ಮುಂಗಾರಿನ ಭರವಸೆ: ಹುಸಿಯಾದ ರೈತರ ಆಸೆ!

ದಾಬಸ್‌ಪೇಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯುದ್ದಕ್ಕೂ ಮುಂಗಾರು ಮಳೆ ಆರಂಭದಲ್ಲಿ ಅಬ್ಬರಿಸಿ ರೈತರಲ್ಲಿ ಆಶಾ ಭಾವ ಮೂಡಿಸಿತ್ತು. ದಿಢೀರನೇ ಜಿಲ್ಲೆಯಿಂದ ನಾಪತ್ತೆಯಾಗಿದೆ. ವಾಡಿಕೆಯಷ್ಟು ಮಳೆಯಾಗದ ಕಾರಣ ರೈತರ ಬಂಪರ್ ಕೃಷಿ ಕನಸಿಗೆ ಕಲ್ಲು ಬಿದ್ದಿದೆ.
ವರ್ಷಧಾರೆಯಿಂದ ಹರ್ಷಗೊಂಡ ಜಿಲ್ಲೆಯ ಬಹುತೇಕ ರೈತರು ಮುಸುಕಿನ ಜೋಳ, ತೊಗರಿ, ನೆಲಗಡಲೆ, ಅವರೆ, ಅಲಸಂದೆ ಬೆಳೆಗಳ ಜೊತೆಗೆ ಜಾನುವಾರುಗಳಿಗೆ ಮೇವಿನ ಜೋಳ ಬಿತ್ತನೆ ಮಾಡಿದ್ದರು. ಈಗ ಅವು ನೀರಿನ ಕೊರತೆಯಿಂದ ಬಾಡಿ ಹೋಗುತ್ತಿವೆ.
ಕಳೆದ ವರ್ಷ ಮೇ ತಿಂಗಳಲ್ಲೇ ಮಳೆ ಆರಂಭವಾದ ಕಾರಣ ಬಿತ್ತನೆ ಕಾರ್ಯ ಬೇಗನೆ ಶುರುವಾಗಿತ್ತು. ಬಳಿಕ ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿದ ಪರಿಣಾಮ ಬೆಳೆಗೆ ನೀರಿನ ಸಮಸ್ಯೆ ಕಾಡಿರಲಿಲ್ಲ. ಆದರೆ, ಈ ಬಾರಿ ಪರಿಸ್ಥಿತಿ ಹಾಗಿಲ್ಲ. ಜೂನ್ ಮೊದಲ ವಾರ ಮುಂಗಾರು ರಾಜ್ಯವನ್ನು ಪ್ರವೇಶಿಸಿತಾದರೂ ಮಳೆ ನಿರೀಕ್ಷೆ ಹುಟ್ಟಿಸಿ ಮಾಯವಾಗಿದೆ.
ಚಂಡಮಾರುತಗಳ ಪರಿಣಾಮ ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿತ್ತು. ಜೂನ್ ಕಳೆಯುತ್ತಾ ಬಂದರೂ ಜಿಲ್ಲೆಯಲ್ಲಿ ನಿರೀಕ್ಷಿತ ಮಳೆ ಬಾರದನ್ನು ಕಂಡಾಗ ಚಂಡಮಾರುತ ತನ್ನೊಂದಿಗೆ ಮುಂಗಾರು ಮಳೆಯನ್ನೂ ಸೆಳೆದೊಯ್ದಂತೆ ಕಾಣಿಸುತ್ತಿದೆ.
ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದೆಯೇ ಹೊರತು ಈ ಮೋಡಗಳು ಹನಿಯಾಗಿ ಧರೆಗೆ ಸುರಿಯುವ ಸಾಮರ್ಥ್ಯ ಹೊಂದಿಲ್ಲ. ಇದರಿಂದ ಮಳೆಯನ್ನೇ ನಂಬಿ ಬಿತ್ತನೆ ಮಾಡಿದ್ದ ರೈತರು ತಲೆ ಮೇಲೆ ಕೈಹೊತ್ತು ಕೂರುವಂತೆ ಆಗಿದೆ.
ಜಿಲ್ಲೆಯ ನಾಲ್ಕು ತಾಲ್ಲೂಕುಗಳಾದ ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರದಲ್ಲಿ ಅಲಸಂದೆ, ತೊಗರಿ, ನೆಲಗಡಲೆ, ಮುಸುಕಿನ ಜೋಳ, ಅವರೆ ಬಿತ್ತನೆಯಾಗಿದೆ. ಈ ಬೆಳೆಗಳಿಗೆ ಈಗ ನೀರಿನ ಕೊರತೆಯಾಗಿದೆ. ಮುಂದೆ ಮಳೆಯಾದರೂ ಇಳುವರಿ ಮೇಲೆ ಪರಿಣಾಮ ಬೀರುವುದು ಖಚಿತ ಎನ್ನುತ್ತಾರೆ ರೈತರು.
ಮೇ– ಜೂನ್ ಆರಂಭದಲ್ಲಿ ಜಿಲ್ಲೆಯಲ್ಲಿ ಮಳೆಯಾಗಿದೆ. ಬಿದ್ದ ಮಳೆಯೂ ಎಲ್ಲೆಡೆ ಹಂಚಿ ಬಿದ್ದಿಲ್ಲ. ಕೆಲವು ಪ್ರದೇಶಗಳಲ್ಲಿ ಚೆನ್ನಾಗಿ ಸುರಿದ ಮಳೆ ಉಳಿದ ಭಾಗಗಳಲ್ಲಿ ಸರಿಯಾಗಿ ಬರದೇ ಹೋಗಿದೆ ಎಂದರು ದೊಡ್ಡಬಳ್ಳಾಪುರದ ರೈತ ಗಂಗರಾಜು.
ನೀರಾವರಿ ಇರುವವರು ಹೆಚ್ಚು ದ್ವಿದಳ ಧಾನ್ಯ ಬೆಳೆಗಳನ್ನು ಬೆಳೆಯದೆ ತರಕಾರಿ, ಹೂ ಬೆಳೆಯುತ್ತಾರೆ. ಜಿಲ್ಲೆಯಲ್ಲಿ ಸಿಂಹಪಾಲು ಮಳೆಯಾಶ್ರಿತರೇ ಹೆಚ್ಚಿದ್ದಾರೆ. ಇವರಿಗಷ್ಟೇ ಸದ್ಯಕ್ಕೆ ಸಮಸ್ಯೆಯಾಗಿದೆ. ಮಳೆಯ ನಿರೀಕ್ಷೆಯಲ್ಲಿ ನಾವಿದ್ದೇವೆ ಅನ್ನುವುದು ನೆಲಮಂಗಲ ತಾಲ್ಲೂಕಿನ ರೈತ ಸೋಮಣ್ಣ ಮಾತು.
ಸಾಮಾನ್ಯವಾಗಿ ಜಿಲ್ಲೆಯಲ್ಲಿ ಮುಸುಕಿನ ಜೋಳ, ತೊಗರಿ ಹಾಗೂ ಅವರೆ ಹೆಚ್ಚು ಬಿತ್ತುತ್ತಾರೆ. ಮಾರುಕಟ್ಟೆಯಲ್ಲಿ ಮುಂಚಿತವಾಗಿ ಬಂದ ಇವುಗಳಿಗೆ ಬೆಲೆ ಇರುತ್ತದೆ. ಇದನ್ನರಿತ ರೈತರು ಪೈಪೋಟಿಗೆ ಬಿದ್ದವರಂತೆ ಪೂರ್ವ ಮುಂಗಾರಿನಲ್ಲಿಯೇ ಬೇಗನೆ ಬಿತ್ತನೆ ಮಾಡುತ್ತಾರೆ. ಬೇಗ ಬಿತ್ತಿದ ಬೆಳೆಗಳಿಗೆ ನೀರಿನ ಕೊರತೆ ಎದುರಾಗಿರುವುದು ರೈತರ ಚಿಂತೆ ಹೆಚ್ಚಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.