ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿಕರ ಜಮೀನಿನಲ್ಲಿ ಹೊಸ ಪ್ರಯೋಗ: ಬಸವರಾಜ ಬೊಮ್ಮಾಯಿ

‘ಕೃಷಿ ಮೇಳ’ದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ
Last Updated 5 ನವೆಂಬರ್ 2022, 20:16 IST
ಅಕ್ಷರ ಗಾತ್ರ

ಬೆಂಗಳೂರು: ‘ಕೃಷಿ ವಿಶ್ವವಿದ್ಯಾಲಯಗಳ ತಜ್ಞರು, ಪ್ರಾಧ್ಯಾಪಕರು ಹಾಗೂ ವಿಸ್ತರಣಾ ನಿರ್ದೇಶಕರು ಕ್ಯಾಂಪಸ್ ಬಿಟ್ಟು ಕೃಷಿಕರ ಜಮೀನುಗಳಲ್ಲಿಯೇ ಪ್ರಯೋಗ ನಡೆಸಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಶನಿವಾರ ಪ್ರಗತಿಪರ ಕೃಷಿಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಕ್ಯಾಂಪಸ್‌ನಲ್ಲಿ ಎಲ್ಲ ವ್ಯವಸ್ಥೆ ಇರುತ್ತದೆ. ಅಲ್ಲಿ ಹೊಸ ತಳಿ ಪ್ರಯೋಗ ನಡೆಸುವುದು ಹೆಚ್ಚುಗಾರಿಕೆ ಅಲ್ಲ. ಆಯಾ ಭಾಗದ ಭೂಮಿಯ ಫಲವತ್ತತೆ ಅರಿತು ಅಲ್ಲಿಯೇ ಪ್ರಯೋಗಗಳು ನಡೆಯಬೇಕು. 10 ಕೃಷಿ ವಲಯದ ವ್ಯಾಪ್ತಿಯಲ್ಲಿ ಇದು ಅನುಷ್ಠಾನಕ್ಕೆ ತರಬೇಕು ಎಂದು ಸೂಚನೆ ನೀಡಿದರು.

ಕೃಷಿ ಕ್ಷೇತ್ರದಲ್ಲಿ ಬದಲಾವಣೆಗಳು ನಡೆದರೆ ಆದಾಯ ವೃದ್ಧಿ ಆಗಲಿದೆ. 130 ಕೋಟಿ ಜನರಿಗೆ ಆಹಾರ ಉತ್ಪಾದನೆ ಮಾಡಬೇಕಿದೆ. ಭಾರತ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿದ್ದು ಅದಕ್ಕೆ ರೈತರ ಪರಿಶ್ರಮವೇ ಕಾರಣ. ಪ್ರಸ್ತುತ ಕೃಷಿ ಕ್ಷೇತ್ರವು ಬೆಳೆದಿದೆ. ಆದರೆ, ರೈತರು ಬೆಳೆದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

‘ಹವಾಮಾನ ವೈಪರೀತ್ಯವು ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ. ಉತ್ತಮ ಮಳೆಯಾದರೆ ಮಾತ್ರ ಆಹಾರದ ಉತ್ಪಾದನೆ ಹೆಚ್ಚಲಿದೆ. ಕೃಷಿ ಹಾಗೂ ರೈತರ ವಿಚಾರದಲ್ಲಿ ಯಾರೂ ರಾಜಕೀಯ ಬೆರೆಸಬಾರದು’ ಎಂದು ನುಡಿದರು.

‘ಅಭಿವೃದ್ಧಿ ಸೇರಿದಂತೆ ನಾನಾ ಕಾರಣಕ್ಕೆ ಕೃಷಿ ಜಮೀನು ಕಡಿಮೆ ಆಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಕಂದಾಯ ಸಚಿವ ಆರ್‌.ಅಶೋಕ ಮಾತನಾಡಿ, ರಾಜ್ಯದಲ್ಲಿ 11 ಲಕ್ಷ ಹೆಕ್ಟೇರ್ ಜಮೀನು ಪಾಳು ಬಿದ್ದಿದೆ. ಅದು ಕೃಷಿಗೆ ಬಳಕೆ ಆಗಬೇಕು. ಚಿಕ್ಕಮಗಳೂರು, ಕೊಡಗು ಹಾಗೂ ಹಾಸನದಲ್ಲಿ ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡಿದವರಿಗೆ ಅದೇ ಜಮೀನು ಗುತ್ತಿಗೆ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದರು.

ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ‘ರಾಜ್ಯದಲ್ಲಿ ಶೇ 10 ಹಾಗೂ ದೇಶದಲ್ಲಿ ಶೇ 3ರಷ್ಟು ಆಹಾರೋತ್ಪಾದನೆ ಹೆಚ್ಚಳವಾಗಿದೆ. ರೈತಶಕ್ತಿ ಯೋಜನೆ ಅಡಿ 10 ಲೀಟರ್‌ ತನಕ ಡೀಸೆಲ್‌ ಮೇಲೆ ಸಿಬ್ಸಿಡಿ ನೀಡಲಾಗುತ್ತಿದೆ. ಸಮಗ್ರ ಕೃಷಿಯಿಂದ ಅಧಿಕ ಲಾಭ ಗಳಿಸಬಹುದು’ ಎಂದು ಹೇಳಿದರು.

ಸಂಸದ ಡಿ.ವಿ.ಸದಾನಂದಗೌಡ ಅವರು, ‘ಕೃಷಿ ಮೇಳವು ಮೈಸೂರು ದಸರಾದಂತೆ ಭಾಸವಾಗುತ್ತಿದೆ. ಕೋವಿಡ್‌ ಸಂಕಷ್ಟದಲ್ಲಿ ಎಲ್ಲ ಕ್ಷೇತ್ರದ ಜಿಡಿಪಿ ಕುಸಿದಿದ್ದರೂ ಕೃಷಿ ಕ್ಷೇತ್ರ ಜಿಡಿಪಿ ಶೇ 3.5ರಷ್ಟು ಹೆಚ್ಚಳವಾಗಿತ್ತು. ಅದಕ್ಕೆ ರೈತರ ಪರಿಶ್ರಮವೇ ಕಾರಣ’
ಎಂದರು.

ಕೃಷಿ ವಿವಿಯ ಕುಲಪತಿ ಡಾ.ಎಸ್‌.ವಿ.ಸುರೇಶ್ ಹಾಜರಿದ್ದರು.

ಅಗತ್ಯಕ್ಕೆ ತಕ್ಕಂತೆ ಸಂಶೋಧನೆ

ರೈತರ ಅನುಕೂಲಕ್ಕೆ ತಕ್ಕಂತೆ ಸಂಶೋಧನೆಗಳು ನಡೆಯಬೇಕು ಎಂದು ಶಾಸಕ ಕೃಷ್ಣ ಬೈರೇಗೌಡ ಅವರು ಸಲಹೆ ನೀಡಿದರು.

ಕೃಷಿಕರ ಆದಾಯ ಕುಸಿಯುತ್ತಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಇದರಿಂದ ರೈತರು ಖರ್ಚು ಕಡಿಮೆ ಮಾಡುವ ಸ್ಥಿತಿಯಿದೆ. ಹೀಗಾಗಿ, ರೈತರ ಅನುಕೂಲಕ್ಕೆ ಬರುವ ಪ್ರಯೋಗಗಳು ನಡೆಯಬೇಕು. ಅವುಗಳು ಕೃಷಿಕರ ಜಮೀನಿಗೂ ತಲುಪಬೇಕು ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT