾಜದ ಅಭಿವೃದ್ಧಿ ಎಂದರೆ ಬಂಡವಾಳಶಾಹಿಗಳ, ಶ್ರೀಮಂತರ ಅಭಿವೃದ್ಧಿಯಲ್ಲ. ಬಡವರ, ಕಾರ್ಮಿಕರ ಕೈಗೆ ಹಣ ಬರಬೇಕು. ಅಗತ್ಯಕ್ಕೆ ತಕ್ಕಂತೆ ಖರ್ಚು ಮಾಡಬೇಕು. ಆಗ ಅಭಿವೃದ್ಧಿ ಸಾಧ್ಯ ಎಂದು ವ್ಯಾಖ್ಯಾನಿಸಿದರು.

ನಿವೃತ್ತ ಪ್ರಾಧ್ಯಾಪಕಿ ಜಾನಕಿ ನಾಯರ್‌ ಮಾತನಾಡಿ, ‘ದುಡಿಮೆ ಅವಧಿ ಕಡಿಮೆ ಮಾಡಿ ಎಂದು ನೂರು ವರ್ಷ ಹೋರಾಟ ಮಾಡಿ 8 ಗಂಟೆಯ ದುಡಿಮೆ ಜಾರಿಗೆ ಬರುವಂತೆ ಕಾರ್ಮಿಕರು ಮಾಡಿದ್ದರು. ಈಗ ಅದಕ್ಕೆ ವಿರುದ್ಧವಾಗಿ ನವ ಬಂಡವಾಳಶಾಹಿಗಳು 12 ಗಂಟೆ– 14 ಗಂಟೆಗೆ ಹೆಚ್ಚಿಸಲು ಮುಂದಾಗಿದ್ದಾರೆ. ಆ್ಯಪ್‌ ಆಧಾರಿತ ಸ್ವಿಗ್ಗಿ, ಜೊಮೆಟೊ, ಓಲಾಗಳಲ್ಲಿ ದುಡಿಮೆ ಅವಧಿ ಗಣನೆಯೇ ಇಲ್ಲ’ ಎಂದು ವಿಷಾದಿಸಿದರು. 

ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್‌ ಸೇನ್‌ ವಿಚಾರ ಸಂಕಿರಣ ಉದ್ಘಾಟಿಸಿದರು. ಸಿಪಿಎಂ ಕಾರ್ಯದರ್ಶಿ ಯು. ಬಸವರಾಜ್‌, ಸೂರಿಯವರ ಪುತ್ರಿ ರೇಖಾ, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT