ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ ಬಂಡವಾಳಶಾಹಿಗಳ ಪ್ರತಿನಿಧಿ: ಎಐಯುಟಿಯುಸಿ ಅಧ್ಯಕ್ಷ ಕೆ. ರಾಧಾಕೃಷ್ಣ

Last Updated 1 ಫೆಬ್ರುವರಿ 2020, 14:27 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಂಡವಾಳಗಾರರ ಪ್ರತಿನಿಧಿಯಾದ ಮಹಾತ್ಮ ಗಾಂಧಿ ಅವರು ಭಾರತವನ್ನು ಬಂಡವಾಳಶಾಹಿ ದೇಶ ಮಾಡಿದರು’ ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್‌ ಯೂನಿಯನ್ ಸೆಂಟರ್‌ನ (ಎಐಯುಟಿಯುಸಿ) ರಾಷ್ಟ್ರೀಯ ಅಧ್ಯಕ್ಷ ಕೆ. ರಾಧಾಕೃಷ್ಣ ಹೇಳಿದರು.

ನಗರದಲ್ಲಿ ಶನಿವಾರ ನಡೆದ ‌ಎಐಯುಟಿಯುಸಿ 3ನೇ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ನಾನು ಅವರನ್ನು ದೂಷಿಸುತ್ತಿಲ್ಲ. ಆದರೆ, ಅವರು ತಮ್ಮ ತಪ್ಪು ಕಲ್ಪನೆಗಳಿಂದಾಗಿ ವರ್ಗ ದೃಷ್ಟಿಕೋನವನ್ನು ಒಪ್ಪಿಕೊಳ್ಳಲೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸುಭಾಷ್ ಚಂದ್ರಬೋಸ್ ಮತ್ತು ಭಗತ್ ಸಿಂಗ್ ಕಾರ್ಮಿಕರ ಪರವಾದ ಸಮಾಜವಾದಿ ದೇಶ ನಿರ್ಮಾಣದ ಕನಸು ಹೊತ್ತಿದ್ದರು. ಕಾರ್ಮಿಕರು ಮತ್ತು ಬಂಡವಾಳಗಾರರಿಬ್ಬರೂ ಬ್ರಿಟೀಷರ ವಿರುದ್ಧ ಹೋರಾಡುತ್ತಿದ್ದರು. ಕಾರ್ಮಿಕರು ಶೋಷಣೆಯಿಂದ ಮುಕ್ತಿ ಬಯಸಿದ್ದರೆ, ಬಂಡವಾಳಶಾಹಿಗಳು ಈ ದೇಶದ ಸಂಪತ್ತಿನ ಮೇಲೆ ಕಣ್ಣಿಟ್ಟಿದ್ದರು. ಗಾಂಧೀಜಿ ಬಂಡವಾಳಶಾಹಿಗಳ ಪ್ರತಿನಿಧಿಯಾಗಿದ್ದು ದೊಡ್ಡ ದುರಂತ’ ಎಂದರು.

‘ಬ್ರಿಟೀಷರು ದೇಶ ಬಿಟ್ಟು ಹೋದರೆ ಸಾಕು, ಬಂಡವಾಳಶಾಹಿಗಳು ಕಾರ್ಮಿಕರನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ ಎಂದು ಗಾಂಧೀಜಿ ಭಾವಿಸಿದ್ದರು. ಆದರೆ, ಬಂಡವಾಳಶಾಹಿಗಳು ದೇಶದ ಜನ ಒಗ್ಗೂಡಲು ಬಿಡಲೇ ಇಲ್ಲ. ಜಾತಿ, ಧರ್ಮ, ಭಾಷೆ ವಿಷಯದಲ್ಲಿ ಸಂಘರ್ಷ ನಿರಂತರವಾಗಿ ಜೀವಂತ ಇರುವಂತೆ ಮಾಡಿದರು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ದೇಶ ಆರ್ಥಿಕವಾಗಿ ಹೀನಾಯ ಸ್ಥಿತಿಗೆ ತಲುಪಿದೆ. ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಗೆ ವಹಿಸಲಾಗುತ್ತಿದೆ. ನಿರುದ್ಯೋಗ ಸಮಸ್ಯೆ 45 ವರ್ಷದಲ್ಲೇ ಅತ್ಯಂತ ಹೆಚ್ಚಳವಾಗಿದೆ. ಅತ್ಯಂತ ಶ್ರೀಮಂತರು ಕೆಲವೇ ಜನರಿದ್ದು, ಉಳಿದವರು ಭಿಕಾರಿಗಳಾಗುತ್ತಿದ್ದಾರೆ. ಬಂಡವಾಳಶಾಹಿ ವ್ಯವಸ್ಥೆಯೇ ಇದಕ್ಕೆ ಮೂಲ ಕಾರಣ’ ಎಂದು ಅವರು ಹೇಳಿದರು.

ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಸ್ಟ್‌) ರಾಜ್ಯ ಕಾರ್ಯದರ್ಶಿ ಕೆ.ಉಮಾ, ‘ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಜಿಎಸ್‌ಟಿ ಜಾರಿಯಿಂದ ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಿಗಳನ್ನು ಸಂಪೂರ್ಣವಾಗಿ ಮುಳುಗಿ ಹೋದರು. ಆರ್ಥಿಕ ಸ್ಥಿತಿ ಸುಧಾರಿಸುವ ಬದಲು ಅಕ್ರಮ ವಲಸಿಗರೆಂಬ ಗುಮ್ಮವನ್ನು ತೋರಿಸಿಕೊಂಡು ದೇಶದ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT