ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಂಕೇಶ್ ಎಲ್ಲ ಕಾಲಕ್ಕೂ ಪ್ರಸ್ತುತ: ನಟ ಪ್ರಕಾಶ್ ರೈ

‘ಪಿ. ಲಂಕೇಶ್ ಸಮಗ್ರ ಕಥೆಗಳು’ ಕೃತಿ ಬಿಡುಗಡೆ
Published : 8 ಮಾರ್ಚ್ 2023, 20:44 IST
ಫಾಲೋ ಮಾಡಿ
Comments

ಬೆಂಗಳೂರು: ‘ನನ್ನಲ್ಲಿ ಸಿಟ್ಟು, ಆತಂಕ, ಕಾಳಜಿ ಹುಟ್ಟಿದ್ದೇ ಲಂಕೇಶ್ ಅವರಿಂದ. ಇವತ್ತಿನ ಸಮಾಜದಲ್ಲಿ ಅವರ ಕೊರತೆ ಎದ್ದು ಕಾಣುತ್ತಿದೆ’ ಎಂದು ಚಲನಚಿತ್ರ ನಟ ಪ್ರಕಾಶ್ ರೈ ಅವರು ಬೇಸರ ವ್ಯಕ್ತಪಡಿಸಿದರು.

ಇಂದಿರಾ ಲಂಕೇಶ್ ಪ್ರಕಾಶನ ನಗರದಲ್ಲಿ ಬುಧವಾರ ಆಯೋಜಿಸಿದ ‘ಲಂಕೇಶ್ 88’ ಕಾರ್ಯಕ್ರಮದಲ್ಲಿ ‘ಪಿ. ಲಂಕೇಶ್ ಸಮಗ್ರ ಕಥೆಗಳು’ ಕೃತಿಯನ್ನು ಬಿಡುಗಡೆ ಮಾಡಿ, ಮಾತನಾಡಿದರು. ‘ಪ್ರಸ್ತುತತೆ ಬಗ್ಗೆ ಲಂಕೇಶ್ ಮಾತನಾಡುತ್ತಿದ್ದರು. ಅವರಷ್ಟು ಪ್ರಾಮಾಣಿಕವಾಗಿ, ಧೈರ್ಯವಾಗಿ ನಾವು ಇರಲು ಸಾಧ್ಯವಾ ಎನ್ನುವುದು ನನಗೆ ಗೊತ್ತಿಲ್ಲ. ಅವರು ಹರಿಯುವ ನದಿಯಂತೆ ಇದ್ದು, ಎಲ್ಲ ಕಾಲಕ್ಕೂ ಪ್ರಸ್ತುತ ಆಗುತ್ತಾರೆ’ ಎಂದು ತಿಳಿಸಿದರು.

‘ಅವರ ಕೃತಿಗಳಿಗಿಂತ ಅವರೊಂದಿಗಿನ ಒಡನಾಟದಿಂದ ಹೆಚ್ಚು ಕಲಿತೆ. ಅವರಿಂದಾಗಿ ಸಾಹಿತಿಗಳ ಭೇಟಿ ಸಾಧ್ಯವಾಯಿತು. ಅವರ ಪತ್ರಿಕಾ ಕಚೇರಿ ಇನ್ನೊಂದು ಮನೆಯಾಗಿತ್ತು. ವಿನಯದ ಬಗ್ಗೆ ತಿಳಿಸಲು ನಡುರಾತ್ರಿಯಲ್ಲಿ ನನ್ನನ್ನು ಕಾರಿನಿಂದ ಇಳಿಸಿ, ಮನೆಗೆ ತೆರಳಿದ್ದರು. ಎರಡು ಕಿ.ಮೀ. ನಡೆದು ಮನೆಗೆ ತೆರಳಿದ್ದೆ. ಮರುದಿನ ಈ ಬಗ್ಗೆ ಪ್ರಶ್ನಿಸಿದಾಗ ನೀನು ವಿನಯ ಕಲಿಯಬೇಕು ಎಂದಿದ್ದರು’ ಎಂದು ಹಳೆಯ ಘಟನೆಯನ್ನು ಸ್ಮರಿಸಿಕೊಂಡರು.

ವಿಮರ್ಶಕ ರಾಜೇಂದ್ರ ಚೆನ್ನಿ, ‘ನಾಡಿನಲ್ಲಿ ಕುವೆಂಪು ಅವರನ್ನು ಬಿಟ್ಟರೆ ಆಳವಾಗಿ ಪ್ರಭಾವ ಬೀರಿದವರು ಲಂಕೇಶ್. ವಿಮರ್ಶಾ ಕ್ಷೇತ್ರ ಅವರ ಸಣ್ಣ ಕಥೆಗಳನ್ನು ಸೂಕ್ಷ್ಮವಾಗಿ, ಸಮಗ್ರವಾಗಿ ಅಧ್ಯಯನ ಮಾಡಲಿಲ್ಲ. ಅವರು ಇವತ್ತಿನ ಸ್ಥಿತಿಗಳ ಬಗ್ಗೆ ಅನೇಕ ರೀತಿಯಲ್ಲಿ ಮುನ್ಸೂಚನೆಯಾಗಿ, ತಲ್ಲಣಗೊಳಿಸುವ ರೀತಿಯಲ್ಲಿ ಬರೆದಿದ್ದಾರೆ. ಲಂಕೇಶ್ ಅವರ ಎಲ್ಲ ಕಥೆಗಳಲ್ಲಿ ಮನುಷ್ಯತ್ವ ಎಲ್ಲಿ ಸತ್ತಿದೆ ಎಂಬ ಪ್ರಶ್ನೆಗಳು ಇರುತ್ತಿದ್ದವು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT