ಶನಿವಾರ, ಮಾರ್ಚ್ 25, 2023
26 °C
ಶುಲ್ಕದ ಮೊದಲ ಕಂತು ವೇತನಕ್ಕೆ ಬಳಸಿ: ಸುರೇಶ್‌ ಕುಮಾರ್‌

ಖಾಸಗಿ ಶಾಲೆಗಳಲ್ಲಿ ದಾಖಲಾತಿ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸಲು ಮತ್ತು ಪೋಷಕರಿಂದ ಶುಲ್ಕ
ಪಡೆಯಲು ಅನುಮತಿ ನೀಡಿರುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

ಕೊರೊನಾ ಮತ್ತು ಲಾಕ್‌ಡೌನ್ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು 15 ಅಂಶಗಳ ಸುದೀರ್ಘ ಪತ್ರ ಬರೆದಿರುವ ಅವರು, ಶಿಕ್ಷಕ–ಶಿಕ್ಷಣ ಪರವಾದ ಸರ್ಕಾರದ ನಿಲುವುಗಳನ್ನು ವಿವರಿಸಿದ್ದಾರೆ.

‘ಖಾಸಗಿ ಶಾಲೆಗಳು ದಾಖಲಾತಿ ಪ್ರಾರಂಭಿಸಲು ಶನಿವಾರ ಅನುಮತಿ ನೀಡಲಾಗಿದೆ. ಪೋಷಕರಿಂದ ಪ್ರಸಕ್ತ ಸಾಲಿನ ಮೊದಲ ಕಂತಿನ ಅಧಿಕೃತ ಶುಲ್ಕವನ್ನು ಶಾಲೆಗಳು ವಸೂಲಿ ಮಾಡಬೇಕು. ಈ ರೀತಿ ವಸೂಲಾಗುವ ಶುಲ್ಕವನ್ನು ಮೊದಲು ಶಿಕ್ಷಕರ ವೇತನ ಪಾವತಿಸಲು ಬಳಸಬೇಕು’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

‘ಪೋಷಕರ ಮೇಲಿನ ಖಾಸಗಿ ಶಾಲೆಗಳ ನಿರಂತರ ಶೋಷಣೆಯನ್ನು ಗಮನಿಸಿ, ಮುಂದಿನ ಆದೇಶದವರೆಗೆ ಪೋಷಕರಿಂದ ಯಾವುದೇ ಶುಲ್ಕ ಪಡೆದುಕೊಳ್ಳಬಾರದು ಎಂದು ಖಾಸಗಿ ಶಾಲೆಗಳಿಗೆ ಮಾರ್ಚ್‌ 30ರಂದು ಆದೇಶ ನೀಡಲಾಗಿತ್ತು. ಆದರೆ, ಖಾಸಗಿ ಶಾಲಾ ಶಿಕ್ಷಕರ ಬವಣೆ ನೀಗಿಸುವ ಉದ್ದೇಶದಿಂದ ಶುಲ್ಕ ವಸೂಲಿಗೆ ಈಗ ಅನುಮತಿ ನೀಡಲಾಗಿದೆ’ ಎಂದೂ ಅವರು ಹೇಳಿದ್ದಾರೆ.

‘ಖಾಸಗಿ ಶಾಲೆಗಳು ನಿಗದಿತ ಶುಲ್ಕ ಪಡೆಯಬೇಕು ಮತ್ತು ಯಾವುದೇ ಕಾರಣಕ್ಕೂ ಕಳೆದ ಸಾಲಿಗಿಂತ ಹೆಚ್ಚು ಶುಲ್ಕ ಪಡೆಯಬಾರದು’ ಎಂದೂ ಅವರು ಸೂಚಿಸಿದ್ದಾರೆ.  

‘ಮಕ್ಕಳು ಕಲಿಕೆಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂಬ ಉದ್ದೇಶದಿಂದ ವಿದ್ಯಾಗಮ ಯೋಜನೆ ಪ್ರಾರಂಭಿಸಲಾಗಿದೆ. ಖಾಸಗಿ ಶಾಲೆಗಳೂ ಕೂಡ ಈ ಯೋಜನೆ ಅಳವಡಿಸಿಕೊಳ್ಳಲು ಸ್ವತಂತ್ರವಾಗಿವೆ’ ಎಂದು ತಿಳಿಸಿದ್ದಾರೆ.

ಪ್ರತಿಭಟನೆ: ಬೆಂಗಳೂರಿನಲ್ಲಿ ನಡೆದ ಶಿಕ್ಷಕರ ದಿನಾಚರಣೆ ವೇಳೆ ಪ್ರತಿಭಟನೆ ನಡೆಸಿದ ಖಾಸಗಿ ಶಿಕ್ಷಕರು ಸರ್ಕಾರದ ಧೋರಣೆ ವಿರುದ್ಧ ಟೀಕಿಸಿದರು.

‘ಸರ್ಕಾರ ಕೆಲಸ ಕೊಡುವುದಿಲ್ಲ, ಖಾಸಗಿ ಶಾಲೆಗಳಲ್ಲಿಯೂ ವೇತನವನ್ನೇ ನೀಡುತ್ತಿಲ್ಲ. ಶಿಕ್ಷಕಿಯರೇ ಮನೆ ನಡೆಸುತ್ತಿರುವ ಕುಟುಂಬಗಳು ತೀರಾ ಸಂಕಷ್ಟದಲ್ಲಿವೆ’ ಎಂದು ಖಾಸಗಿ ಶಾಲೆಯ ಶಿಕ್ಷಕಿ ಸುಧಾ ಹೇಳಿದರು.

ಇದಕ್ಕೆ ಸದ್ಯದ ಪರಿಹಾರವೆಂಬಂತೆ, ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸಲು ಸಚಿವರು ಸೂಚನೆ ನೀಡಿದ್ದಾರೆ.

ಶಿಕ್ಷಕಿಯರಿಂದ ನೂಡಲ್ಸ್‌ ಮಾರಾಟ

ವೇತನ ಸಿಗದ ಕಾರಣ, ಖಾಸಗಿ ಶಾಲೆಗಳ ಹಲವು ಶಿಕ್ಷಕಿಯರು ‘ನೂಡಲ್ಸ್‌’ ಮಾರಾಟ ಪ್ರಾರಂಭಿಸಿದ್ದಾರೆ. ಇದರಿಂದ ಬಂದ ಆದಾಯದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಪ್ರತಿಭಟನೆಯ ವೇಳೆಯೇ ನೂಡಲ್ಸ್‌ ಪೊಟ್ಟಣವನ್ನು ಸಚಿವ ಸುರೇಶ್‌ಕುಮಾರ್ ಅವರಿ‌ಗೆ ಕೊಡಲು ಮುಂದಾದರು.

ಅವರ ಸಮಸ್ಯೆ ಆಲಿಸಿದ ಸಚಿವರು, ಅವರ ಸ್ಥಿತಿಗೆ ಮರುಗುತ್ತಲೇ ಕೈಮುಗಿದು ಬೇಸರದಿಂದ ಶಿಕ್ಷಕರ ಸದನದೊಳಗೆ ತೆರಳಿದರು.

‘ನೂಡಲ್ಸ್‌ ಮಾರಾಟದಿಂದ ತಿಂಗಳಿಗೆ ₹2,500 ರಿಂದ ₹3,000 ಸಂಪಾದಿಸುತ್ತಿದ್ದೇವೆ. ಪೊಟ್ಟಣವನ್ನು ನೀಡಿ ಅವರಿಗೆ ಶಿಕ್ಷಕರ ದಿನದ ಶುಭ ಕೋರಲು ಮುಂದಾದೆವು. ಅವರಿಗೆ ಅವಮಾನ ಮಾಡುವ ಉದ್ದೇಶ ನಮ್ಮದಾಗಿರಲಿಲ್ಲ’ ಎಂದು ಶಿಕ್ಷಕಿ ರಂಗಲಕ್ಷ್ಮಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು