ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಟಿಕೆಟ್: ಯಶವಂತಪುರ ಕ್ಷೇತ್ರಕ್ಕೆ ಭಾವನಾ ‘ಕೈ’ ಆಕಾಂಕ್ಷಿ!

ಅರ್ಜಿ ಸಲ್ಲಿಕೆ ಅವಧಿ ನ. 21ರವರೆಗೆ ವಿಸ್ತರಣೆ
Last Updated 15 ನವೆಂಬರ್ 2022, 20:54 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿದ್ದ ಗಡುವನ್ನು ಇದೇ 21ರವರೆಗೆ ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಲು ಮಂಗಳವಾರ (ನ. 15) ಕೊನೆ ದಿನವಾಗಿತ್ತು.

‘ಈ ಅವಧಿ ವಿಸ್ತರಣೆ ಮಾಡುವಂತೆ ರಾಜ್ಯದ ಮೂಲೆ, ಮೂಲೆಗಳಿಂದ ಪಕ್ಷದವರು ಹಾಗೂ ಅನ್ಯ ಪಕ್ಷಗಳಿಂದ ಕಾಂಗ್ರೆಸ್‌ಗೆ ಬರಲು ಇಚ್ಚಿಸಿರುವ ಟಿಕೆಟ್ ಆಕಾಂಕ್ಷಿಗಳಿಂದ ವಿಪರೀತ ಒತ್ತಡವಿದೆ. ಹೀಗಾಗಿ ಈ ಬದಲಾವಣೆ ಮಾಡಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ನ. 5ರಿಂದ ಅರ್ಜಿ ಸ್ವೀಕಾರ ಆರಂಭಿಸಲಾಗಿತ್ತು. 10 ದಿನಗಳಲ್ಲಿ 1,100ಕ್ಕೂ ಹೆಚ್ಚು ಆಕಾಂಕ್ಷಿಗಳು ₹ 5 ಸಾವಿರ ಶುಲ್ಕ ಪಾವತಿಸಿ ಅರ್ಜಿಗಳನ್ನು ಪಡೆದುಕೊಂಡಿದ್ದು, 650ಕ್ಕೂ ಹೆಚ್ಚು ಮಂದಿ ಡಿಡಿ ಸಹಿತ ಅರ್ಜಿ ಸಲ್ಲಿಸಿದ್ದಾರೆ.

‘ಎಷ್ಟೇ ಪ್ರಭಾವಿ ನಾಯಕರಾಗಿದ್ದರೂ ಕಾಂಗ್ರೆಸ್‌ನಿಂದ ‘ಬಿ’ ಫಾರಂ ಪಡೆಯಲು ಅರ್ಜಿ ಸಲ್ಲಿಕೆ ಕಡ್ಡಾಯ. ನನ್ನನ್ನೂ ಸೇರಿದಂತೆ ಎಲ್ಲರೂ ಅರ್ಜಿ ಸಲ್ಲಿಸಬೇಕು’ ಎಂದು ಡಿ.ಕೆ. ಶಿವಕುಮಾರ್‌ ಸ್ಪಷ್ಟಪಡಿಸಿದ್ದರು. ಆದರೆ, ಈವರೆಗೆ 40 ಶಾಸಕರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. 20ಕ್ಕೂ ಹೆಚ್ಚು ಶಾಸಕರು ಇನ್ನೂ ಅರ್ಜಿ ಸಲ್ಲಿಸಿಲ್ಲ.

ಶಿವಾಜಿನಗರ ಕ್ಷೇತ್ರದಿಂದ ಕಣಕ್ಕಿಳಿಯಲು ಬಯಸಿ ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌, ಯಶವಂತಪುರ ಕ್ಷೇತ್ರದಿಂದ ನಟಿ ಭಾವನಾ ಅರ್ಜಿ ಸಲ್ಲಿಸಿದ್ದಾರೆ. ‘ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಅರ್ಜಿ ಹಾಕಿದ್ದೇನೆ. ಕಾಂಗ್ರೆಸ್ ವರಿಷ್ಠರು ನನಗೆ ಟಿಕೆಟ್ ಕೊಡಬಹುದೆಂಬ ವಿಶ್ವಾಸವಿದೆ’ ಎಂದು ಭಾವನಾ ಪ್ರತಿಕ್ರಿಯಿಸಿದ್ದಾರೆ.

‌ಶೃಂಗೇರಿ, ತೀರ್ಥಹಳ್ಳಿ, ಚಿಕ್ಕಮಗಳೂರು, ಪಾಂಡವಪುರ (ಮೇಲುಕೋಟೆ) ಹಾಗೂ ದೇವರ ಹಿಪ್ಪರಗಿ ಈ ಐದು ಕ್ಷೇತ್ರಗಳ ಪೈಕಿ ಯಾವುದಾದರೂ ಒಂದರಿಂದ ಟಿಕೆಟ್‌ ನಿರೀಕ್ಷಿಸಿರುವ ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ, ಈ ಎಲ್ಲ ಕ್ಷೇತ್ರಗಳಿಗೆ ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT