ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಯುವ ನದಿಗಳ ಬದುಕಿಸಲಿದೆ ಸಾವಯವ ಕೃಷಿ

ಅರ್ಕಾವತಿ– ಕುಮುದ್ವತಿ ಪುನರುಜ್ಜೀವನ
Last Updated 26 ಜುಲೈ 2019, 19:26 IST
ಅಕ್ಷರ ಗಾತ್ರ

ಬೆಂಗಳೂರು: ‘ತಿಪ್ಪಗೊಂಡನಹಳ್ಳಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸದ ಹೊರತು ಹಾಗೂ ನೀರಿನ ನಿರ್ವಹಣೆ ಬದಲಾಗದ ಹೊರತು ಅರ್ಕಾವತಿ ಮತ್ತು ಕುಮುದ್ವತಿ ನದಿಗಳ ಪುನರುಜ್ಜೀವನ ಕನಸಿನ ಮಾತು.’

ಈ ನದಿಗಳನ್ನು ಉಳಿಸಿಕೊಳ್ಳುವ ಆಂದೋಲನದಲ್ಲಿ ಸಕ್ರಿಯವಾಗಿದ್ದ ಕಾರ್ಯಕರ್ತರು ಹಾಗೂ ವಿಜ್ಞಾನಿಗಳ ಸ್ಪಷ್ಟ ಅಭಿಪ್ರಾಯವಿದು.

‘ಈ ನದಿಗಳು ಬತ್ತುವುದರಲ್ಲಿ ನಗರೀಕರಣ ಎಷ್ಟು ಪರಿಣಾಮ ಬೀರಿದೆಯೋ, ಬದಲಾದ ಕೃಷಿ ಪದ್ಧತಿಯ ಕೊಡುಗೆಯೂ ಅಷ್ಟೇ ಇದೆ. ಈ ಜಲಾನಯನ ಪ್ರದೇಶದಲ್ಲಿ ಸಾವಯವ ಕೃಷಿಯ ಮೊರೆ ಹೋದರೆ ನದಿ ಉಳಿಸಿಕೊಳ್ಳಲು ಖಂಡಿತಾ ಸಾಧ್ಯ’ ಎಂದು ಆಶಾವಾದ ವ್ಯಕ್ತಪಡಿಸುತ್ತಾರೆ ಅರ್ಕಾವತಿ ನದಿ ಪುನಶ್ಚೇತನ ಹೋರಾಟದ ರೂವಾರಿಗಳಲ್ಲೊಬ್ಬರಾದ ಜನಾರ್ದನ ಕೆಸರುಗದ್ದೆ.

ತಿಪ್ಪಗೊಂಡನಹಳ್ಳಿ ಜಲಾಶಯದ ಒಳಹರಿವು ಹೆಚ್ಚಿಸುವ, ಅರ್ಕಾವತಿ ಮತ್ತು ಕುಮುದ್ವತಿ ನದಿಗಳನ್ನು ರಕ್ಷಿಸುವ ಉದ್ದೇಶದಿಂದ ಅರಣ್ಯ ಮತ್ತು ಪರಿಸರ ಇಲಾಖೆಯು 2003ರಲ್ಲಿ ಹೊರಡಿಸಿದ್ದ ಅಧಿಸೂಚನೆಯ ಪ್ರಕಾರ ವಲಯ–1ರಲ್ಲಿ ಸಾವಯವ ಕೃಷಿಗೆ ಉತ್ತೇಜನ ನೀಡಬೇಕು. ಕೃಷಿಗೆ ಜೈವಿಕ ಗೊಬ್ಬರ ಹಾಗೂ ಜೈವಿಕ ಕೀಟನಾಶಕಗಳನ್ನೇ ಬಳಸಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿತ್ತು. 2003ರ ಬಳಿಕ ನಿರ್ಮಾಣ ಚಟುವಟಿಕೆ ಮೇಲೆ ಸ್ವಲ್ಪಮಟ್ಟಿನ ನಿಯಂತ್ರಣ ಬಿದ್ದಿರುವುದು ನಿಜ. ಆದರೆ, ಕೃಷಿ ವಿಚಾರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬುದು ಹೋರಾಟಗಾರರ ಅಂಬೋಣ.

‘ಹೆಚ್ಚು ನೀರನ್ನು ಬಯಸುವ ರಾಸಾಯನಿಕಯುಕ್ತ ಕೃಷಿ ಪದ್ಧತಿಯನ್ನೇ ಈಗಲೂ ಮುಂದುವರಿಸಲಾಗುತ್ತಿದೆ. ಅದಕ್ಕಿಂತಲೂ ಹೆಚ್ಚಾಗಿ ಕೃಷಿ ಸಲುವಾಗಿ ಕೊಳವೆಬಾವಿಗಳನ್ನು ಬೇಕಾಬಿಟ್ಟಿ ಕೊರೆಯಲಾಗುತ್ತಿದೆ. ಭೂಮಿಗೆ ನೀರು ಇಂಗಿಸುವ ಸಲುವಾಗಿ ಕೆರೆ ಕುಂಟೆಗಳನ್ನು ಅಭಿವೃದ್ಧಿಪಡಿಸಿರುವ ಅಲ್ವಸ್ವಲ್ಪ ಪ್ರಯತ್ನಗಳೆಲ್ಲವೂ ಇದರಿಂದಾಗಿ ವ್ಯರ್ಥವಾಗುತ್ತಿವೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಜನಾರ್ದನ ಕೆಸರುಗದ್ದೆ.

‘ನದಿ ಮತ್ತೆ ಜೀವಕಳೆ ಪಡೆಯಬೇಕಾದರೆ ಮೊದಲು ಈ ಜಲಾನಯನ ಪ್ರದೇಶದಲ್ಲಿ ಕೃಷಿ ಪದ್ಧತಿ, ಬೆಳೆ ಪದ್ಧತಿ ಹಾಗೂ ನೀರಾವರಿ ಪದ್ಧತಿಯನ್ನು ಬದಲಾಯಿಸಬೇಕು. ಜಲಕಾಯಗಳ ಪುನಃಶ್ಚೇತನಕ್ಕೆ ಏನಿದ್ದರೂ ನಂತರದ ಆದ್ಯತೆ ನೀಡಬೇಕು. ಆದರೆ, ಸರ್ಕಾರ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದೆ’ ಎಂದು ಅವರು ತಿಳಿಸಿದರು.

‘2013–14ರಲ್ಲಿ ಅರ್ಕಾವತಿ ಪುನಶ್ಚೇತನಕ್ಕೆ ₹ 23 ಕೋಟಿಗಳಷ್ಟು ಅನುದಾನವನ್ನು ಸರ್ಕಾರ ಮಂಜೂರು ಮಾಡಿತ್ತು. ಅದನ್ನು ಬಳಸಿ, ಕಾವೇರಿ ನೀರಾವರಿ ನಿಗಮದ ಮೂಲಕ ಕೆರೆಗೆ ನೀರು ಹರಿಯುವ ಕಾಲುವೆಗಳನ್ನು ದುರಸ್ತಿಪಡಿಸಲಾಯಿತು. ಅನೇಕ ಕಡೆ ಈ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ.ಈ ಕಾರ್ಯದಲ್ಲಿ ಜನರು ಒಳಗೊಳ್ಳುವಂತೆ ಮಾಡುವ ಮೂಲಕ, ಅವರಲ್ಲೂ ನದಿ ಪುನಃಶ್ಚೇತನದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕಿತ್ತು. ಅದನ್ನು ಮಾಡಲೇ ಇಲ್ಲ. 2014ರ ಬಳಿಕ ಜಿಲ್ಲಾಡಳಿತದ ವತಿಯಿಂದ ಕೆಲವು ಕೆರೆಗಳನ್ನು ದುರಸ್ತಿಪಡಿಸಿದ್ದು ಬಿಟ್ಟರೆ ಈ ಬಗ್ಗೆ ಯಾವುದೇ ಪ್ರಯತ್ನ ನಡೆದಿಲ್ಲ’ ಎಂದರು.

‘ಸ್ವಯಂಸೇವಾ ಸಂಸ್ಥೆಗಳು ಜಾಗೃತಿ ಮೂಡಿಸಿದ್ದರಿಂದ ಜಲಾನಯನ ಪ್ರದೇಶಗಳ ಕೆಲವು ಹಳ್ಳಿಗಳಲ್ಲಾದರೂ ಈ ನದಿಗಳನ್ನು ಉಳಿಸಬೇಕೆಂಬ ಕಾಳಜಿ ಮೂಡಿದೆ. ಇಲ್ಲಿ ಶೇ 40ರಷ್ಟು ಕೃಷಿ ಪ್ರದೇಶದಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಆದರೆ, ಅವುಗಳಿಗೂ ಬಳಕೆಯಾಗುತ್ತಿರುವುದು ಕೊಳವೆಬಾವಿ ನೀರು. ದುರಸ್ತಿ ಕಂಡ ಕೆರೆಗಳಲ್ಲಿ ನಿಲ್ಲುವ ನೀರು ಕೊಳವೆಬಾವಿಗಳಿಂದ ಎತ್ತುವ ಅಂತರ್ಜಲವನ್ನು ತುಂಬಿಸುವಷ್ಟೂ ಸಾಲುತ್ತಿಲ್ಲ. ಸಾಮರ್ಥ್ಯಕ್ಕಿಂತ ಹೆಚ್ಚು ನೀರೆತ್ತುತ್ತಾ ಹೋದರೆ, ನದಿಗಳಲ್ಲಿ ಮತ್ತೆ ಜೀವಕಳೆ ಕಾಣುವುದು ಕಷ್ಟ. ಇಲ್ಲಿನ ನೀರಿನ ಲಭ್ಯತೆ ನೋಡಿಕೊಂಡು ಕಡಿಮೆ ನೀರು ಬಳಸುವ ಬೆಳೆಗಳನ್ನು ಮಾತ್ರ ಬೆಳೆಸಬೇಕು’ ಎಂದು ಸಲಹೆ ನೀಡಿದರು.

‘ಮಳೆ ಕಡಿಮೆ ಆಗಿಲ್ಲ’

ಈಗಲೂ ಈ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿಲ್ಲ. 10 ವರ್ಷಗಳ ಸರಾಸರಿ ಮಳೆಯನ್ನು ನೋಡಿದರೆ ಈ ಅಂಶ ಸ್ಪಷ್ಟವಾಗುತ್ತದೆ. 2015ರಲ್ಲಿ ಎಂಪ್ರಿ ಸಂಸ್ಥೆ ನೀಡಿದ ವರದಿಯಲ್ಲೂ ಇದನ್ನು ಸ್ಪಷ್ಟಪಡಿಸಿದೆ.

‘ಈ ಜಲಾನಯನ ಪ್ರದೇಶದಲ್ಲಿ ವರ್ಷಕ್ಕೆ ಸರಾಸರಿ 800 ಮಿ.ಮೀ ಮಳೆ ಬೀಳುತ್ತದೆ. ಆದರೆ, 1200 ಮಿ.ಮೀ.ಗೂ ಹೆಚ್ಚು ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಈ ಪರಿಪಾಠ ಬದಲಾಗಬೇಕು. ಕೃಷಿಗೆ ಇರಲಿ ಅಥವಾ ಗೃಹಬಳಕೆಗೇ ಇರಲಿ ನೀರನ್ನು ಮಿತವಾಗಿ ಬಳಸಬೇಕು’ ಎಂದು ಸಲಹೆ ನೀಡುತ್ತಾರೆ ಜನಾರ್ದನ್‌.

‘ಇಟ್ಟ ಹೆಜ್ಜೆ ಹಿಂದಕ್ಕಿಡುವುದು ಅಪಾಯಕಾರಿ’

‘2003ರ ಅಧಿಸೂಚನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುತ್ತಿದ್ದರೆ, ನದಿಗಳ ಪುನಶ್ಚೇತನದ ನಿಟ್ಟಿನಲ್ಲಿ 16 ವರ್ಷಗಳಲ್ಲಿ ಸ್ವಲ್ಪವಾದರೂ ಸಕಾರಾತ್ಮಕ ಬದಲಾವಣೆ ಕಾಣಲು ಸಾಧ್ಯವಿತ್ತು. ಆದರೆ, ಹಾಗಾಗಿಲ್ಲ. ಸರ್ಕಾರ 16 ವರ್ಷಗಳಲ್ಲಿ ಯಾವುದೇ ಹೆಜ್ಜೆ ಇಟ್ಟಿಲ್ಲ ನಿಜ. ಆದರೆ, ಇಟ್ಟಿರುವ ಹೆಜ್ಜೆಯನ್ನು ಕೂಡ ಹಿಂದಕ್ಕೆ ಪಡೆಯುವುದು ಇನ್ನೂ ಅಪಾಯಕಾರಿ. ನದಿಯ ಸಂರಕ್ಷಿತ ಪ್ರದೇಶದ ವ್ಯಾಪ್ತಿಯನ್ನು 1 ಕಿ.ಮೀ.ನಿಂದ 500 ಮೀ.ಗೆ ಇಳಿಸುವ ನಿರ್ಧಾರಕ್ಕೆ ಭವಿಷ್ಯದಲ್ಲಿ ಭಾರಿ ಬೆಲೆ ತೆರಬೇಕಾದೀತು’ ಎನ್ನುತ್ತಾರೆ ಯುವ ಸಂಚಲನದ ಅಧ್ಯಕ್ಷ ಚಿದಾನಂದ ಮೂರ್ತಿ.

ಕಾಂಗ್ರೆಸ್‌ ಮುಖಂಡರಿಂದಲೇ ಆಕ್ಷೇಪ

ಅರ್ಕಾವತಿ ಹಾಗೂ ಕುಮುದ್ವತಿ ನದಿಗಳ ಸಂರಕ್ಷಣಾ ಪ್ರದೇಶವನ್ನು ನದಿಗಳ ತೀರದಿಂದ 500 ಮೀಟರ್‌ಗೆ ಕುಗ್ಗಿಸಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಚಂದ್ರಶೇಖರ್ ಹೇಳಿದ್ದಾರೆ.

ಯಾವುದೇ ಕಾರ್ಖಾನೆ, ಶಿಕ್ಷಣ ಸಂಸ್ಥೆ, ಆಸ್ಪತ್ರೆ ಹಾಗೂ ಇತರ ಸಂಸ್ಥೆಗಳು ಈ ನದಿಗಳ ತೀರದಿಂದ ಕನಿಷ್ಠ 1 ಕಿ.ಮೀ ದೂರವಿರಬೇಕು ಎಂದು ಅರಣ್ಯ ಇಲಾಖೆಯ ಅಂಗ ಸಂಸ್ಥೆಯಾಗಿರುವ ‘ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ’ ಶಿಫಾರಸು ಮಾಡಿತ್ತು. ಸರ್ಕಾರ ಈಗ ತರಾತುರಿಯಲ್ಲಿ ಇದನ್ನು 500 ಮೀಟರ್‌ಗೆ ಕುಗ್ಗಿಸಿದೆ. ಈ ನಿರ್ಧಾರ ಜನರ ಮತ್ತು ಪರಿಸರದ ಪರವಾಗಿಲ್ಲ. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಲು ತೀವ್ರ ತೊಂದರೆಯಾಗಲಿದೆ ಎಂದಿದ್ದಾರೆ.

‘ಶರಾವತಿಯಿಂದ ಬೆಂಗಳೂರಿಗೆ ನೀರು ಪೂರೈಸುವ ಯೋಜನೆ ರೂಪಿಸುತ್ತಿರುವ ಸರ್ಕಾರ, ಈ ಎರಡು ನದಿಗಳಿಗೆ ಸಂಬಂಧಿಸಿ ಕೈಗೊಂಡಿರುವ ನಿರ್ಧಾರ ವಿಪರ್ಯಾಸವೇ ಸರಿ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT