ಬೆಂಗಳೂರು: ಗುತ್ತಿಗೆದಾರರಿಗೆ ಪಾವತಿಸಿರುವ ಬಿಲ್‌ಗಳಲ್ಲಿ ಬಾಕಿ ಉಳಿಸಿಕೊಂಡಿರುವ ಶೇಕಡ 25ರಷ್ಟು ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಬಿಬಿಎಂಪಿ ಗುತ್ತಿಗೆದಾರರ ಸಂಘದ ಸೋಮವಾರದಿಂದ (ಸೆಪ್ಟೆಂಬರ್ 2) ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಲಿದೆ.
ಬಿಬಿಎಂಪಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಶುಕ್ರವಾರ ಸಭೆ ಸೇರಿ, ಎಲ್ಲ ಕಾಮಗಾರಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.
‘2021ರ ಏಪ್ರಿಲ್‌ನಿಂದ ಪಾವತಿಸಲಾಗಿರುವ ಬಿಲ್‌ಗಳಲ್ಲಿ ಶೇ 25ರಷ್ಟನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಈ ಬಾಕಿಯನ್ನು ಬಿಡುಗಡೆ ಮಾಡುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಹಲವು ಬಾರಿ ಮನವಿ ಮಾಡಿಕೊಳ್ಳಲಾಗಿತ್ತು. ಬಾಕಿ ಬಿಡುಗಡೆ ಮಾಡುವ ಆಶ್ವಾಸನೆಯನ್ನು ಅವರು ನೀಡಿದ್ದರೂ, ಅದು ಈಡೇರಿಲ್ಲ. ಹೀಗಾಗಿ, ಕಾಮಗಾರಿ ಸ್ಥಗಿತಗೊಳಿಸಲುಸಭೆಯಲ್ಲಿ ತೀರ್ಮಾನಿಸಲಾಯಿತು’ಎಂದು ಸಂಘದ ಅಧ್ಯಕ್ಷ ಜಿ.ಎಂ. ನಂದಕುಮಾರ್ ತಿಳಿಸಿದರು.
‘ಬೃಹತ್ ರಸ್ತೆಗಳು, ಕೆರೆಗಳು, ರಸ್ತೆ– ಮೂಲಸೌಕರ್ಯ ವಿಭಾಗ, ವಾರ್ಡ್ ಮಟ್ಟದ ಕಾಮಗಾರಿಗಳು, ನಿರ್ವಹಣಾ ಕಾಮಗಾರಿಗಳು, ಬೃಹತ್ ನೀರುಗಾಲುವೆ, ವೈಟ್‌ಟಾಪಿಂಗ್, ಎಲೆಕ್ಟ್ರಿಕಲ್ ವಿಭಾಗ ಸೇರಿ ಚಾಲನೆಯಲ್ಲಿರುವ ಎಲ್ಲ ರೀತಿಯ ಕಾಮಗಾರಿಗಳನ್ನು ಸೆಪ್ಟೆಂಬರ್ 2ರಿಂದ ಸ್ಥಗಿತಗೊಳಿ
ಸಲು 500ಕ್ಕೂ ಹೆಚ್ಚು ಗುತ್ತಿಗೆದಾರರು ಒಕ್ಕೊರಲಿನ ಸಮ್ಮತಿ ನೀಡಿದರು’ ಎಂದು ಮಾಹಿತಿ ನೀಡಿದರು.