ಗುರುವಾರ , ಮಾರ್ಚ್ 4, 2021
18 °C
20ಕ್ಕೂ ಹೆಚ್ಚು ಫ್ಲ್ಯಾಟ್‌ಗಳ ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್‌ಟಿಪಿ ನಿರ್ಮಾಣ ವಿಚಾರ

ದಂಡವೂ ಇಲ್ಲ; ಕ್ರಮವೂ ಇಲ್ಲ!

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ನೀರಿನ ಅಭಾವ ಸೃಷ್ಟಿಯಾಗುತ್ತಿದೆ. ನೀರಿನ ಪುನರ್‌ ಬಳಕೆಗೆಂದೇ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣ ಘಟಕ (ಎಸ್‌ಟಿಪಿ) ನಿರ್ಮಾಣ ಮಾಡುವುದನ್ನು ಸರ್ಕಾರ ಕಡ್ಡಾಯ ಮಾಡಿದೆ. ಈವರೆಗೆ, ಎಸ್‌ಟಿಪಿ ನಿರ್ಮಾಣ ಮಾಡದವರ ಮೇಲೆ ದಂಡ ಹಾಕಲಾಗುತ್ತಿತ್ತು. ಆದರೆ, ದಂಡ ಹಾಕುವ ನಿರ್ಧಾರವನ್ನು ಸದ್ದಿಲ್ಲದೆ ಹಿಂತೆಗೆದುಕೊಳ್ಳಲಾಗಿದೆ.

20 ವಸತಿಗಳು ಅಥವಾ 2 ಸಾವಿರ ಚದರ ಮೀಟರ್‌ ಮತ್ತು ಹೆಚ್ಚಿನ ವಿಸ್ತೀರ್ಣವಿರುವ ವಸತಿ ಸಂಕೀರ್ಣಗಳು, 2 ಸಾವಿರ ಚದರ ಮೀಟರ್‌ ಮತ್ತು ಹೆಚ್ಚಿನ ವಿಸ್ತೀರ್ಣದ ವಾಣಿಜ್ಯ ಕಟ್ಟಡಗಳು, 5 ಸಾವಿರ ಚದರ ಮೀಟರ್‌ ಮತ್ತು ಹೆಚ್ಚಿನ ವಿಸ್ತೀರ್ಣದ ಕಟ್ಟಡ ಇರುವ ವಿದ್ಯಾಸಂಸ್ಥೆಗಳು ಕಡ್ಡಾಯವಾಗಿ ಎಸ್‌ಟಿಪಿ ಅಳವಡಿಸಿಕೊಳ್ಳಬೇಕು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ 2016ರ ಜನವರಿ 19ರಂದು ಅಧಿಸೂಚನೆ ಹೊರಡಿಸಿತ್ತು.

2016ರ ಜನವರಿ ನಂತರ ನಿರ್ಮಾಣಗೊಂಡ ಕಟ್ಟಡಗಳಲ್ಲಿ ಎಸ್‌ಟಿಪಿ ಅಳವಡಿಸಿಕೊಂಡಿದ್ದರೆ ಮಾತ್ರ ನೀರು ಹಾಗೂ ಒಳಚರಂಡಿ ಸಂಪರ್ಕ ಮಂಜೂರು ಮಾಡಲಾಗುತ್ತದೆ. ಒಂದು ವೇಳೆ ಸ್ಥಾಪಿಸದೆ ಇದ್ದಲ್ಲಿ ಮಂಡಳಿಯ ನಿಯಮ ನಾಲ್ಕರ ಪ್ರಕಾರ, ಗೃಹ ಕಟ್ಟಡ
ಗಳಿಗೆ ಮೊದಲ ಮೂರು ತಿಂಗಳು ನೀರು ಮತ್ತು ಒಳಚರಂಡಿ ಸಂಪರ್ಕದ ಶೇ 25ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾ
ಗುತ್ತದೆ. ಆ ಬಳಿಕ ಸ್ಥಾಪಿಸುವವರೆಗೆ ಶೇ 50 ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. 

‘ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಎಸ್‌ಟಿಪಿ ಅಳವಡಿಸದವರಿಂದ ಈವರೆಗೆ ₹15 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಆದರೆ, ಈಗ ದಂಡ ಹಾಕುವುದನ್ನು ನಿಲ್ಲಿಸಲಾಗಿದೆ’ ಎಂದು ಜಲಮಂಡಳಿಯ ಮುಖ್ಯ ಎಂಜಿನಿಯರ್‌ (ನಿರ್ವಹಣೆ) ಬಿ.ಸಿ. ಗಂಗಾಧರ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಿಯಾಯಿತಿ ಕೊಡಿ, ಎಸ್‌ಟಿಪಿ ಅಳವಡಿಕೆಗೆ ಜಾಗ ಇಲ್ಲ ಎಂಬ ನೂರೆಂಟು ನೆಪ ಹೇಳುತ್ತಾರೆ. ನಿರೀಕ್ಷಿತ ಪ್ರಮಾಣದಲ್ಲಿ ದಂಡ ವಸೂಲಿಯೂ ಆಗುತ್ತಿರಲಿಲ್ಲ. ಹೀಗಾಗಿ, ದಂಡ ವಸೂಲಿ ನಿರ್ಧಾರ ಹಿಂತೆಗೆದುಕೊಳ್ಳಲಾಗಿದೆ’ ಎಂದು ಅವರು ಹೇಳಿದರು. 

ನಗರದಲ್ಲಿ 20ಕ್ಕೂ ಹೆಚ್ಚು ಫ್ಲ್ಯಾಟ್‌ಗಳಿರುವ 521 ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಮಾತ್ರ ಎಸ್‌ಟಿಪಿ ಅಳವಡಿಸಲಾಗಿದೆ.

‘ಎಸ್‌ಟಿಪಿ ಅಳವಡಿಕೆಗೆ ಕಾನೂನು ರೂಪಿಸಲಾಗುವುದು. ಇಲ್ಲದಿದ್ದರೆ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡುವುದಿಲ್ಲ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಜಿ. ಪರಮೇಶ್ವರ ಪದೇ ಪದೇ ಹೇಳುತ್ತಾರೆ. ಅಲ್ಲದೆ, ನೀರಿನ ಕೊರತೆ ಇರುವ ಕಾರಣಕ್ಕೆ ಮುಂದಿನ ಐದು ವರ್ಷ ನಗರದಲ್ಲಿ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ನಿರ್ಮಾಣಕ್ಕೆ ಅನುಮತಿ ನೀಡದಿರಲು ಚಿಂತನೆ ನಡೆಸಲಾಗಿದೆ ಎಂದೂ ಹೇಳಿದ್ದಾರೆ. ಆದರೆ, ಇತ್ತ, ಎಸ್‌ಟಿಪಿ ಅಳವಡಿಸಿಕೊಳ್ಳದವರಿಗೆ ದಂಡ ಹಾಕುವ ನಿರ್ಧಾರವನ್ನು ಹಿಂತೆಗೆದುಕೊಳ್ಳಲಾಗಿದೆ. 

‘ದಂಡ ವಿಧಿಸುತ್ತಿಲ್ಲ. ಆದರೆ, ಎಸ್‌ಟಿಪಿ ಅಳವಡಿಸಿಕೊಂಡಿದ್ದರೆ ಮಾತ್ರ ನೀರು ಹಾಗೂ ಒಳಚರಂಡಿ ಸಂಪರ್ಕ ಮಂಜೂರು ಮಾಡುತ್ತೇವೆ. ಇಲ್ಲದಿದ್ದರೆ ಪರವಾನಗಿ ನೀಡುವುದೇ ಇಲ್ಲ’ ಎಂದು ಗಂಗಾಧರ ಸ್ಪಷ್ಟಪಡಿಸಿದರು.

‘ಸ್ಮಾರ್ಟ್‌ ಮೀಟರ್‌ ಅಳವಡಿಕೆ’
‘ಅ‍ಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಸ್ಮಾರ್ಟ್‌ ಮೀಟರ್ ಅಳವಡಿಕೆಗೆ ಚಿಂತನೆ ನಡೆಸಿದ್ದೇವೆ. ಶೀಘ್ರದಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ. ಸ್ಮಾರ್ಟ್‌ ಮೀಟರ್ ಅಳವಡಿಕೆಯಿಂದ ನೀರಿನ ಅತಿಯಾದ ಬಳಕೆಗೆ ಕಡಿವಾಣ ಹಾಕಬಹುದು’ ಎಂದು ಗಂಗಾಧರ ತಿಳಿಸಿದರು.

‘ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕುರಿತು ಅಪಾರ್ಟ್‌ಮೆಂಟ್‌ ನಿವಾಸಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಜಲಮಂಡಳಿ ಮಾಡುತ್ತಿದೆ. ನಿವಾಸಿಗಳನ್ನು ಒಂದೆಡೆ ಸೇರಿಸಿ, ತಜ್ಞರಿಂದ ಸಲಹೆ ಕೊಡಿಸಲು ಕಾರ್ಯಾಗಾರ ಆಯೋಜಿಸಲಾಗುತ್ತದೆ’ ಎಂದು ತಿಳಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು