ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಕೀಲ ಪ್ರೀತಂ ಮೇಲೆ ಹಲ್ಲೆ: ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಹೈಕೋರ್ಟ್

Published 1 ಡಿಸೆಂಬರ್ 2023, 16:13 IST
Last Updated 1 ಡಿಸೆಂಬರ್ 2023, 16:13 IST
ಅಕ್ಷರ ಗಾತ್ರ

ಬೆಂಗಳೂರು: ‘ಚಿಕ್ಕಮಗಳೂರಿನ ವಕೀಲ ಪ್ರೀತಂ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಆರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಅಡ್ವೊಕೇಟ್ ಜನರಲ್ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ವಕೀಲ ಪ್ರೀತಂ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಬೆಂಗಳೂರಿನ ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಸಲ್ಲಿಸಿದ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣವನ್ನಾಗಿಸಿ ದಾಖಲಿಸಿಕೊಂಡಿತು.

ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ತಕ್ಷಣದ ವಿಚಾರಣೆಯನ್ನೂ ನಡೆಸಿತು.

‘ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ವಿಶಾಲ್ ರಘು ಮತ್ತು ಕಾರ್ಯದರ್ಶಿಯೂ ಆದ ಹೈಕೋರ್ಟ್‌ನ ಹಿರಿಯ ವಕೀಲ ಎಸ್. ಬಸವರಾಜ ಅವರು ವಕೀಲರ ಮೇಲಿನ ದೌರ್ಜನ್ಯ ನಿಷೇಧ ಮಸೂದೆಯು ಸಕ್ಷಮ ಪ್ರಾಧಿಕಾರದ ಮುಂದೆ ಪರಿಗಣನೆಗೆ ಬಾಕಿ ಇದೆ ಎಂದು ತಿಳಿಸಿದ್ದಾರೆ. ಹೀಗಾಗಿ, ಈ ಹಂತದಲ್ಲಿ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲು ಅಥವಾ ಯಾವುದೇ ನಿರ್ದೇಶನ ನೀಡುವುದಿಲ್ಲ’ ಎಂದ ನ್ಯಾಯಪೀಠ ವಿಚಾರಣೆಯನ್ನು ಇದೇ 5ಕ್ಕೆ ಮುಂದೂಡಿದೆ.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್. ಹಿತೇಂದ್ರ ಹಾಜರಿದ್ದರು. ವಿವೇಕ್ ರೆಡ್ಡಿ ಚಿಕ್ಕಮಗಳೂರಿನ ಪ್ರತಿಭಟನಾ ಸ್ಥಳದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು.

ಎ.ಜಿ.ಸಲ್ಲಿಸಿದ ಮೆಮೊ:

‘ವಕೀಲ ಪ್ರೀತಂ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದ್ದು, ಐಪಿಸಿ ಕಲಂ 506, 341, 307, 324, 326 ಮತ್ತು 504ರ ಜೊತೆಗೆ 149ರ ಅಡಿಯಲ್ಲಿ ಚಿಕ್ಕಮಗಳೂರು ಟೌನ್ ಠಾಣೆಯಲ್ಲಿ ಡಿಸೆಂಬರ್ 1ರ ಮಧ್ಯರಾತ್ರಿ ಪ್ರಕರಣ ದಾಖಲಿಸಲಾಗಿದೆ. ಕರ್ತವ್ಯ ಲೋಪದಡಿ ಆರು ಮಂದಿ ಪೊಲೀಸರನ್ನು ಡಿಸೆಂಬರ್ 1ರಂದು ಅಮಾನತು ಮಾಡಲಾಗಿದೆ’ ಎಂದು ಅಡ್ವೊಕೇಟ್ ಜನರಲ್ ನ್ಯಾಯಪೀಠಕ್ಕೆ ಸಲ್ಲಿಸಿರುವ ಮೆಮೊದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT