ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲನ ಮರ್ಮಾಂಗಕ್ಕೆ ಒದ್ದು ಕೊಲೆಗೆ ಯತ್ನ: ವಕೀಲ ಜಗದೀಶ್ ಬಂಧನ

ವಕೀಲ ಜಗದೀಶ್ ಕೆ.ಎನ್. ಮಹಾದೇವ್ ಬಂಧನ
Last Updated 13 ಫೆಬ್ರುವರಿ 2022, 21:08 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸಿಟಿ ಸಿವಿಲ್ ನ್ಯಾಯಾಲಯ ಆವರಣದಲ್ಲಿ ಗಲಾಟೆ ಮಾಡಿ, ವಕೀಲರೊಬ್ಬರ ಮರ್ಮಾಂಗಕ್ಕೆ ಒದ್ದು ಕೊಲೆಗೆ ಯತ್ನಿಸಿದ ಆರೋಪದಡಿ ವಕೀಲ ಜಗದೀಶ್ ಕೆ.ಎನ್. ಮಹಾದೇವ್ ಅವರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಭಾನುವಾರ ಬೆಳಿಗ್ಗೆ ಬಂಧಿಸಿದ್ದಾರೆ.

‘ಫೆ. 10,11ರಂದು ನಡೆದಿರುವ ಪ್ರತ್ಯೇಕ ಘಟನೆ ಸಂಬಂಧ ವಕೀಲ ಜಿ. ನಾರಾಯಣಸ್ವಾಮಿ (37) ಹಾಗೂ ಇತರರು ದೂರು ನೀಡಿದ್ದಾರೆ. ಎರಡು ಗುಂಪುಗಳ ನಡುವೆ ದ್ವೇಷ ಬಿತ್ತುವುದು (ಐಪಿಸಿ 153ಎ), ಕ್ರಿಮಿನಲ್ ಪಿತೂರಿ (120ಬಿ), ಅಕ್ರಮ ಕೂಟ (ಐಪಿಸಿ 143), ದೊಂಬಿ (ಐಪಿಸಿ 147), ಅಕ್ರಮವಾಗಿ ಗುಂಪು ಸೇರುವುದು (ಐಪಿಸಿ 149), ಕೊಲೆ ಯತ್ನ (ಐಪಿಸಿ 307), ಹಲ್ಲೆ (ಐಪಿಸಿ 323), ಅಕ್ರಮ ಬಂಧನ (ಐಪಿಸಿ 341), ಜೀವ ಬೆದರಿಕೆ (ಐಪಿಸಿ 506) ಆರೋಪದಡಿ ಜಗದೀಶ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಕೊಡಿಗೇಹಳ್ಳಿಯಲ್ಲಿರುವ ಮನೆಯಲ್ಲಿ ಅವರನ್ನು ಬಂಧಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು. ಜಗದೀಶ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ’ ಎಂದೂ ತಿಳಿಸಿದರು.

'ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಆಕ್ಷೇಪಣೆ ಸಲ್ಲಿಸಲು ಜಗದೀಶ್ ಹಾಗೂ ಇತರರು ನ್ಯಾಯಾಲಯಕ್ಕೆ ಬಂದಿದ್ದರು. ಅದೇ ವೇಳೆ ಗಲಾಟೆ ನಡೆದಿದೆ. ಕೆಲವರು ವಿಡಿಯೊ ಚಿತ್ರೀಕರಿಸಿದ್ದು, ಆ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಗಲಾಟೆ ಸಂಬಂಧ ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು ಪೊಲೀಸ್ ಕಮಿಷನರ್ ಕಮಲ್ ಪಂತ್‌ ಅವರಿಗೆ ದೂರು ನೀಡಿದ್ದಾರೆ’ ಎಂದೂ ಹೇಳಿದರು.

ದೂರಿನ ವಿವರ:
‘ಜಗದೀಶ್ ಮಹಾದೇವ್, ಪ್ರಶಾಂತಿ ಸುಭಾಷ್, ಶರತ್ ಖಾದ್ರಿ ಹಾಗೂ ಇತರರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ. ವಕೀಲರು ಮತ್ತು ಕೆಲವು ವ್ಯಕ್ತಿಗಳ ಬಗ್ಗೆ ಅವರೆಲ್ಲರೂ ಅವಹೇಳನಕಾರಿಯಾಗಿ ನಿಂದಿಸಿದ್ದರು. ಆ ರೀತಿ ಮಾಡದಂತೆ ಅವರೆಲ್ಲರಿಗೂ ವಕೀಲದ ಸಂಘದಿಂದ ಬುದ್ದಿ ಮಾತು ಹೇಳಿದ್ದೆವು’
ಎಂದು ವಕೀಲ ನಾರಾಯಣಸ್ವಾಮಿ ದೂರಿನಲ್ಲಿ ತಿಳಿಸಿದ್ದಾರೆ.

‘ನನ್ನ ವಿರುದ್ಧ ದ್ವೇಷ ಸಾಧಿಸಲಾರಂಭಿಸಿದ ಜಗದೀಶ್ ಹಾಗೂ ಇತರರು, ಫೆ.10ರಂದು ನ್ಯಾಯಾಲಯದ ಆವರಣದಲ್ಲಿ ಗಲಾಟೆ ಮಾಡಿ ಜೀವ ಬೆದರಿಕೆಯೊಡ್ಡಿದರು. ಫೆ. 11ರಂದು ಬೆಳಿಗ್ಗೆ 11 ಗಂಟೆ ಸುಮಾ
ರಿಗೆ ಜಗದೀಶ್ ಹಾಗೂ 50 ಮಂದಿ ನ್ಯಾಯಾಲಯ ಆವರಣಕ್ಕೆ ನುಗ್ಗಿ ಗಲಾಟೆ ಮಾಡಿ ದೊಂಬಿ ಎಬ್ಬಿಸಿದರು.’

‘ಸ್ಥಳದಲ್ಲಿ ಅಶಾಂತಿ ವಾತಾವರಣ ಉಂಟು ಮಾಡಿದ್ದ ಆರೋಪಿಗಳು, ನನ್ನ ಕುತ್ತಿಗೆ ಹಿಸುಕಿ ಮರ್ಮಾಂಗಕ್ಕೆ
ಒದ್ದು ಕೊಲೆಗೆ ಯತ್ನಿಸಿದರು. ಕೆಲ ವಕೀಲರನ್ನು ತಡೆದು, ಜೀವ ಬೆದರಿಕೆ ಹಾಕಿದರು.

ಮಾನಹಾನಿಕಾರಕ ಹೇಳಿಕೆ ನೀಡಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹರಿಬಿಟ್ಟರು.

300 ಜನರಿಂದ ಬೆದರಿಕೆ ಕರೆ ಮಾಡಿಸಿದ್ದಾರೆ’ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ಕ್ರಮ ಕೈಗೊಳ್ಳದ ಪೊಲೀಸರು’

‘ವಕೀಲ ಜಗದೀಶ್ ಅವರ ಮಗ ಹಾಗೂ ಇತರರ ಮೇಲೂ ಹಲ್ಲೆ ಆಗಿದೆ. ಈ ಬಗ್ಗೆ ಎಫ್‌ಐಆರ್ ದಾಖಲಾಗಿದೆ. ಆದರೆ, ಪೊಲೀಸರು ತಪ್ಪಿತಸ್ಥರನ್ನು ಇದುವರೆಗೂ ಬಂಧಿಸಿಲ್ಲ’ ಎಂದು ಜಗದೀಶ್ ಆಪ್ತರು ಆರೋಪಿಸಿದ್ದಾರೆ.

‘ಐಪಿಎಸ್ ಅಧಿಕಾರಿಯೊಬ್ಬರ ಭ್ರಷ್ಟಾಚಾರದ ವಿರುದ್ಧ ಜಗದೀಶ್ ಹೋರಾಟ ಮಾಡುತ್ತಿದ್ದರು. ಅದೇ ಅಧಿಕಾರಿ ಹೂಡಿದ್ದ ಮೊಕದ್ದಮೆಗೆ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯಕ್ಕೆ ಬಂದಿದ್ದಾಗ ಗಲಾಟೆ ಆಗಿದೆ. ಹಿರಿಯ ಅಧಿಕಾರಿಗಳ ಒತ್ತಡಕ್ಕೆ ಒಳಗಾಗಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ’ ಎಂದೂ ದೂರಿದರು.

‘ಚಿತ್ರೀಕರಣ ತಡೆದ ಪೊಲೀಸರು’

‘ಮನೆಗೆ ಪೊಲೀಸರು ಬರುತ್ತಿದ್ದಂತೆ ಜಗದೀಶ್ ಅವರು ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಣ ಮಾಡಲಾರಂಭಿಸಿದ್ದರು. ಆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ನೇರಪ್ರಸಾರವಾಗುತ್ತಿತ್ತು. ಅದನ್ನು ಪ್ರಶ್ನಿಸಿದ ಪೊಲೀಸರು, ವಿಡಿಯೊ ಮಾಡದಂತೆ ಬೆದರಿಸಿ ಮೊಬೈಲ್ ಕಸಿದುಕೊಂಡಿದ್ದಾರೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT