ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 30 ಕೋಟಿ ಮೌಲ್ಯದ 13 ನಿವೇಶನ ಹಂಚಿಕೆ ಅಕ್ರಮ: ಬಿಡಿಎ ಆಂತರಿಕ ತನಿಖೆ

ಬಿಡಿಎ ವಿಚಕ್ಷಣ ದಳದಿಂದ ಆಂತರಿಕ ತನಿಖೆ l ಇಬ್ಬರು ಫಲಾನುಭವಿಗಳ ವಿರುದ್ಧ ಎಫ್‌ಐಆರ್
Last Updated 2 ಡಿಸೆಂಬರ್ 2022, 20:42 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಅಭಿವೃದ್ಧಿ ಪಡಿಸಿರುವ ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯಲ್ಲಿನ 13 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದ್ದು, ಈ ಸಂಬಂಧ ಶೇಷಾದ್ರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಿವೇಶನ ಹಂಚಿಕೆಯಲ್ಲಾದ ಅಕ್ರಮವನ್ನು ಬಿಡಿಎ ವಿಚಕ್ಷಣ ದಳ–ವಿಶೇಷ ಕಾರ್ಯಪಡೆ ಅಧಿಕಾರಿಗಳು
ಪತ್ತೆ ಮಾಡಿದ್ದಾರೆ. ಅವರು ನೀಡಿರುವ ದೂರು ಆಧರಿಸಿ, ಆರೋಪಿ ಕಮಲಾಬಾಯಿ ಹಾಗೂ ಅವರ ಮಗ ಕೃಷ್ಣರಾವ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ದಾಖಲೆಗಳ ಪರಿಶೀಲನೆ ನಡೆಸಿ ಆರೋಪಿಗಳಿಗೆ ನೋಟಿಸ್ ನೀಡಿ, ತನಿಖೆ ಮುಂದುವರಿಸಲಾಗುವುದು’ ಎಂದು ಪೊಲೀಸ್ ಮೂಲಗಳು
ಹೇಳಿವೆ.

‘ಬಿಡಿಎ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿದ್ದ ಆರೋಪಿಗಳು, ಸುಮಾರು ₹ 30 ಕೋಟಿ ಮೌಲ್ಯದ 13 ಪರ್ಯಾಯ ನಿವೇಶನಗಳನ್ನು ತಮ್ಮ ಹೆಸರಿಗೆ ಹಂಚಿಕೆ ಮಾಡಿಸಿಕೊಂಡಿ
ದ್ದರು. ಆರೋಪಿಗಳ ಕೃತ್ಯದ ಬಗ್ಗೆ ಬಿಡಿಎ ವಿಚಕ್ಷಣ ದಳ–ವಿಶೇಷ ಕಾರ್ಯಪಡೆಗೆ ಇತ್ತೀಚೆಗೆ ಮಾಹಿತಿ ಲಭ್ಯವಾಗಿತ್ತು. ದಾಖಲೆಗಳ ಪರಿಶೀಲನೆ ನಡೆಸಿದಾಗಲೇ ಆರೋಪಿಗಳು ಸಿಕ್ಕಿಬಿದ್ದರು’ ಎಂದು ಮೂಲಗಳು ತಿಳಿಸಿವೆ.

ಅಕ್ರಮ ಹೇಗೆ?: ‘ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಗ್ರಾಮದ ಸರ್ವೆ ನಂಬರ್ 146ರಲ್ಲಿ 6 ಎಕರೆ 32 ಗುಂಟೆ ಜಮೀನನ್ನು ರಾಜಾಜಿನಗರ ಕೈಗಾರಿಕಾ ಉಪನಗರ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಜೋಡಿದಾರ್ ನಂಜಪ್ಪ ಎಂಬುವವರು ಅಧಿಕೃತ ಖಾತೆದಾರರಾಗಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘1962ರ ನವೆಂಬರ್ 5ರಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಜಮೀನು ಹಂಚಿಕೆ ಮಾಡಲಾಗಿತ್ತು. ಜಮೀನು ಖರೀದಿ ಪ್ರಕ್ರಿಯೆ ಮುಗಿಸಿದ್ದ ಸಮಿತಿ, ಹಣವನ್ನೂ ಪಾವತಿಸಿತ್ತು.’

‘6 ಎಕರೆ 32 ಗುಂಟೆ ಪೈಕಿ, 32 ಗುಂಟೆಯನ್ನು ಎಂ.ಎಸ್ ರಾಮರಾವ್ ಎಂಬುವರು 1963 ಫೆಬ್ರುವರಿ 21ರಂದು ಹಿಂದಿನ ಭೂ ಮಾಲೀಕರಾದ ಜೋಡಿದಾರ್ ನಂಜಪ್ಪ ಅವರಿಂದ ಅಕ್ರಮವಾಗಿ ಖರೀದಿ ಮಾಡಿದ್ದರು. ಇದು ಕಾನೂನುಬಾಹಿರ ಖರೀದಿಯಾಗಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘1996ರ ಡಿಸೆಂಬರ್ 5ರಂದು ರಾಮರಾವ್ ತೀರಿಕೊಂಡಿದ್ದರು. ಇದಾದ ನಂತರ ಪತ್ನಿ ಕಮಲಾಬಾಯಿ ಹಾಗೂ ಮಗ ಕೃಷ್ಣರಾವ್, ಅಕ್ರಮ ಹಣ ಸಂಪಾದಿಸುವ ಉದ್ದೇಶದಿಂದ ತಮ್ಮದೇ ಜಮೀನು ಸ್ವಾಧೀನವಾಗಿರುವುದಾಗಿ ಬಿಡಿಎಗೆ ಸುಳ್ಳು ಮಾಹಿತಿ ನೀಡಿದ್ದರು. ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯ 13 ಪರ್ಯಾಯ
ನಿವೇಶನಗಳನ್ನು ಹಂಚಿಕೆ ಮಾಡಿಸಿಕೊಂಡಿದ್ದರು. ಈ ಮೂಲಕ ಇವರಿಬ್ಬರು ಅಕ್ರಮ ಫಲಾನುಭವಿಗಳಾಗಿರುವುದು ಆಂತರಿಕ ತನಿಖೆಯಿಂದ ಗೊತ್ತಾಗಿರುವುದಾಗಿ ಬಿಡಿಎ ವಿಚಕ್ಷಣ ದಳ–ವಿಶೇಷ ಕಾರ್ಯಪಡೆ ಅಧಿಕಾರಿಗಳು ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ವಿವರಿಸಿವೆ.

ಮೇಲ್ಮನವಿ ಸಲ್ಲಿಕೆಗೆ 10 ವರ್ಷ ವಿಳಂಬ: ಹೈಕೋರ್ಟ್ ತರಾಟೆ

ಬೆಂಗಳೂರು: ಬೆಂಗಳೂರು ಉತ್ತರ ವ್ಯಾಪ್ತಿಯಲ್ಲಿನ ಎಚ್‌ಆರ್‌ಬಿಆರ್(ಹೆಣ್ಣೂರು ರೋಡ್ ಬಾಣಸವಾಡಿ ರೋಡ್) ಲೇಔಟ್ ನಿರ್ಮಾಣಕ್ಕೆ ಮೀಸಲಿರಿಸಿದ್ದ ಜಾಗವೊಂದರ ಭೂ ಸ್ವಾಧೀನ ಅಧಿಸೂಚನೆ ರದ್ದುಪಡಿಸಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಹೊರಡಿಸಿದ್ದ ತೀರ್ಪನ್ನು 10 ವರ್ಷಗಳ ನಂತರ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು (ಬಿಡಿಎ) ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಎಚ್‌ಆರ್‌ಬಿಆರ್ ಲೇಔಟ್ 3ನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿದ್ದ ಚೋಳನಾಯಕನಹಳ್ಳಿಯ ಸರ್ವೆ ನಂಬರ್ 47ರಲ್ಲಿನ 17.5 ಗುಂಟೆ ಜಾಗಕ್ಕೆ ಸಂಬಂಧಿಸಿದ ಭೂ ಸ್ವಾಧೀನದ ಅಂತಿಮ ಅಧಿಸೂಚನೆ ರದ್ದುಪಡಿಸಿ 2012ರ ಫೆಬ್ರುವರಿ 22ರಂದು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಬಿಡಿಎ ಆಯುಕ್ತರು 2022ರ ಫೆಬ್ರುವರಿ 25ರಂದು ಮೇಲ್ಮನವಿ ಸಲ್ಲಿಸಿದ್ದರು.

ಈ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ಹತ್ತು ವರ್ಷಗಳಷ್ಟು ತಡವಾಗಿ ಮೇಲ್ಮನವಿ ಸಲ್ಲಿಸಿದ ಆಯುಕ್ತರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ‘ವಿಳಂಬಕ್ಕೆ ಬಿಡಿಎ ಸೂಕ್ತ ಕಾರಣ ನೀಡಿಲ್ಲ’ ಎಂದು ಮೇಲ್ಮನವಿ ವಜಾಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT