ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಕಲಿ ಖಾತೆ ಸೃಷ್ಟಿ ಆರೋಪ: ವರದಿ ಸಲ್ಲಿಸಲು ಬಿಬಿಎಂಪಿಗೆ ಹೈಕೋರ್ಟ್‌ ಆದೇಶ

Published 19 ಜೂನ್ 2024, 23:30 IST
Last Updated 19 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ ಹೆಮ್ಮಿಗೆಪುರದಲ್ಲಿ ಕೆಲವರಿಗೆ ಸರ್ಕಾರದಿಂದ ಮಂಜೂರು ಮಾಡಲಾಗಿದ್ದ ಜಮೀನಿನ ಕುರಿತಂತೆ ನಕಲಿ ಖಾತೆ ಸೃಷ್ಟಿಸಲಾಗಿದೆ’ ಎಂಬ ಆರೋಪದ ಹಿನ್ನೆಲೆಯಲ್ಲಿ ಹೆಮ್ಮಿಗೆಪುರ ವಾರ್ಡ್‌ ಸಂಖ್ಯೆ 198ರಲ್ಲಿರುವ ವಿವಾದಿತ ಸ್ಥಿರಾಸ್ಥಿಯೊಂದರ ಬಗ್ಗೆ ವರದಿ ಸಲ್ಲಸುವಂತೆ ಹೈಕೋರ್ಟ್‌, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರಿಗೆ ಆದೇಶಿಸಿದೆ.

ಈ ಕುರಿತಂತೆ ಸರ್ಕಾರದಿಂದ ಜಮೀನು ಪಡೆದಿರುವ ನರಸಮ್ಮ ಅವರ ಪರವಾಗಿ ಆರ್‌.ದೀಪಕ್‌ (ಜಿಪಿಎ ಪಡೆದಿರುವ) ಸಲ್ಲಿಸಿರುವ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ಪ್ರಸಾದ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಪುಟ್ಟಮ್ಮ ಎಂಬುವರ ಹೆಸರಿಗೆ 22 ಖಾತೆ ವಿತರಿಸಲಾಗಿದೆಯೇ ಎಂಬ ಬಗ್ಗೆ ವರದಿ ಸಲ್ಲಿಸಬೇಕು. ಅಂತೆಯೇ, 22 ಖಾತೆಗಳ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು’ ಎಂದು ಆಯುಕ್ತರಿಗೆ ನಿರ್ದೇಶಿಸಿದೆ.

‘ಪಟ್ಟಣಗೆರೆ ಗ್ರಾಮದಲ್ಲಿನ ಸರ್ವೆ ನಂ.10ರಲ್ಲಿನ 10 ಎಕರೆ ಜಾಗವನ್ನು ಜಿಲ್ಲಾಧಿಕಾರಿ ನರಸಮ್ಮ ಅವರ ಪತಿ ಸಿ.ಎಲ್‌.ಮುನಿಯಪ್ಪ ಸೇರಿದಂತೆ ಒಟ್ಟು 5  ಜನರಿಗೆ 1979ರ ಮೇ 19ರಂದು ಮಂಜೂರು ಮಾಡಿದ್ದರು. ಅದರಲ್ಲಿ ಎರಡು ಎಕರೆ ಜಮೀನು ಮುನಿಯಪ್ಪಗೆ ಮಂಜೂರಾಗಿತ್ತು. 1979ರ ಜುಲೈ 20ರಂದು ಮುನಿಯಪ್ಪ ಹೆಸರಿಗೆ ಸಾಗುವಳಿ ಚೀಟಿಯನ್ನೂ ನೀಡಲಾಗಿದೆ. ಮುನಿಯಪ್ಪ ಮರಣಾನಂತರ ಕಂದಾಯ ದಾಖಲೆಗಳಲ್ಲಿ ಅವರ ಪತ್ನಿ ನರಸಮ್ಮ ಅವರ ಹೆಸರನ್ನು ಸೇರಿಸಲಾಗಿತ್ತು. ಈ ಜಮೀನು ಅವರ ಸ್ವಾಧೀನದಲ್ಲಿದೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

‘ಪಟ್ಟಣಗೆರೆ ಸರ್ವೆ ನಂಬರ್‌ 10ಕ್ಕೆ (ಹೆಮ್ಮಿಗೆಪುರ ವಾರ್ಡ್‌ ನಂಬರ್‌-198ರ ಸ್ಥಿರಾಸ್ತಿ ಸಂಖ್ಯೆ 23/81/10-23) ಸಂಬಂಧಿಸಿದ ಆಸ್ತಿ ಕುರಿತಂತೆ ಲೇಟ್‌ ಮುನಿಯಪ್ಪ ಅವರ ಪತ್ನಿ ಪುಟ್ಟಮ್ಮ ಅವರ ಹೆಸರಿಗೆ 22 ನಕಲಿ ಖಾತೆಗಳನ್ನು ಸೃಷ್ಟಿಸಿ ವಿತರಿಸಲಾಗಿದೆ. ಈ ವಿಚಾರವು 2022ರಲ್ಲಿ ತಿಳಿದು ಬಂದಿದೆ. ಈ ಕುರಿತಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದಾಗ ಪುಟ್ಟಮ್ಮ ಅವರ ಹೆಸರಿನಲ್ಲಿ ಯಾವುದೇ ಖಾತೆ ವಿತರಣೆಯಾಗಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ, ನಕಲಿ ಖಾತೆ ಸೃಷ್ಟಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT