ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಆಯುಕ್ತರಿಗೆ ಹತ್ತು ಪ್ರಶ್ನೆಗಳು

ಜಾಹೀರಾತು ಮಾಫಿಯಾಕ್ಕೆ ಹಿಂಬಾಗಿಲಿನಿಂದ ಅವಕಾಶ: ಆರೋಪ
Last Updated 1 ಜನವರಿ 2020, 9:52 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾಹೀರಾತು ಮಾಫಿಯಾಕ್ಕೆ ಹಿಂಬಾಗಿಲಿನಿಂದ ಮತ್ತೆ ಅವಕಾಶ ಕಲ್ಪಿಸಲು ಸಿದ್ಧತೆ ನಡೆದಿದೆ’ ಎಂದು ಜಾಹೀರಾತು ಹಾವಳಿ ಬಗ್ಗೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಆರೋಪಿಸಿದ್ದಾರೆ.

ನಗರದಲ್ಲಿ ಮತ್ತೆ ಹೋರ್ಡಿಂಗ್‌ ಜಾಹೀರಾತು ಅಳವಡಿಕೆ ಅವಕಾಶ ಕಲ್ಪಿಸುವ ಕುರಿತು ಚರ್ಚೆಗಳು ನಡೆದಿರುವ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಅವರಿಗೆ ಪತ್ರ ಬರೆದಿರುವ ಅವರು, 10 ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರಿಸುವ ಜೊತೆಗೆ ಜಾಹೀರಾತು ಮಾಫಿಯಾದ ಕಡಿವಾಣಕ್ಕೆ ತಾವೇ ಮುಂದೆ ನಿಂತು ಕ್ರಮ ಕೈಗೊಳ್ಳಬೇಕೆಂದು ಎಂದು ಅವರು ಆಯುಕ್ತರನ್ನು ಒತ್ತಾಯಿಸಿದ್ದಾರೆ.

ಪ್ರಶ್ನೆಗಳು ಇಂತಿವೆ:

* ತಾವು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿದ್ದಾಗಲೂ ಬಿಬಿಎಂಪಿ ಜಾಹೀರಾತು ಬೈಲಾಕ್ಕೆ ತದ್ವಿರುದ್ಧವಾಗಿ ಇಲಾಖೆ ವತಿಯಿಂದ ಇನ್ನೊಂದು ಜಾಹೀರಾತು ಬೈಲಾವನ್ನು ಸಿದ್ಧಪಡಿಸಿದ್ದಿರಿ. ಅದರನ್ವಯ ವಿಧಾನ ಸೌಧದ ಆಸುಪಾಸು ಸೇರಿದಂತೆ ಬಿಬಿಎಂಪಿಯ ಎಲ್ಲ ಪ್ರದೇಶಗಳಲ್ಲೂ ಜಾಹೀರಾತಿಗೆ ಅವಕಾಶ ನೀಡಲಾಗಿತ್ತು ಏಕೆ?

* ಪಾಲಿಕೆಗೆ ವರ್ಷವಾರು ಬಂದಿರುವ ಜಾಹೀರಾತು ತೆರಿಗೆ ಹಣ ಮತ್ತು ಅನಧಿಕೃತ ಜಾಹೀರಾತು ತೆರವುಗೊಳಿಸಲು ಖರ್ಚು ಮಾಡಿರುವ ಹಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೀರಾ?

* ಈ ಹಿಂದೆ ಕೆ.ಮಥಾಯಿ ಅವರುಪಾಲಿಕೆಯ ಜಾಹೀರಾತು ವಿಭಾಗದ ಸಹಾಯಕ ಆಯುಕ್ತರಾಗಿದ್ದಾಗ ಜಾಹೀರಾತು ಶುಲ್ಕದಿಂದ ₹ 2 ಸಾವಿರ ಕೋಟಿ ನಷ್ಟವಾಗಿದೆ ಎಂದು ವರದಿಯನ್ನು ಓದಿದ್ದೀರಾ? ಅದರ ವಸೂಲಿಗೆ ತಾವು ಕೈಗೊಂಡ ಕ್ರಮಗಳೇನು?

* ಈಗಾಗಲೇ ಜಾಹೀರಾತಿನಿಂದ ನೂರಾರು ಕೋಟಿ ರೂಪಾಯಿ ತೆರಿಗೆ ಬಿಬಿಎಂಪಿಗೆ ಬರಬೇಕಾಗಿದ್ದು, ಇದರ ವಸೂಲಿ ಬಗ್ಗೆ ತಾವು ಕೈಗೊಂಡ ಕ್ರಮಗಳೇನು?

* ಜಾಹೀರಾತು ಬೈಲಾ 2018ರ ಪ್ರಕಾರ ಜಾಹೀರಾತು ಚೌಕಟ್ಟುಗಳನ್ನು ತೆರವುಗೊಳಿಸಲುಹೈಕೋರ್ಟ್‌ ನಿರ್ದೇಶನ ನೀಡಿದ್ದರೂ, ಇನ್ನೂ ಹಿಂದೇಟು ಹಾಕುತ್ತಿರುವ ಗುಟ್ಟೇನು?

* ಈ ಹಿಂದೆ ಜಾಹೀರಾತು ಅಳವಡಿಸುವ ಸಂದರ್ಭದಲ್ಲಿ ಹೈಕೋರ್ಟ್‌ನ ರಿಟ್‌ ಅರ್ಜಿ ಸಂಬಂಧ ತಪ್ಪು ಸಂಖ್ಯೆ ನಮೂದಿಸುವುದು ಹಾಗೂ ಪರವಾನಗಿ ಪಡೆದ ಅಳತೆಗಿಂತ ಹೆಚ್ಚು ಜಾಹೀರಾತು ಅಳವಡಿಸಿದ್ದು ಹಾಗೂ ಜಾಹೀರಾತು ಬೈಲಾಕ್ಕೆ ವಿರುದ್ಧವಾಗಿ ಜಾಹೀರಾತು ಅಳವಡಿಸಿದ್ದು ತಮ್ಮ ಗಮನಕ್ಕೆ ಬಂದಿಲ್ಲವೇ ?

* ಈಗಾಗಲೇ ಪಾಲಿಕೆ ಹೊಸ ಜಾಹೀರಾತು ಬೈಲಾ -2018 ಜಾರಿಗೆ ತಂದಿದ್ದರೂ ತಾವು ಉದ್ದೇಶಕ್ಕೋಸ್ಕರವಾಗಿ ಹೊಸ ನಿಯಮಗಳನ್ನು ಅಳವಡಿಸಲು ಸಿದ್ಧತೆ ಮಾಡಿಕೊಂಡಿರುವುದು. ಅಂದರೆ, ಬಿಬಿಎಂಪಿ ಕೌನ್ಸಿಲ್‌ಗೂ ವಿರುದ್ಧವಾದ ತೀರ್ಮಾನಕ್ಕೆ ಸಿದ್ಧತೆ ಮಾಡಿಕೊಂಡಿರುವುದು ಎಷ್ಟರ ಮಟ್ಟಿಗೆ ಸಮಂಜಸ?

* ಜಾಹೀರಾತು ಹಗರಣದ ಬಗ್ಗೆ ಲೋಕಾಯುಕ ಸಂಸ್ಥೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ವಿಚಾರಣಾ ಹಂತದಲ್ಲಿದೆ. ಅಲ್ಲದೇ, ರಾಜ್ಯ ಸರ್ಕಾರವೂ ಕೂಡ ಇದರ ಬಗ್ಗೆ ಸಿ.ಐ.ಡಿ. ತನಿಖೆಗೆ ಆದೇಶ ನೀಡಿದೆ. ಇದು ಗಮನಕ್ಕೆ ಬಂದಿಲ್ಲವೇ?

* ಈ ಮೊದಲು ಎಲ್ಲೆಂದರಲ್ಲಿ ಫ್ಲೆಕ್ಸ್‌, ಬ್ಯಾನರ್‌ ಅಳವಡಿಸಿದ್ದರಿಂದ ನಗರದ ಸೌಂದರ್ಯ ಹಾಳು ಮಾಡಿರುವುದು ತಮ್ಮ ಗಮನಕ್ಕೆ ಬಂದಿಲ್ಲವೆ? ಇದಕ್ಕೆಲ್ಲಾ ಬೆಂಗಳೂರಿನ ನಾಗರಿಕರು, ರಾಜ್ಯ ಸರ್ಕಾರ ಮತ್ತು ಮೇಯರ್‌ ಮತ್ತು ಬಹುತೇಕ ಸದಸ್ಯರು ಇದರ ವಿರುದ್ಧ ಇದ್ದರೂ ಜಾಹೀರಾತು ವಾಪಾಸು ತರುವ ಪ್ರಯತ್ನೇವೇಕೆ?

* ಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಕಸ ನಿರ್ವಹಣೆ, ರಸ್ತೆ ಗುಂಡಿಗಳ ಸಮಸ್ಯೆ, ಕೆರೆಗಳ ಸಮಸ್ಯೆ, ನಗರ ಸಾರ್ವಜನಿಕರ ಮೂಲಸೌಕರ್ಯ ಒದಗಿಸುವ ಕಾರ್ಯಗಳಿಗೆ ಆದ್ಯತೆ ನೀಡುವ ಬದಲು ಕೇವಲ ಜಾಹೀರಾತು ನಿಯಮದಬಗ್ಗೆ ಕಾಳಜಿ ವಹಿಸುತ್ತಿರುವ ಗುಟ್ಟೇನು?

ಸಾಯಿದತ್ತ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿದ್ದ ಹೈಕೋರ್ಟ್‌ ನಗರದಲ್ಲಿ ಹೋರ್ಡಿಂಗ್‌ಗಳನ್ನು ಸಂಪೂರ್ಣ ತೆರವುಗೊಳಿಸುವಂತೆ ಆದೇಶ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT