ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

102 ಬಾರಿ ರಕ್ತದಾನ ಮಾಡಿದ ಎಂಜಿನಿಯರ್‌

55ನೇ ವಯಸ್ಸಿನಲ್ಲೂ ಪರರಿಗೆ ನೆರವಾಗುತ್ತಿರುವ ಕಾಮಾಚಿದುರೈ
Last Updated 14 ಜೂನ್ 2021, 19:53 IST
ಅಕ್ಷರ ಗಾತ್ರ

ಬೆಂಗಳೂರು: ರಕ್ತದಾನದ ಮಹತ್ವದ ಬಗ್ಗೆ ಸರ್ಕಾರ, ಸಂಘ ಸಂಸ್ಥೆಗಳು ಎಷ್ಟೇ ಜಾಗೃತಿ ಮೂಡಿಸಿದರೂ ಸ್ವಯಂಪ್ರೇರಿತವಾಗಿ ರಕ್ತ ನೀಡುವವವರ ಸಂಖ್ಯೆ ಅಷ್ಟಕ್ಕಷ್ಟೇ. ಆದರೆ, ನಗರದ ಸಿವಿಲ್‌ ಎಂಜಿನಿಯರ್‌ ಆರ್‌.ಕಾಮಾಚಿದುರೈ ಒಟ್ಟು 102 ಬಾರಿ ರಕ್ತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ. ರಕ್ತ ನೀಡಿ ಪರರ ಜೀವ ಉಳಿಸಲು ನೆರವಾಗುತ್ತಿರುವ ಅವರೀಗ 55ರ ಹರೆಯದ ‘ಚಿರ ಯುವಕ’.

ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಅವರು ಎಚ್‌ಎಎಲ್‌ನ ಹೊಸ ತಿಪ್ಪಸಂದ್ರ ರಸ್ತೆ ಬಳಿಯ ಬಿಎಂಎಸ್‌ಟಿ ಸಂಸ್ಥೆಯಲ್ಲಿ ಸೋಮವಾರ ರಕ್ತದಾನ ಮಾಡಿದರು. ತಮಿಳುನಾಡಿನವರಾದ ಅವರು 35 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಸ್ತುತ ಜೀವನ್‌ಬಿಮಾ ನಗರ ನಿವಾಸಿ.

‘18 ವರ್ಷ ತುಂಬುತ್ತಿದ್ದಂತೆಯೇ ರಕ್ತದಾನ ಆರಂಭಿಸಿದ್ದೇನೆ. ಎನ್‌ಸಿಸಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ ನನಗೆ ಇದರ ಮಹತ್ವ ಮನದಟ್ಟಾಗಿತ್ತು. ಆ ಬಳಿಕ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುತ್ತಾ ಬಂದಿದ್ದೇನೆ. ಅನಿವಾರ್ಯ ಕಾರಣಗಳಿಲ್ಲದೇ ಒಮ್ಮೆಯೂ ಈ ಪರಿಪಾಠ ತಪ್ಪಿಸಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಸ್ಪತ್ರೆಯಲ್ಲಿ ಎಷ್ಟೊ ಮಂದಿ ಸಕಾಲದಲ್ಲಿ ರಕ್ತ ಸಿಗದೆ ಜೀವವನ್ನೇ ಕಳೆದುಕೊಳ್ಳುತ್ತಾರೆ. ರಕ್ತ ದಾನದಿಂದ ನಮಗೆ ಯಾವುದೇ ನಷ್ಟವೂ ಇಲ್ಲ. ದಾನ ಮಾಡಿದಷ್ಟು ಪ್ರಮಾಣದ
ರಕ್ತ ಕೆಲವೇ ತಿಂಗಳುಗಳಲ್ಲಿ
ದೇಹದಲ್ಲಿ ಮತ್ತೆ ಉತ್ಪತ್ತಿಯಾಗುತ್ತದೆ. ಇಷ್ಟೊಂದು ಬಾರಿ ರಕ್ತದಾನ ಮಾಡಿದರೂ ನನಗೆ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ’ ಎಂದರು.

‘ಯುವಜನರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಬೇಕು. ವಯಸ್ಸಾದಂತೆ ಮಧುಮೇಹ, ಅಧಿಕ ರಕ್ತದೊತ್ತಡದಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇನ್ನೊಬ್ಬರ ಜೀವ ಉಳಿಸಲು ನೆರವಾಗುವ ಸಂತೃಪ್ತ ಭಾವಕ್ಕೆ ಬೆಲೆ ಕಟ್ಟಲಾಗದು’ ಎಂದರು.

‘ಕಾಮಾಚಿ ದುರೈ ಅವರ ಸಮಾಜ ಸೇವೆ ರಕ್ತದಾನಕ್ಕೆ ಸಿಮಿತವಾಗಿಲ್ಲ. ಅವರು ಜನಾಗ್ರಹ ಸಂಸ್ಥೆಯ ಮೂಲಕ ಸಮುದಾಯ ಪೊಲೀಸಿಂಗ್‌ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಜನಜಾಗೃತಿ ಕಾರ್ಯಕ್ರಮಗಳಲ್ಲೂ ಕೈಜೋಡಿಸುತ್ತಾರೆ. ಅವರ ಕುಟುಂಬದ ಸದಸ್ಯರೂ ಆಗಾಗ ರಕ್ತದಾನ ಮಾಡುತ್ತಾ ಬಂದಿದ್ದಾರೆ’ ಎಂದು ಸಂಸ್ಥೆಯ ಮಹಾಲಕ್ಷ್ಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT