ಶುಕ್ರವಾರ, ಜನವರಿ 27, 2023
27 °C

ಪ್ರಕರಣಗಳೆಲ್ಲಾ ರಾಜಕೀಯ ದುರುದ್ದೇಶ: ಹೈಕೋರ್ಟ್‌ನಲ್ಲಿ ಡಿಕೆಶಿ ಪರ ವಕೀಲರ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ದಾಖಲಿಸಲಾಗಿರುವ ಪ್ರಕರಣಗಳ ಹಿಂದೆ ರಾಜಕೀಯ ದುರುದ್ದೇಶವಿದೆ’ ಎಂಬ ಆಕ್ಷೇಪವನ್ನು ಶಿವಕುಮಾರ್ ಪರ ವಕೀಲರು ಹೈಕೋರ್ಟ್‌ನಲ್ಲಿ ಪುನುರುಚ್ಚರಿಸಿದರು.

ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿರುವ ಪ್ರಕರಣವನ್ನು ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ರಿಟ್‌ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣ’ಗಳ ಮೇಲ್ಮನವಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ಸುನಿಲ್ ದತ್‌ ಯಾದವ್‌ ಅವರಿದ್ದ ಹೈಕೋರ್ಟ್‌ನ ಧಾರವಾಡದ ವಿಶೇಷ ನ್ಯಾಯಪೀಠ ಶುಕ್ರವಾರ (ನ.25) ಮುಂದುವರಿಸಿತು.

ಈ ವೇಳೆ ಶಿವಕುಮಾರ್ ಪರ ಹಿರಿಯ ವಕೀಲ ಸಂದೇಶ್ ಚೌಟ,‘ಒಂದು ವರ್ಷದ ಹಿಂದೆ ನೀಡಿರುವ ವಿವರಣೆಯ ಬಗ್ಗೆ ಏನೂ ಕ್ರಮ ಕೈಗೊಳ್ಳದೆ ತನಿಖೆ ಬಾಕಿ ಉಳಿಸಿಕೊಂಡಿರುವ ತನಿಖಾ ಸಂಸ್ಥೆಗಳು, ಈಗ ಬೇರೊಂದು ಪ್ರಕರಣ ದಾಖಲಿಸಲು ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ಒದಗಿಸುವ ಮೂಲಕ ಅರ್ಜಿದಾರರಿಗೆ ಸುಖಾಸುಮ್ಮನೆ ಕಿರುಕುಳ ನೀಡುತ್ತಿವೆ’ ಎಂದರು.

ದೋಷಪೂರಿತ ಪ್ರಕ್ರಿಯೆ: ‘ವಿವಿಧ ತನಿಖಾ ಸಂಸ್ಥೆಗಳು ಶಿವಕುಮಾರ್ ಅವರನ್ನು 2017ರಿಂದಲೂ ತನಿಖೆಗೆ ಒಳಪಡಿಸಿವೆ. ಆದಾಯ ತೆರಿಗೆ ಇಲಾಖೆ, ಇ.ಡಿ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳಿಂದ ಮಾಹಿತಿ ಸಂಗ್ರಹಿಸಿ, ಪ್ರಾಥಮಿಕ ತನಿಖೆ ನಡೆಸಿ, ಕುಟುಂಬದ ಸದಸ್ಯರೆಲ್ಲರ ಆದಾಯವನ್ನು ಒಟ್ಟಿಗೆ ಸೇರಿಸಿ, ಶಿವಕುಮಾರ್ ಆದಾಯ ಮೀರಿ ಶೇ 44ರಷ್ಟು ಆಸ್ತಿ ಹೊಂದಿದ್ದಾರೆ ಎಂಬ ಸಿಬಿಐ ಆರೋಪ ಕಾನೂನು ಬಾಹಿರ’ ಎಂದು ಆಕ್ಷೇಪಿಸಿದರು.

‘ಭ್ರಷ್ಟ್ರಾಚಾರ ನಿಯಂತ್ರಣ ಕಾಯ್ದೆಯ ಕಲಂ 13 ವ್ಯಕ್ತಿಗತ ಅಪರಾಧವಾಗಿದ್ದು, ಈ ವಿಚಾರದಲ್ಲಿ ಕುಟುಂಬದ ಸದಸ್ಯರ ಆದಾಯ, ಆಸ್ತಿ ಮತ್ತು ವೆಚ್ಚವನ್ನು ತೋರಿಸಲಾಗದು. ಇಡೀ ಪ್ರಕ್ರಿಯೆ ದೋಷಪೂರಿತವಾಗಿದೆ’ ಎಂದರು.

‘ಅರ್ಜಿದಾರರ ವಿರುದ್ಧ ಆದಾಯ ತೆರಿಗೆ, ಇ.ಡಿ, ಸಿಬಿಐ ಪ್ರಕರಣ ದಾಖಲಿಸಿವೆ. ಪ್ರತಿ ಪ್ರಕರಣದಲ್ಲೂ ಅವರು ತಮ್ಮ ರಕ್ಷಣೆಗೆ ನ್ಯಾಯಾಲಯದ ಕದ ತಟ್ಟುವಂತೆ ಮಾಡಲಾಗುತ್ತಿದೆ. ಈ ಮೂಲಕ ಶಿವಕುಮಾರ್ ರಾಜಕೀಯ ಚಟು ವಟಿಕೆಗೆ ತಡೆ ಒಡ್ಡಲಾಗುತ್ತಿದೆ‘ ಎಂದರು. ವಿಚಾರಣೆಯನ್ನು ಡಿ. 2ಕ್ಕೆ ಮುಂದೂಡಿದೆ.

ಪ್ರಕರಣವೇನು?: ‘ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ 13 (2), 13 (1)(ಇ) ಅಡಿಯಲ್ಲಿ ಸಿಬಿಐ 2020ರ ಅ. 3ರಂದು ಪ್ರಕರಣ ದಾಖ ಲಿಸಿದೆ. ‘ಸಿಬಿಐ ದಾಖಲಿಸಿರುವ ಎಫ್‌ಐಆರ್‌ ಕಾನೂನು ಬಾಹಿರವಾಗಿದ್ದು ಇದನ್ನು ರದ್ದು ಗೊಳಿಸಬೇಕು’ ಎಂದು ಶಿವಕುಮಾರ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು