ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಲ್ಕು ವರ್ಷದ ಪದವಿ ಸ್ಥಗಿತ: ವಿಜಯೋತ್ಸವ

Published 18 ಮೇ 2024, 15:58 IST
Last Updated 18 ಮೇ 2024, 15:58 IST
ಅಕ್ಷರ ಗಾತ್ರ

ಬೆಂಗಳೂರು: ‘ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್‌ ಆರ್ಗನೈಸೇಷನ್‌ (ಎಐಡಿಎಸ್ಒ) ನೇತೃತ್ವದಲ್ಲಿ ಎರಡು ವರ್ಷ ನಡೆದ ವಿದ್ಯಾರ್ಥಿ ಹೋರಾಟದ ಫಲವಾಗಿ ರಾಜ್ಯದಲ್ಲಿ ನಾಲ್ಕು ವರ್ಷದ ಪದವಿಯನ್ನು ರದ್ದುಗೊಳಿಸಲಾಗಿದೆ’ ಎಂದು ಆರ್ಗನೈಸೇಷನ್‌ನ ರಾಷ್ಟ್ರೀಯ ಅಧ್ಯಕ್ಷ ವಿ.ಎನ್. ರಾಜಶೇಖರ್ ಹೇಳಿದರು.

ಎಐಡಿಎಸ್‌ಒ ಶನಿವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ ‘ವಿದ್ಯಾರ್ಥಿ ಹೋರಾಟದ ಐತಿಹಾಸಿಕ ವಿಜಯೋತ್ಸವದ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ರಾಷ್ಟ್ರೀಯ ಶಿಕ್ಷಣ ನೀತಿ–2020 (ಎನ್ಇಪಿ) ಅನುಷ್ಠಾನವನ್ನು ಹಿಮ್ಮೆಟ್ಟಿಸಿದ ಮೊದಲ ರಾಜ್ಯ ಕರ್ನಾಟಕ ಆಗಿದೆ. ಎನ್‌ಇಪಿ ಅಡಿಯಲ್ಲಿ ಹಿಂದಿನ ಬಿಜೆಪಿ ಸರ್ಕಾರವು 13,800 ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸಿತ್ತು. ಇದರ ವಿರುದ್ಧವಾಗಿ ಎಐಡಿಎಸ್‌ಒ ರಾಜ್ಯವ್ಯಾಪಿ 36 ಲಕ್ಷ ಸಹಿ ಸಂಗ್ರಹಿಸಿತ್ತು’ ಎಂದು ತಿಳಿಸಿದರು.

ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ‘ಎಲ್ಲ ವಿದ್ಯಾರ್ಥಿಗಳಿಗೂ ಶಿಕ್ಷಣವು ದೊರೆಯಬೇಕು ಮತ್ತು ಶಿಕ್ಷಣದ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರವೇ ವಹಿಸಬೇಕು. ಆದರೆ, 1986ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದ ಎನ್‌ಇಪಿ ಶಿಕ್ಷಣದ ವ್ಯಾಪಾರೀಕರಣಕ್ಕೆ ಬಾಗಿಲು ತೆರೆಯಿತು. 2000ರಲ್ಲಿ ವಾಜಪೇಯಿ ಸರ್ಕಾರ ನೇಮಿಸಿದ್ದ ಬಿರ್ಲಾ ಕಮಿಟಿಯು, ಹಂತ ಹಂತವಾಗಿ ಸರ್ಕಾರಿ ಶಾಲಾ-ಕಾಲೇಜುಗಳನ್ನು ಖಾಸಗೀಕರಣಗೊಳಿಸಲು ಶಿಫಾರಸು ಮಾಡಿತ್ತು’ ಎಂದರು.

ಎಐಡಿಎಸ್‌ಒ ಅಧ್ಯಕ್ಷೆ ಅಶ್ವಿನಿ.ಕೆ.ಎಸ್., ಉಪಾಧ್ಯಕ್ಷರಾದ ಹಣಮಂತು ಎಚ್.ಎಸ್., ಅಭಯಾ ದಿವಾಕರ್, ಅಪೂರ್ವ, ಚಂದ್ರಕಲಾ, ರಾಜ್ಯ ಖಜಾಂಚಿ ಸುಭಾಷ್, ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT